Karnataka Elections: ಬಂಡಾಯದ ಮುನ್ಸೂಚನೆ, ದಟ್ಟವಾಗುತ್ತಿದೆ ಗೊಂದಲ, ಒತ್ತಡದಲ್ಲಿ ಸಿಲುಕಿದ ಬಿಜೆಪಿ- ಇನ್‌ಸೈಡ್ ಸ್ಟೋರಿ
ಬೆಂಗಳೂರು, ಏಪ್ರಿಲ್ 08: ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ಘೋಷಣೆಯಾಗುವ ಮುನ್ನವೇ ಬಿಜೆಪಿ ನಲವತ್ತಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಂಡಾಯದ ಸಾಧ್ಯತೆಯನ್ನು ಎದುರಿಸುತ್ತಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಬಿಎಸ್ ಯಡಿಯೂರಪ್ಪ ಅವರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಭಾರೀ ಒತ್ತಡವಿದೆ ಎಂಬುದಾಗಿ ಒಪ್ಪಿಕೊಂಡಿದ್ದಾರೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ನಾವು ಗೆಲ್ಲಬಹುದಾದ ಸ್ಥಾನಗಳಲ್ಲಿ ಮೂರರಿಂದ ಐದು ಮಂದಿ ಆಕಾಂಕ್ಷಿಗಳಿದ್ದಾರೆ. ಪ್ರತಿ ಕ್ಷೇತ್ರಕ್ಕೆ ಎರಡರಿಂದ ಮೂರು ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿದ್ದೇವೆ. ಗೆಲುವು ಮತ್ತು ಹೈಕಮಾಂಡ್‌ನ ಸಲಹೆ ಆಧರಿಸಿ ಅಭ್ಯರ್ಥಿಗಳನ್ನು ಪಟ್ಟಿ ಅಂತಿಮಗೊಳಿಸಲಾಗುವುದು. ಎರಡರಿಂದ ಮೂರು ದಿನಗಳಲ್ಲಿ ಪಟ್ಟಿ ಹೊರಬೀಳಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವದೆಹಲಿಗೆ ತೆರಳಿದ್ದು, ಶನಿವಾರದಿಂದ ಆರಂಭವಾಗುವ ಸಭೆಯಲ್ಲಿ ಟಿಕೆಟ್ ಅಂತಿಮಗೊಳಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕನಿಷ್ಠ 40 ಸ್ಥಾನಗಳಲ್ಲಿ ಬಿಜೆಪಿಗೆ ಹೆಚ್ಚಿನ ಆಕಾಂಕ್ಷಿಗಳಿದ್ದು, ಕೆಲವರಿಗೆ ಟಿಕೆಟ್ ನಿರಾಕರಿಸಿದರೆ ಬಂಡಾಯ ಏಳುವ ಸಾಧ್ಯತೆಗಳು ದಟ್ಟವಾಗಿದೆ.
2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣಕರ್ತರಾದ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ತಮ್ಮ ಆಪ್ತರಿಗಾಗಿ ಕಾಗವಾಡ, ಅಥಣಿ ಹಾಗೂ ಬೆಳಗಾವಿ ಗ್ರಾಮಾಂತರದ ಮೂರು ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಸ್ಪರ್ಧಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ರಾಣೇಬೆನ್ನೂರಿನಲ್ಲಿ ಬಿಜೆಪಿ ಎಂಎಲ್‌ಸಿ ಆರ್. ಶಂಕರ್, ತಮಗೆ ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಟಿಕೆಟ್‌ಗಾಗಿ ಬೇಡಿಕೆ ಇಡುತ್ತಿರುವ ಹಲವು ಹಾಲಿ ಶಾಸಕರ ಸಹೋದರರೊಂದಿಗೆ ಬಿಜೆಪಿ ವ್ಯವಹರಿಸುತ್ತಿದೆ ಎಂದೂ ತಿಳಿದುಬಂದಿದೆ. ಕಾರಣ, ಈ ಬಾರಿ ಕೆಲ ಹಾಲಿ ಶಾಸಕರ ಸಹೋದರರೂ ಬಿಜೆಪಿ ಟಿಕೆಟ್‌ಗಾಗಿ ಲಾಭಿ ಮಾಡುತ್ತಿದ್ದಾರೆ.
ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಈ ಬಾರಿ ಟಿಕೆಟ್ ಬಯಸಿದ್ದಾರೆ. ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ಬಿಜೆಪಿಯ ಸಿದ್ದು ಸವದಿ ಶಾಸಕರಾಗಿರುವ ತೆರದಾಳದಿಂದ ಟಿಕೆಟ್ ಬಯಸಿದ್ದಾರೆ.
ಹಾಲಿ ಶಾಸಕ ಕಳಕಪ್ಪ ಬಂಡಿ ಅವರ ಸಹೋದರ ಸಿದ್ದಪ್ಪ ರೋಣ ಕ್ಷೇತ್ರದ ಟಿಕೆಟ್‌ಗಾಗಿ ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ನ ಎಂವೈ ಪಾಟೀಲ್ ಅವರ ಅಜಫಲಪುರ ಕ್ಷೇತ್ರಕ್ಕೆ ಬಿಜೆಪಿಯ ಇಬ್ಬರು ಸಹೋದರರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಹಾಗೂ ಅವರ ಕಿರಿಯ ಸಹೋದರ ನಿತಿನ್ ಗುತ್ತೇದಾರ್ ಒಂದೇ ಕ್ಷೇತ್ರಕ್ಕಾಗಿ ಪೈಪೋಟಿಯಲ್ಲಿ ತೊಡಗಿದ್ದಾರೆ.

18 ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿಯಲ್ಲಿ ಬಿಜೆಪಿಗೆ ಭಾರೀ ಬಂಡಾಯ ಎದುರಾಗಿದೆ. ಹುಕ್ಕೇರಿ ಭಾಗದಲ್ಲಿ ದಿವಂಗತ ಉಮೇಶ್ ಕತ್ತಿ ಅವರ ಸಹೋದರ ಮತ್ತು ಮಗ ರೇಸ್‌ನಲ್ಲಿದ್ದಾರೆ. ಅವರಲ್ಲಿ ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮೂಲಗಳ ಪ್ರಕಾರ, ಬಿಜೆಪಿಯ ಶಿರಹಟ್ಟಿ ಶಾಸಕ ರಾಮಪ್ಪ ಲಮಾಣಿ ತಮ್ಮದೇ ಕ್ಷೇತ್ರದಲ್ಲಿ ಅಸಮಾಧಾನ ಎದುರಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಲಮಾಣಿ ಅವರನ್ನು ಬದಲಿಸಿ ಬಿಜೆಪಿ ಉಳಿಸಿ ಅಭಿಯಾನ ಆರಂಭಿಸಿದ್ದಾರೆ. ಕನಕಗಿರಿ, ಧಾರವಾಡ, ಮೂಡಿಗೆರೆ, ಸೊರಬ, ಬ್ಯಾಡಗಿಯಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಇದು ಆತಂಕಕಾರಿ ಬೆಳವಣಿಗೆ ಆಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಗುಂಡ್ಲುಪೇಟೆ ಮತ್ತು ಹೊಸದುರ್ಗದಲ್ಲಿ ಹಾಲಿ ಶಾಸಕರ ವಿರುದ್ಧ ಬಿಜೆಪಿಯಲ್ಲಿ ಹಲವು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ದಾವಣಗೆರೆ ಉತ್ತರ ಶಾಸಕರಾದ ಎಸ್ ಎ ರವೀಂದ್ರನಾಥ್ ಮತ್ತು ಕುಂದಾಪುರ ಶಾಸಕರಾದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ನಿವೃತ್ತಿ ಘೋಷಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂಬುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.












Click it and Unblock the Notifications