Assembly Session Day 1 : ಕಲಾಪದಲ್ಲಿ ಅಬ್ಬರಿಸಿದ ವಿಪಕ್ಷ, ಸರ್ಕಾರಕ್ಕೆ ಸಂಕಟ
ಬೆಂಗಳೂರು, ಅಕ್ಟೋಬರ್ 10 : ರಾಜ್ಯದ ಭೀಕರ ಪ್ರವಾಹ ಪರಿಸ್ಥಿತಿ, ಉಪ ಚುನಾವಣೆ ಕಾವಿನ ನಡುವೆ ಮೂರು ದಿನಗಳ ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಅಸ್ತಿತ್ವಕ್ಕೆ ಬಂದ ಬಳಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.
ಗುರುವಾರ ಬೆಳಗ್ಗೆ 11 ಗಂಟೆಗೆ ಸಂತಾಪ ಸೂಚನೆಯೊಂದಿಗೆ ಕಲಾಪವನ್ನು ಆರಂಭಿಸಲಾಯಿತು. ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಿಲುವಳಿ ಸೂಚನೆ ಮಂಡಿಸಿದವು.
ಸಂತಾಪ ಸೂಚನೆ ಬಳಿಕ ಪ್ರವಾಹದ ಬಗ್ಗೆ ಚರ್ಚೆ ಆರಂಭಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಆಡಳಿ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಕಲಾಪ ಮುಂದೂಡುವ ಸಂಪ್ರದಾಯವಿದೆ. ಆದರೆ, ಮೂರು ದಿನದ ಅಧಿವೇಶನ ಆದ್ದರಿಂದ ಸಂತಾಪ ಸೂಚನೆ ಬಳಿಕ ಕಲಾಪ ನಡೆಸಲು ಸ್ಫೀಕರ್ ಅವಕಾಶ ಮಾಡಿಕೊಟ್ಟರು.

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಪ್ರವಾಹ ಪರಿಸ್ಥಿತಿ ಬಗ್ಗೆ ಸುಧೀರ್ಘವಾಗಿ ಮಾತನಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಕೈಗೊಂಡಿದ್ದ ಕಾರಣ ಜೆಡಿಎಸ್ ಸದಸ್ಯರ ಬಲ ಸದನದಲ್ಲಿ ಕಡಿಮೆ ಇತ್ತು.
ಅಧಿವೇಶನ ವರದಿಗೆ ಖಾಸಗಿ ಮಾಧ್ಯಗಳಿಗೆ ನಿರ್ಬಂಧ ಹಾಕಿರುವ ವಿಚಾರದ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ಪ್ರತಿಪಕ್ಷಗಳು ಮಾಧ್ಯಮಗಳನ್ನು ದೂರವಿಟ್ಟು ಸದನ ನಡೆಸುವ ಸರ್ಕಾರದ ತೀರ್ಮಾನವನ್ನು ಖಂಡಿಸಿದವು.
ಗುರುವಾರದ ಕಲಾಪದ ಅಂತ್ಯದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೂರು ದಿನದ ಕಲಾಪವನ್ನು ವಿಸ್ತರಣೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಸ್ಪೀಕರ್ ಇದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಅಂತಿಮವಾಗಿ ಕಲಾಪವನ್ನು ಶುಕ್ರವಾರ ಬೆಳಗ್ಗೆ 10ಗಂಟೆಗೆ ಮೂಂದೂಡಲಾಯಿತು. ಗುರುವಾರದ ಕಲಾಪದ ಕ್ಷಣ-ಕ್ಷಣ ಮಾಹಿತಿ ಇಲ್ಲಿದೆ.












Click it and Unblock the Notifications