ವೈದ್ಯಕೀಯ ಶಿಕ್ಷಣ ಶುಲ್ಕವನ್ನು ಮೂರು ಪಟ್ಟು ಹೆಚ್ಚಿಸಿದ ಸರ್ಕಾರ
ಬೆಂಗಳೂರು, ಡಿಸೆಂಬರ್ 18 : ಕರ್ನಾಟಕ ಸರ್ಕಾರ ವೈದ್ಯಕೀಯ ಶಿಕ್ಷಣ ಶುಲ್ಕವನ್ನು ಮೂರು ಪಟ್ಟು ಹೆಚ್ಚಳ ಮಾಡಿದೆ. ಅನಿವಾಸಿ ಭಾರತೀಯ ಕೋಟಾವನ್ನು ಸಹ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಬೆಳಗಾವಿಯಲ್ಲಿ ಮಂಗಳವಾರ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶುಲ್ಕ ಹೆಚ್ಚಳದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕಗಳು ಮೂರುಪಟ್ಟು ಹೆಚ್ಚಳವಾಗಿದೆ.
ಎಂಬಿಬಿಎಸ್ ಶುಲ್ಕವನ್ನು 17 ಸಾವಿರದಿಂದ 50 ಸಾವಿರಕ್ಕೆ. ಸ್ನಾತಕೋತ್ತರ ಪದವಿ ಶುಲ್ಕವನ್ನು 50 ಸಾವಿರದಿಂದ 3 ಲಕ್ಷದ ತನಕ ಹೆಚ್ಚಳ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, 'ಸರ್ಕಾರಿ ಕೋಟಾದಡಿ ಇರುವ ಸೀಟುಗಳನ್ನು ಹೆಚ್ಚಿಸಲಾಗುತ್ತದೆ. ಅನಿವಾಸಿ ಭಾರತೀಯ ಕೋಟವಾವನ್ನು ಸರ್ಕಾರಿ ಕಾಲೇಜಿನಲ್ಲಿ ನೀಡುತ್ತೇವೆ. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಹಣ ಬರುತ್ತದೆ. ಈ ಹಣದಿಂದ ವೈದ್ಯಕೀಯ ಕಾಲೇಜು ಸಿಬ್ಬಂದಿ ವೇತನವನ್ನು ಸಹ ಹೆಚ್ಚಳ ಮಾಡಬಹುದು' ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರು, 'ಖಾಸಗಿ ಕಾಲೇಜುಗಳಿಗೆ ಹೋಲಿಕೆ ಮಾಡಿದರೆ ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕ ಬಹಳ ಕಡಿಮೆ ಇದೆ. ಸರ್ಕಾರ ಪ್ರತಿ ವಿದ್ಯಾರ್ಥಿ ಮೇಲೆ ಸುಮಾರು 10 ಲಕ್ಷ ವೆಚ್ಚ ಮಾಡುತ್ತದೆ. ಆದರೆ, ವಾರ್ಷಿಕ 16 ಸಾವಿರ ರೂ. ಮಾತ್ರ ವಿದ್ಯಾರ್ಥಿಗಳು ಪಾವತಿ ಮಾಡುತ್ತಾರೆ' ಎಂದು ಹೇಳಿದ್ದರು.












Click it and Unblock the Notifications