BS Yediyurappa: ಪೋಕ್ಸೊ ಕೇಸ್; ಮಾಜಿ ಸಿಎಂ ಬಿಎಸ್‌ವೈ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ವಿರುದ್ಧದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಹೈಕೋರ್ಟ್ ನಡೆಸಿದ್ದು ತೀರ್ಪನ್ನು ಕಾಯ್ದಿರಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಎಸ್ ಯಡಿಯೂರಪ್ಪ ಖುದ್ದು ಹಾಜರಿಗೆ ನೀಡಿದ್ದ ವಿನಾಯಿತಿಯನ್ನು ವಿಸ್ತರಿಸುವ ಮೂಲಕ ಬಿಗ್ ರಿಲೀಫ್ ನೀಡಿದೆ.
ತಮ್ಮ ವಿರುದ್ಧ ದೂರು ಕೊಟ್ಟಿದ್ದವರು ಮೃತಪಟ್ಟ ನಂತರ ತಮ್ಮ ಅರ್ಜಿಯ ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂದು ತಮ್ಮ ವಿರುದ್ಧ ಮಾಡಿದ್ದ ಆರೋಪವನ್ನು ಬಿಎಸ್‌ವೈ ಪರ ವಕೀಲ ಸಿ.ವಿ ನಾಗೇಶ್ ನಿರಾಕರಿಸಿದ್ದಾರೆ. ಅರ್ಜಿದಾರರು ಯಾವಾಗ ಸಾಯುತ್ತಾರೆ ಎಂದು ಮೊದಲೇ ಊಹಿಸಲು ನಾನು ಜಾದೂಗಾರನಲ್ಲ ಎಂದು ವಾದಿಸಿದ್ದಾರೆ.

ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಬಿಎಸ್‌ವೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ಪ್ರಾಸಿಕ್ಯೂಷನ್ ಪರ ರವಿವರ್ಮಕುಮಾರ್ ವಾದ ಮಂಡಿಸಿದ್ದು ಬಿಎಸ್‌ವೈ ಅವರ ಮನೆಯ ಎಂಟ್ರಿ ರಿಜಿಸ್ಟರ್ ಅನ್ನು ತಿರುಚಲಾಗಿದೆ ಎಂದು ಆರೋಪಿಸಿದರು. ಬಾಲಕಿ ಮತ್ತು ಶಿವಾನಂದ ತಗಡೂರು ಬಂದ ಸಮಯವನ್ನು ಬದಲಿಸಲಾಗಿದೆ. ಆರೋಪಿಗಳು ಪಿರ್ಯಾದಿ ಫೇಸ್‌ಬುಕ್‌ನಿಂದ ವಿಡಿಯೋವನ್ನು ಡಿಲೀಟ್ ಮಾಡಿಸಿದ್ದಾರೆ ಎಂದು ವಾದಿಸಿದರು.
ಏನಿದು ಪ್ರಕರಣ?
ಬಿಎಸ್ ಯಡಿಯೂರಪ್ಪನವರು 2024ರ ಫೆಬ್ರವರಿಯಲ್ಲಿ ತಮ್ಮ ನಿವಾಸದಲ್ಲಿ 17 ವರ್ಷದ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ ಬಳಿಕ ಈ ಪ್ರಕರಣ ದಾಖಲಾಗಿತ್ತು. 2024ರ ಮಾರ್ಚ್ 14ರಂದು ಸದಾಶಿವನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್ ದಾಖಲಿಸಿದ್ದರು. ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು, ತನಿಖೆ ನಡೆಸಿದ ಸಿಐಡಿ ಆರೋಪಪಟ್ಟಿ ಸಲ್ಲಿಸಿತ್ತು.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಎಫ್‌ಐಆರ್ ಮೂಲಭೂತವಾಗಿ ದೂರುದಾರರ ಹೇಳಿಕೆಯಾಗಿದೆ ಎನ್ನುವ ವಿಚಾರವನ್ನು ಗಮನಿಸಿದರು. ಎರಡೂ ಕಡೆಯವರು ಉಲ್ಲೇಖಿಸಿರುವ ಕಾನೂನು ಪೂರ್ವನಿದರ್ಶನಗಳನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪೋಕ್ಸೊ ಕಾಯ್ದೆಯ ಸೆಕ್ಷನ್ 29 ಮತ್ತು 30 ರ ಅನ್ವಯಿಕೆ ಪ್ರಕಾರ ಅದು ಬೇರೆ ರೀತಿಯಲ್ಲಿ ಸಾಬೀತಾಗದ ಹೊರತು ಆರೋಪಿಯನ್ನು ತಪ್ಪಿತಸ್ಥನೆಂದು ಭಾವಿಸುತ್ತದೆ. ಈ ನಿಬಂಧನೆಗಳು ಯಡಿಯೂರಪ್ಪನವರ ಮೇಲೆ ಪುರಾವೆಯ ಹೊರೆಯನ್ನು ಹೇರುತ್ತವೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ವಾದಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿವಿ ನಾಗೇಶ್ ಅಂತಹ ಊಹೆಗಳು ವಿಚಾರಣೆಯ ಸಮಯದಲ್ಲಿ ಮಾತ್ರ ಅನ್ವಯಿಸುತ್ತವೆ ಮತ್ತು ಎಫ್‌ಐಆರ್ ಅಥವಾ ಚಾರ್ಜ್‌ಶೀಟ್ ಅನ್ನು ರದ್ದುಗೊಳಿಸುವ ಹಂತದಲ್ಲಿ ಅಲ್ಲ ಎಂದು ವಾದಿಸಿದರು.
ಫೆಬ್ರವರಿ 5ರಂದು ದೂರುದಾರರು ಮತ್ತು ಅವರ ಮಗಳು ಯಡಿಯೂರಪ್ಪ ಅವರನ್ನು ಮತ್ತೆ ಭೇಟಿಯಾಗಿದ್ದಾರೆ ಎಂದು ಸಿವಿ ನಾಗೇಶ್ ವಾದಿಸಿದರು. ಬಿಎಸ್‌ವೈ ವಿರುದ್ಧ ಆರೋಪ ಮಾಡಿದ ಬಳಿಕ ಮತ್ತೊಂದು ಕಾನೂನು ಪ್ರಕರಣದಲ್ಲಿ ಸಹಾಯ ಪಡೆಯುವುದು ಅವರ ಉದ್ದೇಶವಾಗಿತ್ತು ಎಂದರು.
ಬಿಎಸ್‌ವೈ ಜೊತೆ ಮಾತನಾಡಿರುವುದನ್ನು ಸಂತ್ರಸ್ತರು ದಾಖಲಿಸಿದ್ದಾರೆ ಎಂದ ನ್ಯಾಯಪೀಠ, ಧ್ವನಿಮುದ್ರಣದ ವಿಷಯಗಳು ಗೊಂದಲಮಯವಾಗಿದ್ದು, ಎಲ್ಲಾ ಸಾಕ್ಷಿಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡುವ ಅಗತ್ಯವಿದೆ ಎಂದು ಹೇಳಿದೆ. ವಾದವನ್ನು ಆಲಿಸಿದ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದ್ದು ಅಂತಿಮ ತೀರ್ಪು ನೀಡುವವರೆಗೆ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿದೆ.












Click it and Unblock the Notifications