ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಗೆ ಹೈಕಮಾಂಡ್ ಟಿಕೆಟ್: ಎರಡು ಕ್ಷೇತ್ರದಲ್ಲಿ ಸಿದ್ದು ಸ್ಪರ್ಧೆ? ಇಲ್ಲಿದೆ ಮಾಹಿತಿ
ಬೆಂಗಳೂರು, ಮಾರ್ಚ್25: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಅಧಿಕೃತವಾಗಿ ಕಾಂಗ್ರೆಸ್ ಚುನಾವಣಾ ಅಖಾಡಕ್ಕಿಳಿದಿದ್ದು, 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ.
ಇತ್ತ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ವರುಣಾ ಕ್ಷೇತ್ರಕ್ಕೆ ಟಿಕೆಟ್ ನೀಡಿದೆ. ಈ ಕುತೂಹಲದ ಮಧ್ಯೆ ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿಲ್ಲ. ಈ ಮೂಲಕ ಸಿದ್ದರಾಮಯ್ಯ ವರುಣಾ ಜೊತೆಗೆ ಕೋಲಾರದಿಂದಲೂ ಸ್ಪರ್ಧಿಸುತ್ತಾರಾ ಅನ್ನೋ ಕುತೂಹಲ ಮುಂದುವರಿದಿದೆ.

ಇನ್ನೂ ಶುಕ್ರವಾರ ಚಿತ್ರದುರ್ಗದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ನಮ್ಮ ಮನೆಯಲ್ಲಿ ವರುಣಾದಿಂದ ಸ್ಪರ್ಧಿಸುವಂತೆ ಹೇಳಿದ್ದಾರೆ. ವರುಣಾ ಕ್ಷೇತ್ರದಿಂದಲೇ ಟಿಕೆಟ್ ನೀಡುವಂತೆ ಹೇಳಿದ್ದೇನೆ. ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆಯೂ ನಮ್ಮ ಮನೆಯಲ್ಲಿ ಹೇಳಿದ್ದಾರೆ. ವರುಣಾ, ಕೋಲಾರ ಅಷ್ಟೇ ಅಲ್ಲ. ರಾಜ್ಯದ 25 ಕ್ಷೇತ್ರಗಳಲ್ಲಿ ನನಗೆ ಸ್ಪರ್ಧಿಸುವಂತೆ ಆಹ್ವಾನವಿದೆ. ಎಲ್ಲಾ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.
ಬಾದಾಮಿ ಕೋಲಾರ ಟಿಕೆಟ್ ಘೋಷಣೆ ಮಾಡಿದ ಹೈಕಮಾಂಡ್ ನಡೆ ಇನ್ನಷ್ಟು ಕುತೂಹಲವನ್ನ ಹೆಚ್ಚಿಸಿದ್ದು, ಇನ್ನೊಂದು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ಸಾಧ್ಯತೆ ಹಿನ್ನೆಲೆ ಎರಡು ಕ್ಷೇತ್ರವನ್ನ ಹೈಕಮಾಂಡ್ ಕಾಯ್ದಿರಿಸಿದೆ. ಇನ್ನೂ ಶುಕ್ರವಾರ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಸ್ಥಳೀಯ ನಾಯಕರ ಜೊತೆಗೆ ಚರ್ಚೆ ನಡೆಸಿದ್ದು, ಕೊನೆಯ ಕ್ಷಣದಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇನ್ನೂ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಕುರಿತು ಚರ್ಚೆ ನಡೆಯುತ್ತಿದ್ದು, ಕೊನೆ ಕಣದಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದರೇ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಕಾರಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತಮ್ಮ ಆಕಾಂಕ್ಷೆಯ ಬಗ್ಗೆ ಹೈಕಮಾಂಡ್‌ಗೆ ಸಿದ್ದರಾಮಯ್ಯ ಅವರು ಗುರುವಾರ ಸಂದೇಶ ರವಾನಿಸಿದ್ದರು ಎಂದು ಹೇಳಲಾಗುತ್ತಿದೆ.

ಹೈಕಮಾಂಡ್ ಸೂಚನೆಯಂತೆ ವರುಣಾ ಕ್ಷೇತ್ರದ ಜೊತೆಗೆ ಕೋಲಾರದಲ್ಲಿ ಸ್ಪರ್ಧೆ ನಡೆಸಿ, ಒಂದು ವೇಳೆ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದಿದರೇ, ಆಗ, ವರುಣಾ ಕ್ಷೇತ್ರವನ್ನು ಮತ್ತೆ ಡಾ.ಯತೀಂದ್ರಗೆ ಬಿಟ್ಟುಕೊಡುವ ಚಿಂತನೆಯನ್ನ ಸಿದ್ದರಾಮಯ್ಯ ನಡೆಸಿದ್ದಾರೆ ಎನ್ನಲಾಗಿದೆ. ಇತ್ತ ಕೋಲಾರದಲ್ಲಿ ಸ್ಪರ್ಧೆ ಮಾಡದೇ ಇದ್ದಲ್ಲಿ ಸಾಕಷ್ಟು ವಿರೋಧಗಳು ಕೇಳಿ ಬರುತ್ತವೆ ಅದೇ ಅಲ್ಲದೇ ಅಲ್ಲಿ ಬೇರೆ ಅಭ್ಯರ್ಥಿಯನ್ನ ಹಾಕುವುದು ಕಷ್ಟಕರವಾಗುತ್ತದೆ ಎಂದು ಎರಡು ಕ್ಷೇತ್ರದಲ್ಲಿ ಸ್ಪರ್ಧೆಗೆ ರೆಡಿಯಾಗಿದ್ದಾರೆ ಎನ್ನಲಾಗಿದೆ.
ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಯ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಕೋಲಾರದ ಟಿಕೆಟ್ ಘೋಷಣೆ ಮಾಡೋ ರಿಸ್ಕ್ ತೆಗೆದುಕೊಂಡಿಲ್ಲ. ಸದ್ಯ ವರುಣಾದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದು ಪಕ್ಕಾ ಆಗಿದ್ದು, ವರುಣಾ ಜೊತೆಗೆ ಕೋಲಾರದಿಂದಲೂ ಕಣಕ್ಕಿಳಿಯುತ್ತಾರಾ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications