ಬೆಳಗಾವಿಯಲ್ಲಿ ಡಿ. 4ರಿಂದ ಅಧಿವೇಶನ; ಪ್ರಶ್ನೋತ್ತರದ ಮಾಹಿತಿ
ಬೆಳಗಾವಿ, ನವೆಂಬರ್ 16: ಬೆಳಗಾವಿಯ ಸುವರ್ಣ ವಿಧಾನಸೌಧ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ತಯಾರಾಗುತ್ತಿದೆ. ಡಿಸೆಂಬರ್ 4ರಿಂದ 15ರ ತನಕ ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳಲು ಶಾಸಕರಿಗೆ ಸೂಚನೆಗಳನ್ನು ಸಹ ನೀಡಲಾಗಿದೆ.
ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ. ಕೆ. ವಿಶಾಲಾಕ್ಷಿ ಚಳಿಗಾಲದ ಅಧಿವೇಶನದ ಬಗ್ಗೆ ಪ್ರಕಟಣೆ ಹೊರಡಿಸಿದ್ದಾರೆ. ಡಿಸೆಂಬರ್ 4ರಂದು ಬೆಳಗ್ಗೆ 11 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗಲಿದೆ.

ಅಧಿವೇಶನ 4, 5, 6, 7, 8, 11, 12, 13, 14 ಮತ್ತು ಡಿಸೆಂಬರ್ 15ರಂದು ನಡೆಯಲಿದೆ. ಕರ್ನಾಟಕ ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧಿವೇಶನದ ಪೂರ್ವಸಿದ್ಧತೆ ಕುರಿತು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ.
ಪ್ರಶ್ನೆ ಕೇಳಲು ಸೂಚನೆಗಳು; ಷರತ್ತುಗಳಿಗೆ ಒಳಪಟ್ಟು ಸಾರ್ವಜನಿಕ ಹಿತದೃಷ್ಟಿಯ ಪ್ರಶ್ನೆಗಳು/ ಸೂಚನೆಗಳನ್ನು ನೀಡಲು ಮಾತ್ರ ಶಾಸಕರಿಗೆ ಅವಕಾಶವಿರುತ್ತದೆ. ನಿಯಮ 39ರ ಮೇರೆಗೆ ಪ್ರಶ್ನೆಗಳನ್ನು ನೀಡಲು ಇರುವ 15 ದಿನಗಳ ಕಾಲಾವಕಾಶವನ್ನು ಮತ್ತು ನಿಯಮ 41ರ ಮೇರೆಗೆ ಉತ್ತರಗಳನ್ನು ಒದಗಿಸಲು ಇರುವ 10 ದಿನಗಳ ಕಾಲಾವಕಾಶವನ್ನು ಪ್ರಸ್ತುತ ಅಧಿವೇಶನದ ಪ್ರಶ್ನೋತ್ತರ ದಿನಾಂಕಗಳ ಅವಧಿಗೆ ಮಾತ್ರ ಕಡಿತಗೊಳಿಸಲಾಗಿದೆ.
ನಿಯಮ 59; ಶಾಸಕರ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಿದ ಅಥವಾ ಮಂಡನೆ ಮಾಡಿದ ಉತ್ತರಗಳಿಂದ ಉದ್ಭವಿಸಿದ ವಿಷಯಗಳನ್ನು ಚರ್ಚಿಸುವ ಸಲುವಾಗಿ ಅಥವಾ ಉತ್ತರಗಳ ಸಂಬಂಧ ಮತ್ತಷ್ಟು ವಿವರಣೆಯನ್ನು ಸರ್ಕಾರದಿಂದ ಅಪೇಕ್ಷೆಪಡುವ ಸಲುವಾಗಿ, ಮಾನ್ಯ ಶಾಸಕರು ಅರ್ಧ ಗಂಟೆ ಕಾಲಾವಧಿ ಚರ್ಚೆಯ ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ. (ಈ ಸೂಚನೆಗಳ ಮೇಲೆ, ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಗುರುವಾರಗಳಂದು ಚರ್ಚೆ ನಡೆಸಲು ಅನುಮತಿಸಲಾಗುವುದು) ಅರ್ಧ ಗಂಟೆ ಕಾಲಾವಧಿಯ ಸೂಚನಾ ಪತ್ರವನ್ನು ಮೂರು ದಿನ ಮುಂಚಿತವಾಗಿಯೇ ಕಾರ್ಯದರ್ಶಿಯವರಿಗೆ ನೀಡತಕ್ಕದ್ದು.
ಶೂನ್ಯ ವೇಳೆ (ನಿಯಮ 59ಎ, ಬಿ, ಸಿ ಮತ್ತು ಡಿ); ಅಧಿವೇಶನದ ಅವಧಿಯಲ್ಲಿ ನಿಗದಿಪಡಿಸಿದ ಪ್ರತಿ ಉಪವೇಶನಗಳ ದಿನಗಳಲ್ಲಿ, ಉಪವೇಶನ ಮುಕ್ತಾಯಗೊಂಡ ಅವಧಿಯಿಂದ, ಮರುದಿನದ ಉಪವೇಶನ ಪ್ರಾರಂಭಗೊಳ್ಳುವ ನಡುವಿನ ಅವಧಿಯಲ್ಲಿ ಸಂಭವಿಸಿದ ಸಾರ್ವಜನಿಕ ಮಹತ್ವವುಳ್ಳ ಯಾವುದೇ ಘಟನಾವಳಿಯನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ, ಶೂನ್ಯ ವೇಳೆಯ ಸೂಚನೆಗಳನ್ನು ನೀಡಲು ಶಾಸಕರಿಗೆ ಅವಕಾಶವಿರುತ್ತದೆ. ಒಂದು ದಿನಕ್ಕೆ ಒಂದು ಶೂನ್ಯ ವೇಳೆಯ ಸೂಚನೆಯನ್ನು ಮಾತ್ರ ನೀಡಲು ಅವಕಾಶವಿರುತ್ತದೆ.
ನಿಲುವಳಿ ಸೂಚನೆ (ನಿಯಮ 60); ಭಾರತ ಸಂವಿಧಾನದ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸರ್ಕಾರ ವಿಫಲವಾದ ನಿರ್ದಿಷ್ಟ ವಿಷಯ, ಸಾರ್ವಜನಿಕವಾಗಿ ಅತ್ಯಂತ ಮಹತ್ವವಾದ ಮತ್ತು ಜರೂರಾದ ವಿಷಯಗಳನ್ನು ನಿಲುವಳಿ ಸೂಚನೆಯ ರೂಪದಲ್ಲಿ (ಪ್ರಶೋತ್ತರ, ಶೂನ್ಯ ವೇಳೆ ಮತ್ತು ಕಾಗದ ಪತ್ರಗಳ ಮಂಡನೆಯ ತರುವಾಯ) ಪ್ರಸ್ತಾಪ ಮಾಡಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ.
ನಿಯಮ 69ರ ಸೂಚನೆಗಳು; ಇತ್ತೀಚೆಗೆ ಜರುಗಿದ ಸಾರ್ವಜನಿಕ ಮಹತ್ವವುಳ್ಳ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಸಲುವಾಗಿ ಈ ನಿಯಮದಡಿ ಮಾನ್ಯ ಶಾಸಕರು ಸೂಚನೆಗಳನ್ನು ನೀಡಬಹುದಾಗಿರುತ್ತದೆ.
ಗಮನ ಸೆಳೆಯುವ ಸೂಚನೆಗಳು (ನಿಯಮ 73); ಯಾವುದೇ ಸಾರ್ವಜನಿಕ ಹಿತದೃಷ್ಟಿಯ ಮಹತ್ವದ ವಿಷಯಗಳನ್ನು ಮಾನ್ಯ ಸಚಿವರ ಗಮನಕ್ಕೆ ತರಲಿಚ್ಛಿಸುವ ಸಲುವಾಗಿ ಮಾನ್ಯ ಶಾಸಕರು ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ.
ಖಾಸಗಿ ಸದಸ್ಯರ ಕಾರ್ಯಕಲಾಪಗಳು; ಖಾಸಗಿ ಸದಸ್ಯರ ವಿಧೇಯಕಗಳು. ಖಾಸಗಿ ಸದಸ್ಯರ ವಿಧೇಯಕಗಳನ್ನು ನಿಯಮ 15(1) ಮತ್ತು (2)ರಡಿ ಮಾನ್ಯ ಸದಸ್ಯರು ಸದನದಲ್ಲಿ ಮಂಡಿಸಲು ಅವಕಾಶವಿರುತ್ತದೆ. ಖಾಸಗಿ ಸದಸ್ಯರ ನಿರ್ಣಯಗಳು. ನಿಯಮ 32ರಡಿ ಸಾರ್ವಜನಿಕ ಹಿತದೃಷ್ಟಿಯ ಖಾಸಗಿ ಸದಸ್ಯರ ನಿರ್ಣಯವನ್ನು ಸದನದಲ್ಲಿ ಮಂಡಿಸಲು ಅವಕಾಶವಿರುತ್ತದೆ.
ಗಮನ ಸೆಳೆಯುವ ಸೂಚನೆ ನಿಯಮ 351ರ ಸೂಚನೆ, ಖಾಸಗಿ ವಿಧೇಯಕಗಳು/ ನಿರ್ಣಯಗಳಿಗೆ ಸಂಬಂಧಿಸಿದ ಸೂಚನೆಗಳನ್ನು ಪ್ರಶ್ನೆಗಳ ಶಾಖೆಯ ಒಳಗೆ ಇಟ್ಟಿರುವ ಮರದ ಪೆಟ್ಟಿಗೆಯಲ್ಲಿ ಹಾಕತಕ್ಕದ್ದು. ಶೂನ್ಯ ವೇಳೆ, ಅರ್ಧ ಗಂಟೆ ಕಾಲಾವಧಿ ಚರ್ಚೆ, ನಿಲುವಳಿ ಸೂಚನೆ ಹಾಗೂ ನಿಯಮ 69ರ ಸೂಚನೆಗಳನ್ನು ಶಾಸನ ರಚನಾ ಶಾಖೆಯಲ್ಲಿ ನೀಡತಕ್ಕದ್ದು.












Click it and Unblock the Notifications