ರಾಜ್ಯದ ಕರಾವಳಿ ಭಾಗದಲ್ಲಿ ಭಾರೀ ಮಳೆ ನಿರೀಕ್ಷೆ
ಬೆಂಗಳೂರು, ಜೂ. 19: ರಾಜ್ಯದ ಹಲವೆಡೆ ಮುಂಗಾರು ಮಳೆ ಬೀಳುತ್ತಿದ್ದು ಉಷ್ಣಾಂಶದಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗದಲ್ಲಿ ಭಾರೀ ಮಳೆಯಾಗಲಿದ್ದು ಬೆಂಗಳೂರು ಮತ್ತು ಉತ್ತರ ಒಳನಾಡು ಪ್ರದೇಶಗಳು ಸಾಧಾರಣ ಮಳೆ ಪಡೆಯಲಿವೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.
ಕರಾವಳಿ ಭಾಗದಲ್ಲಿ ಬುಧವಾರ ಮತ್ತು ಗುರುವಾರ ವ್ಯಾಪಕ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ದಿನವಿಡೀ ಮಳೆಯಾಗಿದ್ದು ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ತುಂತುರು ಮಳೆಯಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೂ ವರುಣ ಆರ್ಭಟಿಸಿದ್ದಾನೆ.[ಮುಂಬೈ ಮಹಾಮಳೆ: ರೈಲು ಬಂದ್, ಕರೆಂಟ್ ಇಲ್ಲ]

ನಿರಂತರ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಹೊನ್ನಾವರ ಭಾಗಗಳು ತತ್ತರಿಸಿದ್ದು, ಕೃಷಿ ಜಮೀನು ಜಲಾವೃತವಾಗಿದೆ. ದಲ್ಷಿಣ ಕನ್ನಡ ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗಿದೆ.[ದೇಶಾದ್ಯಂತ ವಾಡಿಕೆಗಿಂತ ಹೆಚ್ಚು ಮುಂಗಾರು ಮಳೆ]
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ 72.3 ಮಿ.ಮೀ. ಮಳೆಯಾಗಿದ್ದು ಮೂಡಿಗೆರೆ ಹಾಗೂ ಚಿಕ್ಕಮಗಳೂರು, ಬಯಲು ಸೀಮೆ ಕಡೂರು, ಬೀರೂರು ಹಾಗೂ ತರೀಕೆರೆ ಭಾಗದಲ್ಲೂ ತುಂತುರು ಮಳೆಯಾಗಿದೆ.
ಶಿವಮೊಗ್ಗ ಜಿಲ್ಲಾದ್ಯಂತ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಉತ್ತಮ ಮಳೆಯಾಗಿದ್ದು, ಸಾಗರ ತಾಲೂಕಿನ ಕಾರ್ಗಲ್ ಸಮೀಪ ಮರ ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಉಳಿದಂತೆ ಶಿಕಾರಿಪುರ, ಶಿರಾಳಕೊಪ್ಪ, ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ, ಹೊಳೆಹೊನ್ನೂರು, ತುಮರಿ ಭಾಗಗಳಲ್ಲಿಯೂ ಗಾಳಿ ಮಳೆಯಾಗಿದೆ. [ಸಿಗಂದೂರು ದೇವಸ್ಥಾನಕ್ಕೆ ನನ್ನ ತೀರ್ಥಯಾತ್ರೆ- ಶಾಮ್]
ಮೈಸೂರು, ಮಡಿಕೇರಿ, ಕೊಡಗು ಭಾಗದಲಲ್ಲಿಯೂ ಮಳೆಯಾಗಿದೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಮಳೆಯಾಗಿದ್ದು ಹಾರಂಗಿ ಜಲಾಶಯದ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ.
ಮೀನುಗಾರರಿಗೆ ಎಚ್ಚರಿಕೆ
ಸಮುದ್ರ ತೀರದಲ್ಲಿ ಗಾಳಿಯ ವೇಗ ಹೆಚ್ಚಾಗಿದ್ದು ಮುಂದಿನ 24 ಗಂಟೆಗಳಲ್ಲಿ 45 ರಿಂದ 50 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ಹವಾಮಾನ
ಮುಂದಿನ 48 ಗಂಟೆಗಳಲ್ಲಿ ವಾತಾವರಣದಲ್ಲಿ ಯಾವುದೇ ಪ್ರಮಿಖ ಬದಲಾವಣೆ ಇಲ್ಲ. ಕರಾವಳಿ ಮತ್ತು ದಕ್ಷಿಣ ಒಳನಾಡಿ ಭಾಗಗಳು ಹೆಚ್ಚಿನ ಮಳೆ ಪಡೆಯಲಿವೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು ಸಾಧಾರಣ ಮಳೆ ಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications