Kiccha Sudeep: ಮಾತು ಕೊಟ್ಟಿದ್ದೀನಿ, ಚುನಾವಣಾ ಪ್ರಚಾರ ಮುಗಿಯುವವರೆಗೂ ಬಿಜೆಪಿ ಜೊತೆಯಲ್ಲಿ ಇರ್ತೀನಿ ಎಂದ ಸುದೀಪ್
ಕರ್ನಾಟಕ ವಿಧಾನಸಭಾ ಚುನಾವಣೆ ಅಖಾಡ ರಂಗೇರಿದೆ. ಮತದಾನ ದಿನ ಹತ್ತಿರವಾಗುತ್ತಿದ್ದಂತೆ ಘಟಾನುಘಟಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಕೂಡ ಸ್ಟಾರ್ ಪ್ರಚಾರಕರ ಮೂಲಕ ಮತಬೇಟೆಗೆ ಮುಂದಾಗಿದೆ. ಜನಪ್ರಿಯ ನಟ, ಕಿಚ್ಚ ಸುದೀಪ್ ಇಂದಿನಿಂದ ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಕಿಚ್ಚ ಇಂದು ಒಟ್ಟು 6 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಆಪ್ತರಾಗಿರುವ ಸುದೀಪ್, ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಶಿಗ್ಗಾಂವಿಯಲ್ಲಿ ನಡೆದ ಭರ್ಜರಿ ರೋಡ್‌ಶೋನಲ್ಲಿ ಭಾಗವಹಿಸಿದ್ದರು. ಇಂದಿನಿಂದ ಚುನಾವಣಾ ಪ್ರಚಾರ ಮುಗಿಯುವವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗುವುದಾಗಿ ತಿಳಿಸಿದರು.

ಮೊದಲ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಪರವಾಗಿ ಮತಯಾಚನೆ ಮಾಡಲಿದ್ದಾರೆ. ನಂತರ ಜಗಳೂರಿಗೆ ತೆರಳಲಿದ್ದು, ಅಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಮಾಯಕೊಂಡ, ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಮತಯಾಚನೆ ಮಾಡಲಿರುವ ಕಿಚ್ಚ ಸುದೀಪ್, ಸಂಜೆ ಬಳ್ಳಾರಿಯ ಸಂಡೂರಿನಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ.
ಜನ ತುಂಬಾ ಪ್ರೀತಿ ತೋರಿಸುತ್ತಿದ್ದಾರೆ ಎಂದ ಸುದೀಪ್
ಚುನಾವಣಾ ಪ್ರಚಾರಕ್ಕೆ ಹೋಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಕಿಚ್ಚ ಸುದೀಪ್, "ಚುನಾವಣೆ ಪ್ರಚಾರ ಕಾರ್ಯ ಮುಗಿಯುವವರೆಗೂ ಬಿಜೆಪಿ ಜೊತೆಯಲ್ಲಿ ಇರುತ್ತೇನೆ, ಮಾತು ಕೊಟ್ಟಿದ್ದೇನೆ ಎಂದು ಹೇಳಿದರು. ಹೋದ ಕಡೆಯಲ್ಲೆಲ್ಲಾ ಜನ ತುಂಬಾ ಪ್ರೀತಿ ತೋರಿಸುತ್ತಿದ್ದಾರೆ, ಪ್ರಚಾರಕ್ಕೆ ಹೋಗುವುದರಲ್ಲಿ ನನ್ನ ಸ್ವಾರ್ಥ ಕೂಡ ಇದೆ, ಈ ನೆಪದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಬಹುದು ಎಂದರು.
ನಾನು ರೋಡ್ ಶೋಗಳಲ್ಲಿ ಭಾಗವಹಿಸಿ ತುಂಬಾ ವರ್ಷಗಳಾಗಿದೆ, ಹೆಬ್ಬುಲಿ ಚಲನಚಿತ್ರ ಬಿಡುಗಡೆ ಸಂದರ್ಭದಲ್ಲಿ ರೋಡ್ ಶೋ ಮಾಡಿದ್ದು ಕೊನೆಯಾಗಿತ್ತು, ಇಂದಿನಿಂದ ಸಂಪೂರ್ಣವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ. ಬಿಸಿಲು ಜಾಸ್ತಿ ಇರುತ್ತೆ ಎಂದು ಮಧ್ಯಾಹ್ನ ರೋಡ್ ಶೋ ಆಯೋಜನೆ ಮಾಡಿರಲಿಲ್ಲ, ಆದರೂ ನಾನು ರೋಡ್ ಶೋ ಮಾಡಲು ಪ್ರಯತ್ನಿಸುತ್ತೇನೆ. ಎಲ್ಲಾ ಕಡೆ ಸ್ನೇಹಿತರು ಇದ್ದಾರೆ, ಚುನಾವಣಾ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿ ಎಂದು ತಿಳಿಸಿದರು.
ಸುದೀಪ್ ರಾಜ್ಯದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ, ಅವರು ಬಿಜೆಪಿ ಪ್ರಚಾರ ಮಾಡುವುದರಿಂದ ಬಿಜೆಪಿಗೆ ಲಾಭವಾಗಬಹುದು ಎನ್ನುವ ಲೆಕ್ಕಾಚಾರವಿದೆ. ಸುದೀಪ್ ಪ್ರಚಾರ ಅಭ್ಯರ್ಥಿಗಳಿಗೆ ಸಹಾಯವಾಗುತ್ತಾ ಇಲ್ಲವಾ ಎನ್ನುವ ಪ್ರಶ್ನಗೆ ಉತ್ತರ ಮೇ 13ರಂದು ಸಿಗಲಿದೆ.












Click it and Unblock the Notifications