ರಾಜ್ಯದ ದೇವಾಲಯಗಳ ಪ್ರಸಾದ ಭಕ್ತರ ಮನೆ ಬಾಗಿಲಿಗೆ, ಯೋಜನೆ ವಿವರ
ಬೆಂಗಳೂರು, ಮಾರ್ಚ್ 29: ಕರ್ನಾಟಕದ ವಿವಿಧ ದೇವಾಲಯಗಳ ಭಕ್ತರಿಗೆ ಸಿಹಿಸುದ್ದಿಯೊಂದಿದೆ. ಇನ್ನು ಮುಂದೆ ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದಗಳು ಭಕ್ತರ ಮನೆ ಬಾಗಿಲಿಗೆ ಬರಲಿದೆ. ಇದಕ್ಕಾಗಿಯೇ ಕರ್ನಾಟಕ ಸರ್ಕಾರ ದೇವಾಲಯಗಳಿಂದ ಪ್ರಸಾದವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ಪಡೆಯಲು ಇ-ಪ್ರಸಾದ ವೆಬ್‌ಸೈಟ್ ಮೂಲಕ ಅನುಕೂಲವನ್ನು ಕಲ್ಪಿಸಿದೆ. ಪ್ರಸ್ತುತ 14 ಪ್ರಮುಖ ದೇವಾಲಯಗಳ ಪ್ರವಾದವನ್ನು ಆನ್‌ಲೈನ್ ಮೂಲಕ ತರಿಸಿಕೊಳ್ಳುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ.
ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಇ-ಪ್ರಸಾದ ವೆಬ್‌ಸೈಟ್ ಮೂಲಕ ದೇವಾಲಯದ ಪ್ರಸಾದವನ್ನು ಮನೆಗೆ ತರಿಸಿಕೊಳ್ಳುವ ಸೇವೆಗೆ ಚಾಲನೆ ನೀಡಿದ್ದಾರೆ. ಸಚಿವರು ಮಾತನಾಡಿ, "ನಾನಾ ಕಾರಣಗಳಿಂದಾಗಿ ಎಲ್ಲರಿಗೂ ದೇವಾಲಯಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ವಯಸ್ಸಾದವರು, ವಿಶೇಷ ಚೇತನರು, ಒಬ್ಬಂಟಿಗಳು ಒಳಗೊಂಡಂತೆ ಗ್ರಾಮೀಣ, ನಗರ ಹಾಗೂ ಹೊರ ರಾಜ್ಯದ ಭಕ್ತಾದಿಗಳ ಅನುಕೂಲಕ್ಕಾಗಿ ಇ-ಪ್ರಸಾದ ಸೇವೆ ಆರಂಭಿಸಲಾಗಿದೆ" ಎಂದು ಹೇಳಿದ್ದಾರೆ.

"ರಾಜ್ಯದ ಯಾವುದೇ ಜಿಲ್ಲೆಯ ಭಕ್ತಾದಿಗಳು ಪ್ರಸಾದಕ್ಕೆ ಆರ್ಡರ್ ಮಾಡಿದರೆ ಸಿಎಸ್‌ಸಿ ಇ ಗವರ್ನೆನ್ಸ್ ಸಂಸ್ಥೆಯು ಮನೆ ಬಾಗಿಲಿಗೆ ದೇವಾಲಯದ ಪ್ರಸಾದವನ್ನು ತಲುಪಿಸಲಾಗುತ್ತದೆ. ಭಕ್ತರು ಈ ಸೇವೆಯ ಉಪಯೋಗ ಪಡೆದುಕೊಳ್ಳಬೇಕು" ಎಂದು ಮನವಿ ಮಾಡಿದರು.
ಯಾವ-ಯಾವ ದೇವಾಲಯಗಳು?; ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಡಿ ಇರುವ ದೇವಾಲಯಗಳ ಪೈಕಿ 'ಎ' ಮತ್ತು 'ಬಿ' ದರ್ಜೆಯ 390 ದೇವಾಲಯಗಳಿವೆ. ಭಕ್ತಾದಿಗಳು ಇ-ಪ್ರಸಾದ ವೆಬ್‌ಸೈಟ್ ಮೂಲಕ ಮೊದಲ ಹಂತದಲ್ಲಿ 14 ಪ್ರಮುಖ ದೇವಾಲಯಗಳಿಂದ ಪ್ರಸಾದವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ಮನೆಯಲ್ಲಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ.

* ಬೆಂಗಳೂರಿನ ಜಯನಗರ ವಿನಾಯಕ ಸ್ವಾಮಿ ದೇವಾಲಯ
* ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯ
* ನಂಜನಗೂಡು ಶ್ರೀಕಂಠೇಶ್ವರ ದೇವಾಲಯ
* ಮಾಲೂರು ವೆಂಕಟರಮಣ ಸ್ವಾಮಿ ದೇವಾಲಯ
* ಹಲಸೂರು ಸೋಮೇಶ್ವರ ಸ್ವಾಮಿ ದೇವಾಲಯ
* ಕೊಲ್ಲೂರು ಮೂಕಾಂಬಿಕಾ ದೇವಾಲಯ
* ಗವಿಗಂಗಾಧರೇಶ್ವರ ದೇವಾಲಯ, ಬೆಂಗಳೂರು
* ಶ್ರೀ ಕ್ಷೇತ್ರ ಝರಣಿ ನರಸಿಂಹ, ಬೀದರ್
* ರೇಣುಕಾ ಯಲ್ಲಮ್ಮ ದೇವಾಲಯ, ಬೆಳಗಾವಿ
* ಕುಕ್ಕೆ ಸುಬ್ರಮಣ್ಯ ದೇವಾಲಯ, ದಕ್ಷಿಣ ಕನ್ನಡ
* ಕನಕದುರ್ಗಮ್ಮ ದೇವಾಲಯ, ಬಳ್ಳಾರಿ
* ಮೈಲಾರಲಿಂಗೇಶ್ವರ ದೇವಾಲಯ, ವಿಜಯನಗರ
* ಹುಲಿಗೆಮ್ಮ ದೇವಾಲಯ, ಕೊಪ್ಪಳ
* ಗುರುದತ್ತಾತ್ರೇಯ ಸ್ವಾಮಿ ದೇವಾಲಯ, ಕಲಬುರಗಿ
ಸದ್ಯ 14 ದೇವಾಲಯಗಳನ್ನು ಇ-ಪ್ರಸಾದ ವೆಬ್‌ಸೈಟ್ ಮೂಲಕ ದೇವಾಲಯದ ಪ್ರಸಾದವನ್ನು ಮನೆಗೆ ತಲುಪಿಸುವ ಯೋಜನೆಯಡಿ ತರಲಾಗಿದೆ. 3-4 ದಿನಗಳಲ್ಲಿ ಪ್ರಸಾದ ಭಕ್ತರ ಮನೆ ಬಾಗಿಲಿಗೆ ಬರಲಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೇಡಿಕೆ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೇವಾಲಯಗಳನ್ನು ಈ ಯೋಜನೆ ವ್ಯಾಪ್ತಿಗೆ ತರಲಾಗುತ್ತದೆ. ಹೊರ ರಾಜ್ಯದ ದೇವಾಲಯಗಳ ಪ್ರಸಾದವನ್ನು ಮನೆಗೆ ತಲುಪಿಸುವ ವ್ಯವಸ್ಥೆಗೆ ಒಪ್ಪಿಗೆ ಸಿಕ್ಕಿಲ್ಲ. ಆದರೆ ಹೊರ ರಾಜ್ಯದಲ್ಲಿರುವ ಭಕ್ತರಿಗೆ ಕರ್ನಾಟಕದ ದೇವಾಲಯದ ಪ್ರಸಾದವನ್ನು ತಲುಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಕ್ತರು ಮನೆಯಲ್ಲಿ ಕುಳಿತು ಆಯಾ ದೇವಾಲಯದಲ್ಲಿ ಒದಗಿಸುವ ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಸ್ಮ ಅಥವ ಭಂಡಾರ, ಕುಂಕುಮ, ಬಿಲ್ವಪತ್ರೆ/ ಹೂವು/ ತುಳಸಿ ಮತ್ತು ಪ್ಯಾಕೇಟ್ ಅಳತೆಯ ಲ್ಯಾಮಿನೇಟೆಡ್ ದೇವರ ಚಿತ್ರವನ್ನು ಪ್ರಸಾದ ರೂಪದಲ್ಲಿ ಪಡೆಯಬಹುದು.
ಅಂಚೆ ವೆಚ್ಚ ಸೇರಿ ಪ್ರಸಾದ ಮನೆಗೆ ತರಿಸಲು 100 ರಿಂದ 200 ರೂ. ತನಕ ದರವನ್ನು ನಿಗದಿ ಮಾಡಲಾಗಿದೆ. ಭಕ್ತರು ಇ-ಪ್ರಸಾದ ವೆಬ್‌ಸೈಟ್ ಮೂಲಕ ಅಥವ ಸಮೀಪದ ಸಿಎಸ್‌ಸಿ ಕೇಂದ್ರದ ಮೂಲಕ ಪ್ರಸಾದವನ್ನು ಆರ್ಡರ್ ಮಾಡಬಹುದು.












Click it and Unblock the Notifications