ಕೋಲಾರ ಕಾಂಗ್ರೆಸ್ ಮುಖಂಡನ ಹತ್ಯೆ ಪ್ರಕರಣ: ಆರೋಪಿಗಳ ಮೇಲೆ ಪೊಲೀಸರಿಂದ ಗುಂಡಿನ ದಾಳಿ; ಸ್ಫೋಟಕ ಮಾಹಿತಿ, ವಿವರ
ಕೋಲಾರ, ಅಕ್ಟೋಬರ್ 24: ಕೋಲಾರದ ಶ್ರೀನಿವಾಸಪುರದಲ್ಲಿ ಸೋಮವಾರ ಕಾಂಗ್ರೆಸ್ ಮುಖಂಡನ ಹತ್ಯೆಯಾಗಿದೆ. ಬೈಕ್‌ನಲ್ಲಿ ಬಂದಿದ್ದ 6 ಮಂದಿ ಕಾಂಗ್ರೆಸ್ ಮುಖಂಡನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಘಟನೆ ನಡೆದ ಒಂದು ದಿನದ ಬಳಿಕ ಲಕ್ಷ್ಮೀಸಾಗರ ಅರಣ್ಯ ವ್ಯಾಪ್ತಿಯಲ್ಲಿ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ.
ಮಂಗಳವಾರ ಬೆಳಗ್ಗೆ ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಮೂವರು ಪೊಲೀಸರೂ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ಮುಖಂಡ ಎಂ ಶ್ರೀನಿವಾಸ್ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮಂಗಳವಾಗಿ ಬೆಳಿಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ.
ಅವರನ್ನು ಠಾಣೆಗೆ ಕರೆತರುತ್ತಿದ್ದಾಗ ಆರೋಪಿಗಳು ಇಬ್ಬರು ಪೇದೆಗಳ ಮೇಲೆ ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ, ಮೂವರು ಆರೋಪಿಗಳ ಕಾಲುಗಳಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಗುಂಡು ಹಾರಿಸುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಾಯಗೊಂಡಿರುವ ಮೂವರು ಆರೋಪಿಗಳು ಹಾಗೂ ಮೂವರು ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಧಿತ ವ್ಯಕ್ತಿಗಳಲ್ಲಿ ಪ್ರಮುಖ ಆರೋಪಿ ವೇಣುಗೋಪಾಲ್ ಮತ್ತು ಆತನ ಸಹಚರರಾದ ಮುನೀಂದ್ರ ಮತ್ತು ಸಂತೋಷ್ ಸೇರಿದ್ದಾರೆ. ಇನ್ನು ಮೂವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಸೋಮವಾರ ಬೈಕ್ ನಲ್ಲಿ ಬಂದ ಆರು ಮಂದಿ ಶ್ರೀನಿವಾಸ್ ಅವರನ್ನು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಶ್ರೀನಿವಾಸ್ ಅವರನ್ನು ಕೋಲಾರ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಶ್ರೀನಿವಾಸ್ ಅವರು ಕೊನೆಯುಸಿರೆಳೆದಿದ್ದಾರೆ.

ಶ್ರೀನಿವಾಸ್ ಹತ್ಯೆಗೆ ಕಾರಣವೇನು?
ವರದಿಗಳ ಪ್ರಕಾರ, ಶ್ರೀನಿವಾಸ್ ಮತ್ತು ಆರೋಪಿ ವೇಣುಗೋಪಾಲ್ ಇಬ್ಬರೂ ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆಪ್ತರು.
ಕಳೆದ ಏಳು ವರ್ಷಗಳಿಂದ ಶ್ರೀನಿವಾಸ್ ಮತ್ತು ವೇಣುಗೋಪಾಲ್ ನಡುವೆ ಜಮೀನು ವಿವಾದವಿತ್ತು ಎಂದು ತಿಳಿದುಬಂದಿದೆ.
ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿರುವ ವಿವಾದಿತ ಜಮೀನಿನಲ್ಲಿ ಶ್ರೀನಿವಾಸ್ ಅವರು ಬಾರ್ ಅಂಡ್ ರೆಸ್ಟೋರೆಂಟ್ ನಿರ್ಮಿಸುತ್ತಿದ್ದರು. ಇದರಿಂದ ಕೋಪಗೊಂಡ ವೇಣುಗೋಪಾಲ್ ಸೋಮವಾರ ತನ್ನ ಸ್ನೇಹಿತರೊಂದಿಗೆ ಸೇರಿ ಶ್ರೀನಿವಾಸ್ ಅವರನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದೆ.
ಶ್ರೀನಿವಾಸ್ ಅವರು ಗೃಹ ಸಚಿವ ಡಾ ಜಿ ಪರಮೇಶ್ವರ ಅವರ ಆಪ್ತರೂ ಆಗಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ, ರಮೇಶ್ ಕುಮಾರ್ ಸೇರಿದಂತೆ ಹಲವು ಮುಖಂಡರು ಶ್ರೀನಿವಾಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಾಂತ್ವನ ಹೇಳಿದ್ದಾರೆ. ಶ್ರೀನಿವಾಸ್ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ.












Click it and Unblock the Notifications