Karnataka Elections: ಕಲ್ಯಾಣ ಕರ್ನಾಟಕದ ಪ್ರಭಾವಿ ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆ
ಬೆಂಗಳೂರು, ಮಾರ್ಚ್ 29: ಮೇ ತಿಂಗಳಲ್ಲಿ ನಡೆಯಲಿರುವ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ( Karnataka Assembly Elections 2023 ) ಕಾಂಗ್ರೆಸ್ ( Congress ) ಪಕ್ಷವು 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.
ಮೊದಲ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಸರುಗಳಿವೆ. ಸಿದ್ದರಾಮಯ್ಯನವರು ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕನಕಪುರದಿಂದ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಭಾಲ್ಕಿಯಿಂದ ಈಶ್ವರ್ ಖಂಡ್ರೆ, ಯಮಕನಮರಡಿಯಿಂದ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮಾಂತರದಿಂದ ಲಕ್ಷ್ಮೀ ಹೆಬ್ಬಾಳ್ಕರ್, ಚಿತ್ತಾಪುರದಿಂದ ಪ್ರಿಯಾಂಕ್ ಖರ್ಗೆ, ಕೊರಟಗೆರೆಯಿಂದ ಜಿ.ಪರಮೇಶ್ವರ, ದೇವನಹಳ್ಳಿಯಿಂದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಇತರರ ಹೆಸರುಗಳೂ ಕಾಂಗ್ರೆಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಬೀದರ್ ಜಿಲ್ಲೆಯ ಭಾಲ್ಕಿಯಿಂದ ಈಶ್ವರ್ ಖಂಡ್ರೆ ಅವರು ಮತ್ತೆ ಸ್ಪರ್ಧಿಸಲಿದ್ದಾರೆ. ಅವರು ವೀರಶೈವ- ಲಿಂಗಾಯತ ಸಮುದಾಯದ ಪ್ರಮುಖ ನಾಯಕರು. ಈಶ್ವರ ಭೀಮಣ್ಣ ಖಂಡ್ರೆ ಅವರು 4 ಜುಲೈ 2018 ರಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು 25 ಮೇ 2008 ರಿಂದ ಭಾಲ್ಕಿ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ. ಅವರು 2016 ರಿಂದ 2018 ರ ವರೆಗೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕರ್ನಾಟಕದ ಪೌರಾಡಳಿತ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರಾಗಿದ್ದರು. ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ಈಶ್ವರ್ ಖಂಡ್ರೆ ಅವರ ತಂದೆ ಭೀಮಣ್ಣ ಖಂಡ್ರೆ ಅವರು ಕಾಂಗ್ರೆಸ್‌ನ ಪ್ರಭಾವಿ ನಾಯಕರು. ಅವರು ಹಲವು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಈಶ್ವರ್ ಖಂಡ್ರೆ ಅವರು ಕಲಬುರಗಿಯ ಪೂಜ್ಯ ದೊಡ್ಡಪ್ಪ ಅಪ್ಪಾ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.
ಈಶ್ವರ್ ಖಂಡ್ರೆ ಅವರು ಜಿಲ್ಲೆಯಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಖಂಡ್ರೆ ಕುಟುಂಬದ ಮೂರನೇ ಸದಸ್ಯರು. ಅವರ ಸಹೋದರ ವಿಜಯಕುಮಾರ್ ಖಂಡ್ರೆ ಅವರು ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈಶ್ವರ್ ಖಂಡ್ರೆ ಅವರು ಶಾಂತಿವರ್ಧಕ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿದ್ದಾರೆ.
ಖಂಡ್ರೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸದಸ್ಯರಾಗಿದ್ದಾರೆ ಮತ್ತು ಕರ್ನಾಟಕ ರಾಜ್ಯದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ. 2008ರಲ್ಲಿ ಖಂಡ್ರೆ ಅವರು ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಅವರನ್ನು 20,971 ಮತಗಳ ಅಂತರದಿಂದ ಸೋಲಿಸಿದ್ದರು. 2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಪರಾಭವಗೊಂಡಿದ್ದರು.

2008, 2013 ಹಾಗೂ 2018ರಲ್ಲಿ ಭಾಲ್ಕಿ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಈಶ್ವರ್ ಖಂಡ್ರೆ ಅವರು ಹ್ಯಾಟ್ರಿಕ್ ಸಾಧಿಸಿದ್ದಾರೆ.
ಈಶ್ವರ್ ಖಂಡ್ರೆ ಸ್ಪರ್ಧಿಸುವ ಭಾಲ್ಕಿ ಕ್ಷೇತ್ರದ ಮಾಹಿತಿ
ಭಾಲ್ಕಿ ಕ್ಷೇತ್ರವು ಸಾಮಾನ್ಯ ವರ್ಗದ ವಿಧಾನಸಭಾ ಸ್ಥಾನವಾಗಿದೆ. ಇದು ಬೀದರ್ ಜಿಲ್ಲೆಯಲ್ಲಿದೆ ಮತ್ತು ಬೀದರ್ ಲೋಕಸಭೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಭಾಲ್ಕಿ ವಿಧಾನಸಭೆಯಲ್ಲಿ SC ಮತದಾರರು ಸರಿಸುಮಾರು 58,247 ರಷ್ಟಿದ್ದಾರೆ. ಎಸ್ಟಿ ಮತದಾರರು ಸರಿಸುಮಾರು 24,082 ರಷ್ಟಿದ್ದಾರೆ. ಭಾಲ್ಕಿ ವಿಧಾನಸಭೆಯಲ್ಲಿ ಮುಸ್ಲಿಂ ಮತದಾರರು ಸರಿಸುಮಾರು 22,562 ಆಗಿದ್ದು, ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಸುಮಾರು ಶೇ 9.8 ರಷ್ಟಿದ್ದಾರೆ.
ಭಾಲ್ಕಿ ವಿಧಾನಸಭೆಯಲ್ಲಿ ಗ್ರಾಮೀಣ ಮತದಾರರು ಸರಿಸುಮಾರು 1, 96, 774 ಆಗಿದ್ದು, ಸುಮಾರು ಶೇ 85.47 ರಷ್ಟಿದ್ದಾರೆ. ಭಾಲ್ಕಿ ವಿಧಾನಸಭೆಯಲ್ಲಿ ನಗರ ಮತದಾರರು ಸರಿಸುಮಾರು 33,498 ಇದ್ದಾರೆ. 2019 ರ ಸಂಸತ್ ಚುನಾವಣೆಯಂತೆ ಭಾಲ್ಕಿ ವಿಧಾನಸಭೆಯ ಒಟ್ಟು ಮತದಾರರು 2, 30, 226 ರಷ್ಟಿದ್ದಾರೆ.












Click it and Unblock the Notifications