ಬಿಜೆಪಿ ಸಂಸದರು ಉತ್ತರ ಕುಮಾರರಂತೆ ಬಿಲ ಸೇರಿದ್ದಾರೆ: ಕಾಂಗ್ರೆಸ್ ವ್ಯಂಗ್ಯ
ರಾಜ್ಯದ ಹಿತ ಕಾಯಬೇಕಾದ ವಿಚಾರದಲ್ಲಿ ಬಿಜೆಪಿ ಸಂಸದರು ಉತ್ತರ ಕುಮಾರರಂತೆ ಬಿಲ ಸೇರಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ವ್ಯಂಗ್ಯ ಮಾಡಿದೆ. ನಿಮ್ಮ ಪಕ್ಷದೊಳಗೆ ಎಷ್ಟು ಬೀದಿ ನಾಟಕ ಕಂಪನಿಗಳು ಹುಟ್ಟಿಕೊಂಡಿವೆ? ಯಾರು ಯಾರು ಯಾವ ಯಾವ ಪಾತ್ರ ಮಾಡುತ್ತಿದ್ದಾರೆ ಎನ್ನುವುದನ್ನು ರಾಜ್ಯದ ಜನರೇ ನೋಡುತ್ತಿದ್ದಾರೆ ಎಂದು ಕುಟುಕಿದೆ. ವೀರಶೈವ-ಲಿಂಗಾಯತ ವಿಚಾರದಲ್ಲಿ ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸುವ ನಿಮ್ಮ ಷಡ್ಯಂತ್ರಕ್ಕೆ ಪ್ರಜ್ಞಾವಂತ ಜನತೆ ತಣ್ಣೀರೆರಚಿದ ಸಂಕಟದಲ್ಲಿದ್ದೀರ ಎಂದು ತಿರುಗೇಟು ನೀಡಿದೆ.
ರಾಜ್ಯದ ನ್ಯಾಯಯುತ ಹಕ್ಕಿನ ಪಾಲಿಗಾಗಿ, ಅನುದಾನಕ್ಕಾಗಿ, ರೈತರಿಗಾದ ಅನ್ಯಾಯವನ್ನು ಪ್ರಶ್ನಿಸಿ, ನಿರಂತರ ಹೋರಾಟ ನಡೆಸುತ್ತಿರುವವರು, ದೆಹಲಿಯವರೆಗೂ ಹೋಗಿ ಪ್ರಧಾನಿಗಳನ್ನು ಆಗ್ರಹಿಸಿದವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್. ರಾಜ್ಯದ ಹಿತದ ವಿಚಾರದಲ್ಲಿ ನಿಮ್ಮ ಸಂಸದರು ಉತ್ತರ ಕುಮಾರರಂತೆ ಬಿಲ ಸೇರಿದ್ದಾರೆ. ನಕಲಿ ಹೋರಾಟ ನೀವು ನಿಮ್ಮ ಹುಳುಕು ಮುಚ್ಚಿಕೊಳ್ಳಲು ರಾಜ್ಯದ ಜನಪರ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡುತ್ತಿರುವುದು ಎಂದು ವಾಗ್ದಾಳಿ ನಡೆಸಿದೆ.

ಕೋವಿಡ್ ಸಂದರ್ಭದಲ್ಲಿ ಜನ ಜೀವ, ಜೀವನ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಹೆಣದ ಮೇಲೆ ಹಣ ಹೊಡೆದ, ಬಿಟ್ ಕಾಯಿನ್ ಹಗರಣ, ಪರಶುರಾಮ ಥೀಮ್ ಪಾರ್ಕ್ ಹಗರಣ, ಗಂಗಾ ಕಲ್ಯಾಣ ಹಗರಣ, ವರ್ಗಾವಣೆ ದಂಧೆ, ಪಿಎಸ್‌ಐ ಹಗರಣ, 40% ಕಮಿಷನ್ ಹಗರಣ.. ಹೀಗೆ ಅಧಿಕಾರದುದ್ದಕ್ಕೂ ಸಾಲು ಸಾಲು ಹಗರಣಗಳಲ್ಲೇ ಮುಳುಗೆದ್ದು ರಾಜ್ಯವನ್ನು ಅಧೋಗತಿಗೆ ತಳ್ಳಿದ್ದೀರಿ. ನಿಮ್ಮಿಂದ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಸಿದ್ದರಾಮಯ್ಯ ಅವರ ನೇತೃತ್ವದ ಜನಪರ ಕಾಂಗ್ರೆಸ್ ಸರ್ಕಾರದ ಬಗ್ಗೆ 'ಪ್ರಮಾಣ ಪತ್ರ' ಹಾಸ್ಯಾಸ್ಪದವಲ್ಲವೇ? ಎಂದು ಕಾಲೆಳೆದಿದೆ.
ಜನಕಲ್ಯಾಣ ಸಮಾವೇಶದ ಯಶಸ್ಸು, ಅಭೂತಪೂರ್ವ ಜನ ಬೆಂಬಲ ನಿಮಗೆ ಅಸ್ತಿತ್ವದ ಭಯ ಹುಟ್ಟಿಸಿದೆ. ಉಪ ಚುನಾವಣೆಯ ಫಲಿತಾಂಶ ನಮ್ಮ ಆಡಳಿತ ವೈಖರಿಗೆ ಕನ್ನಡಿ ಹಿಡಿದಿದೆ. ನಿಮ್ಮ ಹಸಿ ಸುಳ್ಳುಗಳನ್ನು, ಕಪೋಲ ಕಲ್ಪಿತ ಆರೋಪಗಳನ್ನು ನಂಬಲು ರಾಜ್ಯದ ಜನ ನಿಮ್ಮ ಕಾರ್ಯಕರ್ತರಂತೆ ವಾಟ್ಸಪ್ ಯೂನಿವರ್ಸಿಟಿಯಲ್ಲಿ ಕಲಿತವರಲ್ಲ ಎಂದು ವಾಗ್ದಾಳಿ ನಡೆಸಿದೆ.

ನಿಮ್ಮದೇ ಸರ್ಕಾರದಲ್ಲಿ ವಕ್ಪ್ ಬೋರ್ಡ್ ಅಧ್ಯಕ್ಷರಾಗಿದ್ದವರೇ ನಿಮ್ಮ ರಾಜ್ಯಾಧ್ಯಕ್ಷರ ಮೇಲೆ ಮಾಧ್ಯಮದ ಮುಂದೆ ಆರೋಪ ಮಾಡಿದ ಮೇಲೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಅವರ ಮೇಲೆ ಒತ್ತಡ ಹೇರಿ ಹೇಳಿಕೆ ಕೊಡಿಸುವ ಬಂಡತನಕ್ಕಿಳಿದಿದ್ದೀರ ಎಂದು ಅನ್ವರ್ ಮಾಣಿಪ್ಪಾಡಿ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.
ಸ್ವತಃ ಅನ್ವರ್ ಮಾಣಿಪ್ಪಾಡಿ ಅವರೇ ಹಿಂದೆ ವಿಜಯೇಂದ್ರ ತಮಗೆ ₹150 ಕೋಟಿ ಹಣದ ಆಮಿಷ ಒಡ್ಡಿದ್ದರು ಎಂದು ಹೇಳಿದ್ದರ ಮೇಲೆ ನಾವು ಪ್ರತಿಕ್ರಿಯೆ ಕೊಟ್ಟಿದ್ದೇವೆ. ಅವರೇ ಪತ್ರಿಕಾಗೋಷ್ಠಿ ಕರೆದು ನೀಡಿರುವ ಹೇಳಿಕೆಗೆ ನನ್ನ ಪ್ರಕಾರ ನಾವು ಪ್ರತಿಕ್ರಿಯೆ ನೀಡಿರುವುದು ಸರಿಯಾಗಿದೆ. ಈಗ ಬಹಳ ವರ್ಷಗಳ ನಂತರ ಹಿಂದೆ ಹಾಗೆ ಹೇಳಿಯೇ ಇಲ್ಲ ಎನ್ನುತ್ತಿದ್ದಾರೆ. ಅವರು ಹೇಳಿಕೆ ಬದಲಿಸಿದರೆ ಏನು ಮಾಡಬೇಕು? ಎಂದು ಸಿದ್ದರಾಮಯ್ಯ ಹೇಳಿದ್ದರು.
ವಕ್ಪ್ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ವಿಜಯೇಂದ್ರ ಅವರು ತಮಗೆ 150 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂದು ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರವಾಗಿ ಪತ್ರ ಬರೆದಿರುವುದು ಬಯಲಾಗಿದೆ. ಪ್ರಧಾನಮಂತ್ರಿಯವರು ಈ ಆರೋಪವನ್ನು ಗಂಭೀರವಾಗಿ ಸ್ವೀಕರಿಸಿ ತಕ್ಷಣ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದರು.












Click it and Unblock the Notifications