ಕರ್ನಾಟಕ ಉಪಚುನಾವಣೆ: ಶಿಗ್ಗಾವಿ ಸೇರಿ ಮೂರು ಕ್ಷೇತ್ರಗಳಲ್ಲಿ ಮತದಾನ ಆಗಿದ್ದೆಷ್ಟು?
ಬೆಂಗಳೂರು, ನವೆಂಬರ್ 13: ಕರ್ನಾಟಕ ಉಪಚುನಾವಣೆ ಪೈಕಿ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಮತದಾನ ಆರಂಭವಾಗಿದೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ಈ ಮೂರು ಕ್ಷೇತ್ರಗಳಲ್ಲಿ ಶೇಕಡಾವಾರು 26.3ರಷ್ಟು ಮತದಾನವಾಗಿದೆ ಎಂದು ಕರ್ನಾಟಕ ರಾಜ್ಯ ಚುನಾವಣಾಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ. ಕ್ಷೇತ್ರವಾರು ಮತದಾನ ಮಾಹಿತಿ ಇಲ್ಲಿದೆ.
ಬೆಳಗ್ಗೆ 7ಗಂಟೆಯಿಂದ ಮತದಾನ ಶುರುವಾಗಿದೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ 26ರಷ್ಟು ಮತದಾನವಾಗಿದೆ. ಇನ್ನೂ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ 27.02ರಷ್ಟು ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 25.96ರಷ್ಟು ಮತದಾನವಾಗಿದೆ. ಈ ಮೂರರಲ್ಲಿ ಚನ್ನಪಟ್ಟಣದಲ್ಲಿ ಅತ್ಯಧಿಕ ಮತದಾನವಾಗಿದೆ.

ಇವತ್ತು ಸಂಜೆ 6 ಗಂಟೆವರೆಗೆ ಮತದಾನ ಮುಂದುವರಿಯಲಿದ್ದು, ಮಧ್ಯಾಹ್ನ 1, ಮಧ್ಯಾಹ್ನ 03 ಹಾಗೂ ಸಂಜೆ 4ಗಂಟೆ ಇಲ್ಲವೇ 5 ಗಂಟೆಗೆ ಒಮ್ಮೆ ಮತದಾನ ಪ್ರಯಾಣ ತಿಳಿದು ಬರಲಿದೆ. ಚುನಾವಣಾಧಿಕಾರಿಗಳು ಮತದಾನ ಪೂರ್ಣಗೊಂಡ ನಂತರ ಎಲ್ಲ ಕ್ಷೇತ್ರಗಳ ಮತದಾನ ಪ್ರಮಾಣ ಸಹಿತ ಅಂತಿಮವಾಗಿ ಅಧಿಕೃತ ಮಾಹಿತಿ ಒದಗಿಸಲಿದ್ದಾರೆ.
ಚನ್ನಪಟ್ಟಣದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಜೆಡಿಎಸ್-ಬಿಜೆಪಿಯಿಂದ ನಿಖಿಲ್ ಕುಮಾರಸ್ವಾಮಿ, ಅವರ ವಿರುದ್ಧ ಕಾಂಗ್ರೆಸ್‌ನಿಂದ ಸಿಪಿ ಯೋಗೇಶ್ವರ ಅವರು ಕಣಕ್ಕಿಳಿದಿದ್ದಾರೆ.
ಇನ್ನೂ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿಸ ಕಾಂಗ್ರೆಸ್‌ನಿಂದ ಅನ್ನಪೂರ್ಣ ಅವರು ಕಣಕ್ಕಿಳಿದರೆ, ಅವರ ವಿರುದ್ಧ ಬಿಜೆಪಿಯಿಂದ ಬಂಗಾರು ಹನುಮಂತು ಅವರು ಸ್ಪರ್ಧಿಸಿದ್ದಾರೆ. ಇಲ್ಲಿ ಸಹ ತೀವ್ರ ಪೈಪೋಟಿ ಶುರುವಾಗಿದೆ. ಘಟಾನುಘಟಿ ನಾಯಕರು ಆಯಾ ಅಭ್ಯರ್ಥಿಗಳ ಬೆನ್ನಿಗೆ ನಿಂತು ಭರ್ಜರಿ ಪ್ರಚಾರ ಮಾಡಿದ್ದರು.
ಇತ್ತ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರು ಬಿಜೆಪಿಯಿಂದ ಕಣಕ್ಕಿಳಿದರೆ, ಆಡಳಿತ ಪಕ್ಷ ಕಾಂಗ್ರೆಸ್‌ನಿಂದ ಯಾಸೀರ್ ಖಾನ್ ಪಠಾಣ್ ಅವರು ಸ್ಪರ್ಧೆಗೆ ಇಳಿದಿದ್ದಾರೆ.
ಈ ಮೂರು ಕ್ಷೇತ್ರಗಳು ಬಿಜೆಪಿ-ಜೆಡಿಎಸ್ ಮೈತ್ರಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಇಲ್ಲಿನ ಗೆಲುವು, ಸೋಲು ಆಡಳಿತ ಯಂತ್ರದ ಮೇಲೂ ಪರಿಣಾಮ ಭೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications