ವೈದ್ಯ ಸೀಟು ವಂಚಿತನಾದ ವಿದ್ಯಾರ್ಥಿಯ ಕೈಹಿಡಿಯದ ಹೈಕೋರ್ಟ್
ಬೆಂಗಳೂರು, ಏ.11. ಇದು ವೈದ್ಯಕೀಯ ವಿದ್ಯಾರ್ಥಿ ತನ್ನ ತಪ್ಪಿನಿಂದಾಗಿ ಸಿಕ್ಕಿದ್ದ ಸೀಟು ಕೈ ಬಿಟ್ಟು ನಂತರ ಹೈಕೋರ್ಟ್ ಮೊರೆ ಹೋದ ಕತೆ.
ಆದರೆ ನ್ಯಾಯಾಲಯವೂ ಕೂಡ ನಿಯಮದ ಕಾರಣಗಳಿಂದಾಗಿ ಆತನ ಕೈ ಹಿಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ಆತನಿಗೆ ಕೈಗೆ ಬಂದ ತುತ್ತು ಬಾಯಿಗೆ ಸೇರದಂತಾಗಿ ಅತ್ತಲೂ ಇಲ್ಲದ ಇತ್ತಲೂ ಇಲ್ಲದ ಅತಂತ್ರ ಸ್ಥಿತಿ ತಲುಪಿದ್ದಾನೆ.
ಕಲಬುರಗಿಯ ಚಿತ್ತಾಪುರ ತಾಲೂಕಿನ ಕಳಗಿ ಗ್ರಾಮದ ವೈದ್ಯ ವಿದ್ಯಾರ್ಥಿ ಕಾಳಿಂಗ ಪೊಲೀಸ್ ಪಾಟೀಲ ತನಗೆ ಸೀಟು ಆಯ್ಕೆಗೆ ಮಾಪ್ ಅಪ್ ಸುತ್ತಿನ ಪ್ರವೇಶಕ್ಕೆ ಅನುಮತಿ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಆತನ ಅರ್ಜಿಯನ್ನು ಆಲಿಸಿದ ನ್ಯಾ. ಅಲೋಕ್ ಅರಾಧೆ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ.

ಆತ ಕಲಬುರಗಿಯ ಕೆಬಿಎನ್ ವೈದ್ಯಕೀಯ ವಿಜ್ಞಾನಗಳ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆಯಲು ಬಯಸಿದ್ದರು. ಆದರೆ ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಸೀಟು ದೊರೆಕಿತ್ತು, ಆದರೆ ಅದನ್ನು ಆತ ಪಡೆದಿಲ್ಲ. ಮಾಪ್ ಅಪ್ ರೌಂಡ್‌ನಲ್ಲಿ ಬೇರೆ ಕಾಲೇಜು ಸಿಗುತ್ತದೆ ಎಂದುಕೊಂಡಿದ್ದನು. ಆದರೆ ಆ ಸುತ್ತಿನ ಪ್ರವೇಶದ ಅರ್ಹತೆಯನ್ನೇ ಕಳೆದುಕೊಂಡಿದ್ದಾನೆ. ಹಾಗಾಗಿ ಈಗ ಆ ವಿದ್ಯಾರ್ಥಿಯ ಸ್ಥಿತಿ ಅತಂತ್ರವಾಗಿದೆ.
ನ್ಯಾಯಾಲಯದ ಆದೇಶವೇನು?: ''2006ರ ವೃತ್ತಿಪರ ಶಿಕ್ಷಣ ಸಂಸ್ಥೆಗಳ ನಿಯಮದಡಿ ಸರಕಾರಿ ಸೀಟುಗಳಿಗೆ ಕರ್ನಾಟಕ ಅಭ್ಯರ್ಥಿಗಳ ಆಯ್ಕೆಯ ನಿಯಮ 10ರ ಪ್ರಕಾರ ಅಭ್ಯರ್ಥಿಗಳಿಗೆ ಮೊದಲ ಅಥವಾ ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿ ಸೀಟು ಆಯ್ಕೆ ಮಾಡಿಕೊಂಡರೆ ಅಂತಹ ಅಭ್ಯರ್ಥಿ ಮಾಪ್ ಅಪ್ ಸುತ್ತಿಗೆ ಅರ್ಹರಲ್ಲ. ಹಾಗಾಗಿ ಅರ್ಜಿದಾರರ ಮನವಿ ಮಾನ್ಯ ಮಾಡಲಾಗದು" ಎಂದು ನ್ಯಾಯಾಲಯ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಅಭ್ಯರ್ಥಿಗೆ ಮೊದಲ ಸುತ್ತಿನಲ್ಲೇ ಸೀಟು ಆಯ್ಕೆಯಾಗಿರಲಿಲ್ಲ. ಎರಡನೇ ಸುತ್ತಿನಲ್ಲಿ 2022ರ ಮಾ.8ರಂದು ಎನ್ ಆರ್ ಐ ಕ್ಯಾಟಗರಿ ಅಡಿ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ವಿಜ್ಞಾನಗಳ ಕಾಲೇಜಿನಲ್ಲಿ ಸೀಟು ಹಂಚಿಕೆಯಾಗಿತ್ತು. ಜೊತೆಗೆ ತಾನು ಎರಡನೇ ಸುತ್ತಿನಲ್ಲಿ ಸೀಟು ಅಯ್ಕೆ ಮಾಡಿಕೊಂಡರೂ ತಮ್ಮ ಮುಂದಿನ ಸುತ್ತಿನ ಕೌನ್ಸೆಲಿಂಗ್ ನಲ್ಲಿ ಭಾಗವಹಿಸುವ ಅರ್ಹತೆ ಹಾಗೆ ಇರುತ್ತದೆ ಎಂದುಕೊಂಡಿದ್ದನು. ಮಾ.12ರಂದು ಸೀಟು ವಾಪಸ್ ನೀಡಲು ಅನುಮತಿ ನೀಡಲಾಗಿತ್ತು.
ಅದರೆ, ಮಾ.16ರಂದು ಮನವಿ ಸಲ್ಲಿಸಿದ ಅಭ್ಯರ್ಥಿ, ಹಣಕಾಸು ತೊಂದರೆ ಮತ್ತು ನಾನು ಸಂಸ್ಥೆಯಲ್ಲಿ ಪ್ರವೇಶ ನೋಂದಣಿ ಮಾಡಿಕೊಂಡಿಲ್ಲ ಮತ್ತು ತಾಂತ್ರಿಕ ತೊಂದರೆಯಿಂದಾಗಿ ನನಗೆ ಹಂಚಿಕೆಯಾಗಿದ್ದ ಸೀಟ್ ಬ್ಲಾಕ್ ಆಗಿದ್ದು, ಅದನ್ನು ತಮಗೆ ನೀಡಬೇಕು, ಇಲ್ಲವೇ ಮಾಪ್ ಅಪ್ ಸುತ್ತಿನಲ್ಲಿ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಕೋರಿದ್ದರು.
ಆದರೆ ಕೆಇಎ ಮಾ.17ರಂದು ಆತನ ಮನವಿ ತಿರಸ್ಕರಿಸಿ, ಅರ್ಜಿದಾರರಿಗೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿದೆ. ನಿಯಮದಂತೆ ಮೊದಲ ಒಂದು ಅಥವಾ ಎರಡನೇ ಸುತ್ತಿನಲ್ಲಿ ಸೀಟು ಆಯ್ಕೆಯಾದರೆ ಮಾಪ್ ಅಪ್ ಸುತ್ತಿನಲ್ಲಿ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಆದೇಶ ನೀಡಿತ್ತು.ಅದನ್ನು ಪ್ರಶ್ನಿಸಿ ಆ ವಿದ್ಯಾರ್ಥಿ ನ್ಯಾಯಾಲಯದ ಮೊರೆ ಹೋಗಿದ್ದನು.












Click it and Unblock the Notifications