ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಂದೆ ಹಲವು ಪ್ರಶ್ನೆ ಇಟ್ಟ ಕೆಪಿಸಿಸಿ
ಬೆಂಗಳೂರು, ಫೆಬ್ರವರಿ 21 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ 5 ಪ್ರಶ್ನೆಗಳನ್ನು ಕೇಳಿದೆ. ಲೋಕಸಭಾ ಚುನಾವಣೆ ಸಿದ್ಧತೆಗಳ ಕುರಿತು ಚರ್ಚೆ ನಡೆಸಲು ಅಮಿತ್ ಶಾ ಅವರು ಬೆಂಗಳೂರಿಗೆ ಬಂದಿದ್ದಾರೆ.
@INCKarnataka ಟ್ವೀಟರ್ ಹ್ಯಾಂಡಲ್ ಮೂಲಕ ಕರ್ನಾಟಕ ಕಾಂಗ್ರೆಸ್ ಗುರುವಾರ ಅಮಿತ್ ಶಾ ಅವರಿಗೆ ಪ್ರಶ್ನೆಗಳನ್ನು ಕೇಳಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಅಮಿತ್ ಶಾ ಅವರಿಂದ ಉತ್ತರ ಕೊಡಿಸಬೇಕು ಎಂದು ಆಗ್ರಹಿಸಿದೆ.
ಕರ್ನಾಟಕದಲ್ಲಿ ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಮಿತ್ ಶಾ ಅವರು ನಾಡಿನ ಜನತೆಯ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಫೆ.10ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಾಗಲೂ ಪ್ರಶ್ನೆಗಳನ್ನು ಕೇಳಲಾಗಿತ್ತು.
'ಗೋವಾದಲ್ಲಿ ನಿಮ್ಮದೇ ಸರ್ಕಾರವಿದ್ದರೂ ಮಹದಾಯಿ ವಿವಾದ ಬಗೆಹರಿಸಿಲು ಪ್ರಯತ್ನಿಸದೆ ರಾಜ್ಯದ ರೈತರಿಗೆ ಅವಮಾನ ಮಾಡಿದ್ದೇಕೆ?' ಎಂಬುದು ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಕಾಂಗ್ರೆಸ್ ಅಮಿತ್ ಶಾ ಅವರ ಮುಂದಿಟ್ಟಿದೆ.....
|
ಕಾಂಗ್ರೆಸ್‌ನಿಂದ ಬಿಜೆಪಿ ಅಧ್ಯಕ್ಷರಿಗೆ ಪ್ರಶ್ನೆ
ನಾಡಿನ ಜನತೆಯ ಕೆಲವು ಪ್ರಶ್ನೆಗಳಿಗೆ ಬಿ.ಎಸ್.ಯಡಿಯೂರಪ್ಪ ಅವರು ಅಮಿತ್ ಶಾ ಅವರಿಂದ ಉತ್ತರ ಕೊಡಿಸಬೇಕೆಂದು ಕರ್ನಾಟಕ ಕಾಂಗ್ರೆಸ್ ಆಗ್ರಹಿಸಿದೆ.
|
ಪ್ರಶ್ನೆ - 1
ಸಂವಿಧಾನ ಬದ್ಧ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ನಿರಂತರ ಪ್ರಯತ್ನವನ್ನು ಮಾಡಿದಿರಿ. ಆಪರೇಷನ್ ಕಮಲ ನಿಮ್ಮ ಸಾಧನೆಯೇ? ಎಂದು ಕಾಂಗ್ರೆಸ್ ಮೊದಲ ಪ್ರಶ್ನೆ ಮುಂದಿಟ್ಟಿದೆ.
|
ಪ್ರಶ್ನೆ - 2
ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಬಿಡಿಗಾಸು ಸಾಲ ಮನ್ನಾ ಮಾಡಿಲ್ಲ ಏಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
|
ಪ್ರಶ್ನೆ - 3
ಆಪರೇಷನ್ ಕಮಲದ ಆಡಿಯೋ ಟೇಪ್ ಬಗ್ಗೆ ನಿಮ್ಮ ಸ್ಪಷ್ಟನೆ ಏನು?
ಕುದುರೆ ವ್ಯಾಪಾರದಲ್ಲಿ ನಿಮ್ಮ ಪಾತ್ರವೇನು? ಎಂದು ಕರ್ನಾಟಕ ಕಾಂಗ್ರೆಸ್ ಅಮಿತ್ ಶಾ ಅವರನ್ನು ಪ್ರಶ್ನಿಸಿದೆ.
|
ಪ್ರಶ್ನೆ - 4
ರಾಜ್ಯಕ್ಕೆ ಕೇಂದ್ರದಿಂದ 3,00,000 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದ್ದಿರಿ. ರಾಜ್ಯದ ಜನರಿಗೆ ಆ 3,00,000 ಕೋಟಿಯ ಲೆಕ್ಕ ದಾಖಲೆ ಕೊಡುವಿರೇನು? ಎಂದು ಪ್ರಶ್ನಿಸಿದೆ.
|
ಪ್ರಶ್ನೆ - 5
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರನ್ನು ನಿಮ್ಮ ಮನೆಗೆ ಕರೆಸಿಕೊಂಡು ಸಭೆ ನಡೆಸಿದಿರಲ್ಲಾ, ಆ ಸಭೆಯ ಫಲಿತಾಂಶವೇನು? ಮಹದಾಯಿ ವಿವಾದ ಏಕೆ ಬಗೆಹರಿದಿಲ್ಲ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.












Click it and Unblock the Notifications