ಕರ್ನಾಟಕ ಮಾಜಿ ರಾಜ್ಯಪಾಲ ಠಾಕೂರ್ ವಿಧಿವಶ
ಬೆಂಗಳೂರು, ಜ. 17 : ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಸಾಕ್ಷಿಯಾಗಿದ್ದ ಮಾಜಿ ರಾಜ್ಯಪಾಲ ರಾಜ್ಯಪಾಲ ರಾಮೇಶ್ವರ ಠಾಕೂರ್ (91) ಗುರುವಾರ ನವದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಶೋಕಾಚರಣೆ ಘೋಷಣೆ ವಿಳಂಬವಾದ ಹಿನ್ನಲೆಯಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳು ರದ್ದಾದವು.
ಅನಾರೋಗ್ಯದಿಂದ ಬಳಲುತ್ತಿದ್ದ ಠಾಕೂರ್ ಅವರು ಗುರುವಾರ ಸಂಜೆ 4.30ಕ್ಕೆ ದೆಹಲಿಯ ಮೋತಿಬಾಗ್‌ನಲ್ಲಿರುವ 'ಆನಂದ ನಿಕೇತನ'ದಲ್ಲಿ ನಿಧನರಾದರು. 2007ರಿಂದ 2009ರವರೆಗೆ ರಾಮೇಶ್ವರ ಠಾಕೂರ್ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ರಾಜ್ಯದಲ್ಲಿ 6 ತಿಂಗಳ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತ್ತು.

ಸಿಬ್ಬಂದಿ ಮತ್ತಯ ಆಡಳಿತ ಸುಧಾರಣಾ ಇಲಾಖೆಯಿಂದ ರಾಮೇಶ್ವರ ಠಾಕೂರ್ ನಿಧನದ ಹಿನ್ನಲೆಯಲ್ಲಿ ಶೋಕಾಚರಣೆ ಘೋಷಣೆ ಮಾಡುವುದು ವಿಳಂಬವಾದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ್ದ ಸಿಎಂ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಂದ ವಾಪಸ್ ಆದರು.
ಆಂಧ್ರ, ಮಧ್ಯಪ್ರದೇಶ ರಾಜ್ಯಪಾಲರಾಗಿದ್ದರು : ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ 1924ರ ಜುಲೈ 17ರಂದು ಜನಿಸಿದ ಠಾಕೂರ್ ಅವರು ಒರಿಸ್ಸಾ (2004-2006), ಆಂಧ್ರಪ್ರದೇಶ (2006-07) ಮತ್ತು ಮಧ್ಯಪ್ರದೇಶ (2009-11) ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.
ಸಮ್ಮಿಶ್ರ ಸರ್ಕಾರಕ್ಕೆ ಸಾಕ್ಷಿಯಾಗಿದ್ದರು : ರಾಮೇಶ್ವರ ಠಾಕೂರ್ ಅವರು ಕರ್ನಾಟಕದಲ್ಲಿ 2007ರ ಜುಲೈ 21ರಿಂದ 2009ರ ಜೂ 28ರವರೆಗೆ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. 2007ರಲ್ಲಿ ಯಡಿಯೂರಪ್ಪಗೆ ಅಧಿಕಾರ ಹಸ್ತಾಂತರಿಸಲು ಕುಮಾರಸ್ವಾಮಿ ನಿರಾಕರಿಸಿದಾಗ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಜಟಾಪಟಿಗೆ ಠಾಕೂರ್ ಸಾಕ್ಷಿಯಾಗಿದ್ದರು.
ಮುಖ್ಯಮಂತ್ರಿ ಸಂತಾಪ : ಮಾಜಿ ರಾಜ್ಯಪಾಲ ರಾಮೇಶ್ವರ ಠಾಕುರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಕರ್ನಾಟಕದ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ರಾಷ್ಟ್ರಪತಿ ಆಡಳಿತದ ಅವಧಿಯಲ್ಲಿ ಜನ ಸಾಮಾನ್ಯರೊಡನೆ ಬೆರೆತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಜನನಾಯಕನಂತೆ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.












Click it and Unblock the Notifications