ಹಾಲಿನ ಪ್ರೋತ್ಸಾಹಧನ ಬಾಕಿ ಸರ್ಕಾರದ ದಿವಾಳಿಗೆ ಸಾಕ್ಷಿ: ವಿಜಯೇಂದ್ರ ತರಾಟೆ
ರಾಜ್ಯ ಸರ್ಕಾರವು ರೈತರಿಗೆ ಹಾಲಿನ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತರಿಗೆ ನೀಡಬೇಕಿರುವ ಕ್ಷೀರಧಾರೆಗೆ ಹಣವಿಲ್ಲ. ಇತ್ತ ಬಡವರಿಗೂ ಉಪಕಾರಿಯಾಗಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕನ್ನೂ ಹಸನಾಗಿಸಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದುವರೆಗೂ ರಾಜ್ಯದ ರೈತರ ಹಾಲಿನ 606.69 ಕೋಟಿ ರೂಪಾಯಿಗೂ ಹೆಚ್ಚು ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡು ಇದಕ್ಕೆ ಹಣಕಾಸಿನ ಕೊರತೆಯೇ ನೇರ ಕಾರಣ ಎಂದು ಸ್ವತಃ ಪಶುಸಂಗೋಪನಾ ಸಚಿವರೇ ಸದನದಲ್ಲಿ ತಿಳಿಸಿರುವುದು ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರದ ಬೊಕ್ಕಸ ಬರಿದಾಗಿಸಿಕೊಂಡು ದಿವಾಳಿ ಅಂಚಿಗೆ ತಲುಪಿರುವುದನ್ನು ಸಾಕ್ಷೀಕರಿಸುತ್ತಿದೆ ಎಂದು ಹೇಳಿದ್ದಾರೆ.

ಓಲೈಕೆ ರಾಜಕಾರಣಕ್ಕಾಗಿ ಶೋಷಿತರು ಹಾಗೂ ಹಿಂದುಳಿದವರಿಗೆ ಮೀಸಲಿಟ್ಟ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಂಡಿದ್ದ ಈ ಸರ್ಕಾರದಲ್ಲಿ, ರೈತರ ಪ್ರೋತ್ಸಾಹಧನ ಇನ್ಯಾವ ಓಲೈಕೆಗೆ ಬಳಕೆಯಾಗಿದೆಯೋ ತಿಳಿಯದು. ಅಭಿವೃದ್ಧಿ ಶೂನ್ಯ ಆಡಳಿತದ ಮೂಲಕ ರೈತರ ಶ್ರೇಯೋಭಿವೃದ್ಧಿಯೆಡೆಗೆ ಒಂದೇ ಒಂದು ಹೆಜ್ಜೆ ಇಡದ ಜನವಿರೋಧಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದೆ. ಈ ಕೂಡಲೇ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ಸರ್ಕಾರ ಕಳೆದ ಒಂಬತ್ತು ತಿಂಗಳಿಂದ ರೈತರಿಗೆ ಬಾಕಿ ಪ್ರೋತ್ಸಾಹಧನ ನೀಡಿಲ್ಲ. ಈ ಅಕ್ಟೋಬರ್‌ವರೆಗೆ ಪ್ರೋತ್ಸಾಹ ಧನ ಪಾವತಿಯಾಗಿಲ್ಲ, ರೈತರಿಗೆ ಕೊಡಬೇಕಾದ ಬಾಕಿ ಮೊತ್ತ 606.69 ಕೋಟಿ ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ವಿಧಾನಸಭೆಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಪರಿಶಿಷ್ಟ ಜಾತಿಯ ಹೈನುಗಾರರಿಗೆ ಅಕ್ಟೋಬರ್ ತಿಂಗಳ 6.85 ಕೋಟಿ ರೂಪಾಯಿ ಪ್ರೋತ್ಸಾಹಧನ ಬಾಕಿ ಇದೆ. ಎಸ್.ಟಿ ಸಮುದಾಯದ ರೈತರಿಗೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ 9 ಕೋಟಿ ರೂಪಾಯಿ ಪಾವತಿಸಿಲ್ಲ. ಈ ಬಾಕಿ ಹಣವನ್ನು ಕಂತುಗಳಲ್ಲಿ ಪಾವತಿಸುವುದಾಗಿ ಸಚಿವರು ತಿಳಿಸಿದ್ದಾರೆ.
ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡದೆ ರೈತರ ಬದುಕಿನಲ್ಲಿ ಸಿಎಂ ಸಿದ್ದರಾಮಯ್ಯ ಚೆಲ್ಲಾಟವಾಡುತ್ತಿದ್ದಾರೆ. ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿ, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲು ಹೊರಟಿದ್ದಾರೆ. ಬಾಕಿಯಿರುವ ಸಾವಿರ ಕೋಟಿಗೂ ಅಧಿಕ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ರೈತರು ಮನವಿ ಮಾಡಿದರೂ ಪ್ರತಿಕ್ರಿಯಿಸದ ಕಿವುಡ ಕರ್ನಾಟಕ ಸರ್ಕಾರ, ರೈತರಿಗಾಗಿ ದರ ಹೆಚ್ಚಿಸುವುದಾಗಿ ಹೇಳುತ್ತಿರುವುದು ಬರೀ ನವರಂಗಿ ನಾಟಕವಷ್ಟೇ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ರೈತರಿಂದ ಖರೀದಿಸುವ ಹಾಲಿನ ದರ ಕಡಿತಗೊಳಿಸಿ, ಬಾಕಿ ಹಣ ನೀಡದೆ, ಅನ್ನದಾತರ ಬದುಕಿಗೆ ವಿಷ ಹಿಂಡಿದ ಸಿದ್ದರಾಮಯ್ಯನವರು, ಕುರ್ಚಿ ಬಿಡುವ ಮುನ್ನವೇ ಸಾಧ್ಯವಾದಷ್ಟು ದೋಚುವುದಕ್ಕೆ ಸಿದ್ಧತೆ ಮಾಡಿಕೊಂಡಂತಿದೆ ಎಂದು ಟೀಕಿಸಿದೆ. ಇನ್ನು ಇತ್ತೀಚೆಗೆ ಹಾಲಿನ ದರ ಏರಿಕೆ ಅನಿವಾರ್ಯ ಎಂದು ಸಿಎಂ ಹೇಳಿದ್ದರು. ಕೆಎಂಎಫ್ ಕೂಡ ದರ ಏರಿಕೆ ಸುಳಿವು ನೀಡಿತ್ತು. ಆದರೆ, ಹೈನುಗಾರರು ಮೊದಲು ನಮಗೆ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications