ಸಚಿವರ ಕಚೇರಿ, ನಿವಾಸಗಳಿಗಾಗಿ 7.64 ಕೋಟಿ ವೆಚ್ಚ
ಬೆಂಗಳೂರು, ನವೆಂಬರ್ 21 : ರಾಜ್ಯದ ಸಚಿವರ ಕಚೇರಿ ಮತ್ತು ಸರ್ಕಾರಿ ನಿವಾಸಗಳ ದುರಸ್ತಿ, ನವೀಕರಣ ಹಾಗೂ ಪೀಠೋಪಕರಣಗಳಿಗಾಗಿ ಸರ್ಕಾರ 7.64 ಕೋಟಿ ವೆಚ್ಚ ಮಾಡಿದೆ. 2014ರ ಜನವರಿಯಿಂದ ಇಲ್ಲಿಯ ತನಕ ಇಷ್ಟು ಹಣವನ್ನು ಖರ್ಚು ಮಾಡಲಾಗಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಶಾಸಕ ಕೆ. ಗೋಪಾಲಯ್ಯ (ಜೆಡಿಎಸ್) ಪ್ರಶ್ನೆಗೆ ವಿಧಾನಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹಾದೇವಪ್ಪ ಅವರು ಈ ಕುರಿತು ಉತ್ತರ ನೀಡಿದ್ದಾರೆ. ಅತ್ಯಾವಶಕ ಕಾಮಗಾರಿಗಳನ್ನು ಮಾತ್ರ ವೆಚ್ಚವನ್ನು ಮಿತಿಗೊಳಿಸಿ ನಿರ್ವಹಿಸಲಾಗಿರುತ್ತದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ. [ಲೋಕಾ ಪದಚ್ಯುತಿ ನಿರ್ಣಯ ಸೋಮವಾರ ಮಂಡನೆ]

ಎಷ್ಟು ಖರ್ಚು? : 2014ರ ಜನವರಿಯಿಂದ 2015ರ ನವೆಂಬರ್ ತನಕ ಸಚಿವರ ಕಚೇರಿ ಹಾಗೂ ಅಧಿಕೃತ ನಿವಾಸಗಳ ದುರಸ್ತಿ/ಅಭಿವೃದ್ಧಿ/ನವೀಕರಣ ಹಾಗೂ ಪೀಠೋಪಕರಣಗಳಿಗಾಗಿ 7.64 ಲಕ್ಷ ರೂ. ಗಳನ್ನು ಸರ್ಕಾರ ವೆಚ್ಚ ಮಾಡಿದೆ. [ಸಚಿವರ ನಿವಾಸ ನವೀಕರಣಕ್ಕೆ ಕೋಟಿ-ಕೋಟಿ ಖರ್ಚು]
ಸಚಿವರ ಕಚೇರಿಗಳ ದುರಸ್ತಿ/ಅಭಿವೃದ್ಧಿ/ನವೀಕರಣಕ್ಕಾಗಿ ರೂ. 1.41 ಕೋಟಿ, ಕಚೇರಿಗಳಿಗೆ ಒದಗಿಸಲಾದ ಪೀಠೋಪಕರಣಗಳಿಗಾಗಿ ರೂ. 1.26 ಕೋಟಿ, ನಿವಾಸಗಳ ದುರಸ್ತಿ/ಅಭಿವೃದ್ಧಿ/ನವೀಕರಣಕ್ಕಾಗಿ 3.75 ಕೋಟಿ ರೂ. ಮತ್ತು ನಿವಾಸಗಳ ಪೀಠೋಪಕರಣಗಳಿಗೆ 1.20 ಕೋಟಿ ವೆಚ್ಚ ಮಾಡಲಾಗಿದೆ.
ಅಂದಹಾಗೆ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ ಕೃಷ್ಣ, ಕಾವೇರಿ ಗೃಹಗಳಿಗೆ ಬೆಡ್‍ಶೀಟ್, ಪಿಲ್ಲೋ, ಟವಲ್, ಕಾಲು ಚೀಲ, ಕುಷನ್ ಕವರ್‌ಗಳಿಗಾಗಿ ಬರೋಬ್ಬರಿ 14 ಲಕ್ಷ 34 ಸಾವಿರ ರೂಪಾಯಿ ಖರ್ಚು ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗವಾಗಿತ್ತು.











Click it and Unblock the Notifications