'ಲಿಂಗಾಯತ ಸಿಎಂ' ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ ಎಂದು 'ಬ್ರಾಹ್ಮಣ ಸಿಎಂ' ಸುಳಿವು ಕೊಟ್ರಾ ಬೊಮ್ಮಾಯಿ?
ಬೆಂಗಳೂರು, ಏಪ್ರಿಲ್. 18: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಲಿಂಗಾಯತ ಮುಖಂಡರ ಜೊತೆಗೆ ಸಭೆ ನಡೆಸಿದ್ದರು. ಈ ಬಾರಿ ರಾಜ್ಯದಲ್ಲಿ 'ಬ್ರಾಹ್ಮಣ ಸಿಎಂ' ಎಂಬ ವಿಚಾರ ಚರ್ಚೆಯಾಗುತ್ತಿದ್ದು, ಇದರ ಬೆನ್ನಲ್ಲೇ ಬಿಎಸ್‌ವೈ ಸಮುದಾಯದ ಮುಖಂಡ ಜೊತೆಗೆ ಸಭೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿತ್ತು.
ಬಿಜೆಪಿ ಲಿಂಗಾಯತ ವಿರೋಧಿ ಎಂಬ ಬಗ್ಗೆ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್‌ಗೆ ಪ್ರತ್ಯುತ್ತರ ನೀಡಲು ' ಲಿಂಗಾಯತ ಸಿಎಂ' ಎಂಬ ಬ್ಯಾನರ್ ಅಡಿಯಲ್ಲಿ ಚುನಾವಣೆ ಎದುರಿಸುವುದು ಎಂಬ ಅಜೆಂಡಾ ನಡೆಯುತ್ತಿದೆ ಎನ್ನಲಾಗಿತ್ತು. ಆದರೆ, ಈ ವದಂತಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದು, "ಲಿಂಗಾಯತ ಮುಖ್ಯಮಂತ್ರಿ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ" ಎಂದಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, " ಈವರೆಗೆ ಲಿಂಗಾಯತ ಸಿಎಂ ಬಗ್ಗೆ ಚರ್ಚೆಯಾಗಿಲ್ಲ. ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ಆಗಿದೆ. ಕಾಂಗ್ರೆಸ್‌ನವರ ಅಪಪ್ರಚಾರಕ್ಕೆ ಹೇಗೆ ಪ್ರತ್ಯುತ್ತರ ನೀಡಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಇದೇ ವೇಳೆ ಲಿಂಗಾಯತ ಮುಖ್ಯಮಂತ್ರಿ ಬಗ್ಗೆಯೂ ಕೆಲವರು ಸಲಹೆ ಕೊಟ್ಟಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
"ಸಭೆಯಲ್ಲಿ ಕಾಂಗ್ರೆಸ್ ನಾಯಕರ ಅಪಪ್ರಚಾರಕ್ಕೆ ಹೇಗೆ ಪ್ರತ್ಯುತ್ತರ ನೀಡಬೇಕು ಎಂಬುದನ್ನು ಚರ್ಚೆ ನಡೆಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಲಿಂಗಾಯತ ಮುಖ್ಯಮಂತ್ರಿ ಬಗ್ಗೆಯೂ ಕೆಲವರು ಸಲಹೆ ಕೊಟ್ಟಿದ್ದಾರೆ. ಇದೇ ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರೂ ಇದ್ದರು. ಸಭೆಯಲ್ಲಿ ವ್ಯಕ್ತವಾಗಿರುವ ಸಲಹೆಗಳನ್ನು ವರಿಷ್ಠರಿಗೆ ತಿಳಿಸುವುದಾಗಿ ಹೇಳಿದ್ದಾರೆ. ಆದರೆ, ಲಿಂಗಾಯತ ಸಿಎಂ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರು ಸಂಜೆಯೇ ಬೆಂಗಳೂರಿಗೆ ವಾಪಸ್ ಆಗಿದ್ದರು. ಈ ವೇಳೆ ತಮ್ಮ ಕಾವೇರಿ ನಿವಾಸದಲ್ಲಿ ಲಿಂಗಾಯತ ಮುಖಂಡರ ಸಭೆಯನ್ನು ನಡೆಸಿದ್ದಾರೆ. ರಾಜ್ಯದ 41 ಲಿಂಗಾಯತ ನಾಯಕರೊಂದಿಗೆ ಸಭೆ ಮಾಡಲಾಯಿತು. ರಾಜ್ಯದಲ್ಲಿ ಲಿಂಗಾಯತರನ್ನೇ ಮುಂದಿನ ಸಿಎಂ ಮಾಡ್ತೇವೆ ಎಂದು ಪ್ರಚಾರದ ವೇಳೆ ಹೇಳಬೇಕು ಎಂದು ಚರ್ಚೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದ್ದವು.
ಯಡಿಯೂರಪ್ಪ ನೇತೃತ್ವದ ಈ ಸಭೆಯಲ್ಲಿ ಬಿಜೆಪಿಯ ಎಲ್ಲಾ ಲಿಂಗಾಯತ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಾಜಿ ಮುಖ್ಯಮಂತ್ರಿ ಸೇರಿದಂತೆ ಎಲ್ಲ ನಾಯಕರು ಭಾಗಿಯಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಸೋಮಣ್ಣ, ಸಿ.ಸಿ ಪಾಟೀಲ್, ಬಿ.ಸಿ. ಪಾಟೀಲ್, ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಸಂಸದರಾದ ಜಿ.ಎಂ. ಸಿದ್ದೇಶ್ವರ್, ಪಿ.ಸಿ ಗದ್ದಿಗೌಡರ್, ಮಂಗಳಾ ಸುರೇಶ್ ಅಂಗಡಿ, ಅಣ್ಣಾ ಸಾಹೇಬ್ ಜೊಲ್ಲೆ, ಶಿವಕುಮಾರ್ ಉದಾಸಿ, ಕರಡಿ ಸಂಗಣ್ಣ, ಬಿ.ವೈ ರಾಘವೇಂದ್ರ, ಜಿ.ಎಸ್ ಬಸವರಾಜ್, ಪ್ರಭಾಕರ್ ಕೋರೆ ಭಾಗವಹಿಸಿದ್ದರು.
ಲಿಂಗಾಯಿತ ಸಿಎಂ ವಿಷಯ ಚರ್ಚೆಯಾಗಿಲ್ಲ ಎಂದಿರುವ ಬಸವರಾಜ ಬೊಮ್ಮಾಯಿ, " ನಾಮಪತ್ರ ಪ್ರಕ್ರಿಯೆ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಪ್ರಚಾರಕ್ಕೆ ಬರಲಿದ್ದಾರೆ. ಕನಕಪುರದಲ್ಲಿ ನಮ್ಮ ಪ್ರಚಾರ ಮಿಲಿಟರಿ ಹೋಟೆಲ್‌ನಿಂದಲೇ ಶುರುವಾಗುತ್ತದೆ. ಸಾಮಾನ್ಯ ಜನರನ್ನು ಭೇಟಿ ಮಾಡಲು ಅಶೋಕ್ ಮಿಲಿಟರಿ ಹೋಟೆಲ್‌ಗೆ ತೆರಳಲಿದ್ದಾರೆ" ಎಂದು ಹೇಳಿದ್ದಾರೆ.












Click it and Unblock the Notifications