ನೇಕಾರ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪನೆಗೆ ನಿರ್ಧಾರ: ಬೊಮ್ಮಾಯಿ
ಕರ್ನಾಟಕ ಸರ್ಕಾರ ವತಿಯಿಂದ ನೇಕಾರರ ಅಭಿವೃದ್ಧಿಗಾಗಿ ವಿಶೇಷವಾದ ನೇಕಾರರ ನಿಗಮ ಸ್ಥಾಪನೆಗೆ, ನೀರಾವರಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.
ಬಾಗಲಕೋಟೆ, ಫೆಬ್ರವರಿ 26 : ಕರ್ನಾಟಕ ಸರ್ಕಾರ ವತಿಯಿಂದ ನೇಕಾರರ ಅಭಿವೃದ್ಧಿಗಾಗಿ ವಿಶೇಷವಾದ ನೇಕಾರರ ನಿಗಮ ಸ್ಥಾಪನೆಗೆ ತೀರ್ಮಾನಿಸಲಾಗುವುದು. ಈ ಬಗ್ಗೆ ಶೀಘ್ರವೇ ಕೈಗೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಅವರು ಮಾತನಾಡಿದರು. ನೇಕಾರ ಸಮುದಾಯದವರಿಗೆ ನೇಕಾರ ಸಮ್ಮಾನ್ ಯೋಜನೆಯಡಿ 5 ಸಾವಿರ ರೂ. ಸಹಾಯಧನ ಏರಿಕೆ ಮಾಡಲಾಗಿದೆ. ಈಗಾಗಲೇ 51 ಕೋಟಿ ರೂ. ವೆಚ್ಚದಲ್ಲಿ 1.50 ಲಕ್ಷ ನೇಕಾರರಿಗೆ ನೇಕಾರ ಸಮ್ಮಾನ ಯೋಜನೆಯನ್ನು ಡಿಬಿಟಿ ಮೂಲಕ ವಿತರಿಸಲಾಗಿದೆ. ಇನ್ನು ಮಗ್ಗ ಸ್ಥಾಪನೆಗೆಂದು ರೂಪಾಯಿ ಎರಡು ಲಕ್ಷ ವರೆಗೆ ಸಹಾಯಧನ, 5 ಎಚ್‌ಪಿ ವರೆಗೆ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಇನ್ನೂ ಈ ಜಿಲ್ಲಾ ವ್ಯಾಪ್ತಿಯ ಭಾಗದಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಬಗ್ಗೆ ಬೇಡಿಕೆ ಇದೆ. ರಾಜ್ಯದಲ್ಲಿ 25 ಜವಳಿ ಪಾರ್ಕ್ ಸ್ಥಾಪಿಸುವ ಯೋಚನೆ ಸರ್ಕಾರದ ಮುಂದಿದೆ. ಜವಳಿ ಪಾರ್ಕ್ ಅನ್ನು ಸ್ಥಾಪಿಸುವ ಸ್ಥಳದ ಪಟ್ಟಿಯಲ್ಲಿ ತೇರದಾಳವೂ ಇರಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಏತನೀರಾವರಿ ಯೋಜನೆ ಕಾಮಗಾರಿ ಪ್ರಾರಂಭ
ಸಸಾಲಟ್ಟಿ, ಕೆರೂರು, ರೇವಣಸಿದ್ಧೇಶ್ವರ, ಅನಿವಾಳ ಏತ ನೀರಾವರಿ ಯೋಜನೆಗಳಿಗೆ ಮಂಜೂರಾತಿ ನೀಡಿ, ಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಸಸಾಲಟ್ಟಿ ಏತನೀರಾವರಿ ಯೋಜನೆಯನ್ನು 443 ಕೋಟಿ ರೂ. ವೆಚ್ಚದಲ್ಲಿ 33 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಹಾಗೂ ತೇರದಾಳ ತಾಲ್ಲೂಕು, ಬನಹಟ್ಟಿಯ 11 ಗ್ರಾಮಗಳಿಗೆ ಯೋಜನೆಯ ಲಾಭ ಪಡೆಯಲಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಗೆ ಧಾರಣೆ ನಿಗದಿಗೊಳಿಸಲು ಕ್ರಮ ಕೈಗೊಳ್ಳಲಾಯಿತು. ರೈತರಿಂದ ಭೂಸ್ವಾಧೀನಕ್ಕೆ ಏಕಸ್ವಾಮ್ಯದ ದರ ನಿಗದಿ ಮಾಡಲಾಗಿದೆ. ಅನುದಾನವನ್ನು ಈ ವರ್ಷ ಮೀಸಲಿರಿಸಿದೆ. ಯೋಜನೆಗೆ ಸಂಬಂಧಪಟ್ಟ ತೀರ್ಪು ಸಧ್ಯದಲ್ಲಿಯೇ ಬರಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಬೊಮ್ಮಾಯಿ ವಿವರಿಸಿದರು.

ಕೃಷಿ - ನೇಕಾರಿಕೆಗೆ ಸರ್ಕಾರದ ಆದ್ಯತೆ
ಈ ವರ್ಷ ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿದರದ ಸಾಲವನ್ನು 5 ಲಕ್ಷಕ್ಕೆ ಏರಿಕೆ, ಆವರ್ತ ನಿಧಿ ಹೆಚ್ಚಿಸುವ ಮೂಲಕ ಎಲ್ಲ ವರ್ಗದ ಜನರ ಶ್ರೇಯೋಭಿವೃದ್ಧಿಯ ಗುರಿಯನ್ನು ಸರ್ಕಾರ ಹೊಂದಿದೆ .ರೈತ ಹೆಣ್ಣುಮಕ್ಕಳಿಗೆ 1000 ರೂ. ನೀಡುವ ಗೃಹಿಣಿ ಶಕ್ತಿ ಯೋಜನೆ ರೂಪಿಸಲಾಗಿದೆ.ದುಡಿಯುವ ವರ್ಗಕ್ಕೆ ಮನ್ನಣೆ ನೀಡಲಾಗಿದೆ. ಈ ಪ್ರದೇಶದಲ್ಲಿ ಕೃಷಿ ಮತ್ತು ನೇಕಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿಯಡಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೈಗೊಳ್ಳಲಾಗುವುದು. ಸಮಗ್ರ ಬಾಗಲಕೋಟೆಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ವಿವಿಧ ನೀರಾವರಿ ಯೋಜನೆಗಳಿಗೆ ಚಾಲನೆ
ಈ ಭಾಗದ ಜನರು ಪ್ರಮಾಣಿಕ ಹಾಗೂ ಕಾಯಕವನ್ನು ನಂಬಿರುವ ಜನ. ಸ್ವಾತಂತ್ರ್ಯಾನಂತರ ಬಾಗಲಕೋಟೆ ಮತ್ತು ವಿಜಯಪುರ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಯಿತು. ಕುಡಿಯುವ ನೀರಿನ ವಿಚಾರದಲ್ಲಿ ಈ ಜಿಲ್ಲೆಗಳಿಗೆ ಅನ್ಯಾಯವಾಗಿರುವುದು ಸತ್ಯ. ಈ ಹಿನ್ನಡೆ ಸರಿಪಡಿಸಿ ಇಲ್ಲಿ ಸಮಗ್ರ ಅಭಿವೃದ್ಧಿ ಆಗಬೇಕೆಂಬ ಉದ್ದೇಶದಿಂದಲೇ ಈ ಭಾಗದ ಎಲ್ಲ ಯೋಜನೆಗಳಿಗೆ ಚಾಲನೆ ನೀಡಿ ಅನುದಾನ ಒದಗಿಸಲಾಗಿದೆ. ಈ ಭಾಗದ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಲಾಗಿದೆ. ನಾನು ನೀರಾವರಿ ಸಚಿವನಾಗಿದ್ದಾಗ ಮುಳವಾಡಿ, ಚಿಮ್ಮಲಗಿ , ಗುತ್ತಿಬಸವಣ್ಣ ಏತನೀರಾವರಿ ಯೋಜನೆಗಳು ಸ್ಕೀಂ ಬಿ ಎಂದು ನೆನೆಗುದಿಗೆ ಬಿದ್ದಿದ್ದವು , ಅವುಗಳನ್ನು ಕಾರ್ಯಗತಗೊಂಡಿವೆ ಎಂದು ಹೇಳಿದರು.

ಕೃಷ್ಣೆ ಮೇಲೆ ಆಣೆ ಇಟ್ಟು ಸುಳ್ಳು ಹೇಳಿದರು
ಕೃಷ್ಣೆ ಮೇಲೆ ಆಣೆ ಎಂದು ಹೇಳಿ, 5 ವರ್ಷದಲ್ಲಿ 50 ಸಾವಿರ ಕೋಟಿ ನೀಡಿ ಕೃಷ್ಣಾ ಜಲಾನಯನ ಪ್ರದೇಶದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಕೆಲವರು ಸುಳ್ಳು ಹೇಳಿದರು. ನಾನು ಮುಖ್ಯಮಂತ್ರಿಯಾದ ತಕ್ಷಣ ರೈತ ವಿದ್ಯಾನಿಧಿ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ವೇತನ ಹೆಚ್ಚಿಸಲಾಯಿತು. ವಿದ್ಯಾರ್ಥಿನಿಯರಿಗೂ ರೈತ ವಿದ್ಯಾನಿಧಿ ನೀಡಲಾಗುತ್ತಿದೆ. ಈ ವರ್ಷ ಬಜೆಟ್ ನಲ್ಲಿ ಪಿಯುಸಿಯಿಂದ ಪದವಿವರೆಗೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡುವ ನಿರ್ಣಯವನ್ನು ಮಾಡಲಾಗಿದೆ. ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದೇ ರಾಜ್ಯ ಸರ್ಕಾರದ ಮುರ್ಖಯ ಉದ್ದೇಶ ಎಂದರು.

ಸ್ತ್ರೀಯರಿಗೆ ಯೋಜನೆ ಘೋಷಿಸಿದ ಸರ್ಕಾರ
ಸ್ತ್ರೀಸಾಮರ್ಥ್ಯ ಯೋಜನೆಯಡಿ ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಆರ್ಥಿಕ ಸಹಾಯ, ಪೂರಕ ಯೋಜನೆ, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ನೀಡುವ ಮೂಲಕ ಸ್ವಯಂ ಉದ್ಯೋಗ ನೀಡಲಾಗುತ್ತಿದೆ. ಸರಿಸುಮಾರು 3 ಲಕ್ಷ ಮಹಿಳೆಯರು ಇದರ ಅನುಕೂಲತೆ ಪಡೆಯುತ್ತಿದ್ದಾರೆ. ಇದೇ ರೀತಿಯ ಯೋಜನೆಯನ್ನು ಪ್ರತಿ ಗ್ರಾಮ ಎರಡು ಯುವಶಕ್ತಿ ಸಂಘದ ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಜಾರಿಗೆ ತರಲಾಗುತ್ತಿದೆ. ಎಸ್‌ಸಿ, ಎಸ್‌ಟಿ ವರ್ಗದವರಿಗೆ 75 ಯೂನಿಟ್ ಉಚಿತ ವಿದ್ಯುತ್, ಭೂಮಿ ಖರೀದಿಗೆ ಸಹಾಯಧನ, ಡಾ.ಬಿ.ಆರ್ ಅಂಬೇಡ್ಕರ್ ಅವರ ಹೆಸರಿನಲ್ಲಿ 100 ಹಾಸ್ಟೆಲ್ ನಿರ್ಮಾಣ ಮಾಡಲಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.











Click it and Unblock the Notifications