ಅಸಹಾಯಕತೆಯ ಈ ಮಾತುಗಳು ನಾಡಿನ ಜನರ ಸೌಹಾರ್ದತೆಗೆ ಮಾರಕ; ಎಚ್‌ಡಿಕೆ ವಿರುದ್ಧ ಕಟೀಲ್ ಕಿಡಿ
ಬ್ರಾಹ್ಮಣ ಸಮುದಾಯದ ಕುರಿತ ಹೇಳಿಕೆ ಈಗ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ತಿರುಗುಬಾಣವಾಗುತ್ತಿದ್ದು, ಬಿಜೆಪಿ ನಾಯಕರು ಬಿಟ್ಟು ಬಿಡದಂತೆ ವಾಗ್ದಾಳಿ ನಡೆಸುತ್ತಿದ್ದಾರೆ.
ಬೆಂಗಳೂರು, ಫೆಬ್ರವರಿ. 06: ಸಂಬಂಧಿಗಳನ್ನೇ ಜನ ಪ್ರತಿನಿಧಿಗಳಾಗಿಸಿರುವ ಕುಮಾರಸ್ವಾಮಿಯವರು ಪ್ರಲ್ಹಾದ್ ಜೋಶಿಯವರ ಜಾತಿ ವಿಷಯದ ಬಗ್ಗೆ ಮಾತನಾಡುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಸಮುದಾಯದ ಪ್ರಲ್ಹಾದ್ ಜೋಶಿ ಮುಖ್ಯಮಂತ್ರಿಯಾಗುತ್ತಾರೆ. ಈಗಾಗಲೇ ಬಿಜೆಪಿ ಮತ್ತು ಸಂಘ ಪರಿವಾರ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ಆದರೆ, ಜೋಶಿ ಅವರದ್ದು ಮರಾಠ ಪೇಶ್ವೆಗಳ ಡಿಎನ್‌ಎ, ಶೃಂಗೇರಿ ಮಠಕ್ಕೆ ಸೇರಿದವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.
ಕುಮಾರಸ್ವಾಮಿ ಅವರ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ನಾಯಕರು, ಬ್ರಾಹ್ಮಣ ಸಮುದಾಯ ತಿರುಗಿಬಿದ್ದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಳಿನ್ ಕುಮಾರ್ ಕಟೀಲ್, "ರಾಜ್ಯದ ವಿರೋಧ ಪಕ್ಷದ ನಾಯಕರು ತಮ್ಮ ವಿರುದ್ಧದ ರಾಜಕೀಯ ಟೀಕೆಗಳಿಗೆ ವ್ಯಕ್ತಿಗತ ನಿಂದನೆಯ ಮೂಲಕ ಉತ್ತರ ನೀಡುತ್ತಾರೆ. ಸಿದ್ದರಾಮಯ್ಯನವರ ಮುಸ್ಲಿಂ ತುಷ್ಟೀಕರಣ, ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರ, ಎಚ್.ಡಿ.ಕುಮಾರಸ್ವಾಮಿ ಅವರ ಕುಟುಂಬ ರಾಜಕಾರಣ ಇವೆಲ್ಲವೂ ರಾಜಕೀಯ ವಿಷಯ. ಇವುಗಳ ಬಗ್ಗೆ ಮಾತನಾಡಿದರೆ ವೈಯಕ್ತಿಕ ಮಾತುಗಳು ಬರುತ್ತವೆ" ಎಂದಿದ್ದಾರೆ.
"ನಿನ್ನೆಯ ಎಚ್.ಡಿ.ಕುಮಾರಸ್ವಾಮಿ ಅವರ ಮಾತುಗಳು ಕೂಡ ಇದೇ ರೀತಿಯದ್ದಾಗಿದೆ. ಇದು ಖಂಡನೀಯ. ಸಾಮರ್ಥ್ಯವಿದ್ದರೆ ರಾಜಕೀಯ ಟೀಕೆಗೆ ರಾಜಕೀಯವಾಗಿ ಉತ್ತರ ಕೊಡಿ. ತಮ್ಮ ಸಂಬಂಧಿಗಳನನ್ನೇ ಜನ ಪ್ರತಿನಿಧಿಗಳಾಗಿಸಿರುವ ಪಕ್ಷದ ಕುಮಾರಸ್ವಾಮಿಯವರು ಶ್ರೀಯುತ ಪ್ರಲ್ಹಾದ್ ಜೋಶಿಯವರ ಜಾತಿ ವಿಷಯದ ಬಗ್ಗೆ ಮಾತನಾಡುವುದು ಖಂಡನೀಯ" ಎಂದು ಟೀಕಿಸಿದ್ದಾರೆ.
ನಿನ್ನೆಯ @hd_kumaraswamy ಅವರ ಮಾತುಗಳು ಕೂಡ ಇದೇ ರೀತಿಯದ್ದಾಗಿದೆ. ಇದು ಖಂಡನೀಯ. ಸಾಮರ್ಥ್ಯವಿದ್ದರೆ ರಾಜಕೀಯ ಟೀಕೆಗೆ ರಾಜಕೀಯವಾಗಿ ಉತ್ತರ ಕೊಡಿ. ತಮ್ಮ ಸಂಬಂಧಿಗಳನನ್ನೇ ಜನ ಪ್ರತಿನಿಧಿಗಳಾಗಿಸಿರುವ ಪಕ್ಷದ ಕುಮಾರಸ್ವಾಮಿಯವರು ಶ್ರೀಯುತ ಪ್ರಲ್ಹಾದ್ ಜೋಶಿಯವರ ಜಾತಿ ವಿಷಯದ ಬಗ್ಗೆ ಮಾತನಾಡುವುದು ಖಂಡನೀಯ.
— Nalinkumar Kateel (@nalinkateel) February 6, 2023
2/3
"ಎಚ್.ಡಿ.ಕುಮಾರಸ್ವಾಮಿ ಅವರೇ, ಪಕ್ಷಕ್ಕಾಗಿ ಹಗಲಿರುಳೂ ದುಡಿದ ಕಾರ್ಯಕರ್ತರನ್ನೇ ನಂಬದೆ ತಮ್ಮ ಕುಟುಂಬದವರನ್ನೇ ಚುನಾವಣೆಗೆ ನಿಲ್ಲಿಸಿ ಕುಟುಂಬ ರಾಜಕೀಯ ಮಾಡುವ ನೀವು, ಈಗ ನಾಡಿನ ಸಮುದಾಯಗಳ ನಡುವೆ ಒಡಕು ಮೂಡಿಸುವ ಹೀನ ಕೆಲಸಕ್ಕೆ ಕೈ ಹಾಕಿದ್ದೀರಿ. ಚುನಾವಣೆಯಲ್ಲಿ ಸೋಲುತ್ತೇನೆಂಬ ತಮ್ಮ ಅಸಹಾಯಕತೆಯ ಈ ಮಾತುಗಳು ನಾಡಿನ ಜನರ ಸೌಹಾರ್ದತೆಗೆ ಮಾರಕ" ಎಂದು ಹೇಳಿದ್ದಾರೆ.
ಇನ್ನು ಬಗ್ಗೆ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, "ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನ ಮಾಡಲಾಗುತ್ತಿದೆ. ನಾನು ಬ್ರಾಹ್ಮಣ ಸಮುದಾಯವನ್ನು ಅವಮಾನಿಸಿಲ್ಲ. ನಾನು ಯಾವುದೇ ಸಮುದಾಯವನ್ನು ಅವಮಾನಿಸುವುದು, ಅಗೌರವ ತೋರಿಸುವುದು ಇಲ್ಲ. "ಆರ್‌ಎಸ್‌ಎಸ್ ಮತ್ತು ಬಿಜೆಪಿ ರಾಜ್ಯಕ್ಕೆ ಮರಾಠಿ ಪೇಶ್ವೆಗಳ ಡಿ.ಎನ್‌ಎ ಇರುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಹೊರಟಿದೆ ಎಂದು ಹೇಳಿದೆ. ಈ ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ. ಅದನ್ನು ತಿರುಚಿ ಬ್ರಾಹ್ಮಣ ಸಮುದಾಯಕ್ಕೆ ಅಗೌರವ ಎನ್ನುತ್ತಿದ್ದಾರೆ. ನಾನು ಎತ್ತಿದ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿಲ್ಲ" ಎಂದಿದ್ದಾರೆ.












Click it and Unblock the Notifications