Karnataka Elections 2023 : ಕರ್ನಾಟಕ ವಿಧಾನಸಭಾ ಚುನಾವಣೆ 2023: ಈ ಬಾರಿ ಎರಡು ಹಂತದಲ್ಲಿ ನಡೆಯಲಿದೆ ಮತದಾನ!
ದೇಶದ ಗಮನವೇ ನಿಂತಿರುವುದು ರಾಜ್ಯ ಚುನಾವಣೆಯ ಮೇಲೆ. ಚುನಾವಣಾ ಆಯೋಗ ಯಾವಾಗ ಅಧಿಸೂಚನೆ ಹೊರಡಿಸಲಿದೆಯೋ ಎಂಬುದರ ಮೇಲೆ ಎಲ್ಲರ ಗಮನ ನಿಂತಿದ್ದು, ಹೊಸ ಮಾಹಿತಿಯೊಂದು ಹೊರಬಂದಿದೆ.
ಬೆಂಗಳೂರು, ಫೆಬ್ರವರಿ. 13: ಮುಂದಿನ ವರ್ಷ ನಡೆಯಲಿರುವ ರಾಷ್ಟ್ರೀಯ ಚುನಾವಣೆಗೆ ದಿಕ್ಸೂಚಿ ಎನ್ನಲಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಎಲ್ಲರ ಗಮನವಿದ್ದು, ಈ ಬಾರಿಯ ಚುನಾವಣೆಯಲ್ಲಿ ಒಂದೆರಡು ಬದಲಾವಣೆಗಳಾಗುವ ಸಾಧ್ಯತೆಯಿದೆ.
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಂತೆ ಈ ಬಾರಿ ಒಂದು ಹಂತದಲ್ಲಿ ಮತದಾನ ನಡೆಸದೇ ಎರಡು ಹಂತಗಳಲ್ಲಿ ಮತದಾನಕ್ಕೆ ದಿನಾಂಕ ನಿಗದಿ ಮಾಡಲು ಚುನಾವಣಾ ಆಯೋಗ ನಿರ್ಧರಿಸಿದೆ.
ಬಹು ನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ 3ನೇ ವಾರದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದತೆ ನಡೆಸಿದ್ದು, ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ಬಾರಿಯ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಪರಿವರ್ತನೆಯಗಿರುವುದು ಈಗಾಗಲೇ ಕಂಡು ಬರುತ್ತಿದೆ. ರಾಜಕೀಯ ಪಕ್ಷಗಳು ಚುನಾವಣೆ ಘೋಷಣೆಯಾಗುವ ಮೊದಲೆ ಅಧಿಕಾರಕ್ಕಾಗಿ ಚುನಾವಣ ಪ್ರಚಾರಗಳನ್ನು ಆರಂಭಿಸಿವೆ. ಇದೇ ಆತಂಕದಲ್ಲಿ ಒಂದು ಹಂತದಲ್ಲಿ ಮತದಾನವಾದರೇ ಹಿಂಸಾತ್ಮಕ ಪ್ರಕರಣಗಳು ಹೆಚ್ಚಾಗುವ ಬಗ್ಗೆ ವರದಿಗಳು ಬಂದಿದ್ದು, ಚುನಾವಣಾ ಆಯೋಗ ಎರಡು ಹಂತಗಳಲ್ಲಿ ಮತದಾನಕ್ಕೆ ನಿರ್ಧರಿಸಿದೆ ಎನ್ನಲಾಗಿದೆ.
ಕಳೆದ ವರ್ಷಗಳ ಅಂದರೆ 2013 ಮತ್ತು 2018ರ ವಿಧಾನಸಭಾ ಚುನಾವಣೆಗಳಲ್ಲಿ ಒಂದು ಹಂತದಲ್ಲಿ ಮತದಾನವಾಗಿತ್ತು. ಆಗ ದೊಡ್ಡ ಹಿಂಸಾತ್ಮಕ ಘಟನೆಗಳು ವರದಿಯಾಗಿರಲಿಲ್ಲ. ಆದರೆ, ಇಂದಿನ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಸಮ್ಮಿಶ್ರ ಸರ್ಕಾರಗಳಿಂದ ಬೇಸತ್ತಿರುವ ಜಾತ್ಯಾತೀತ ಜನತಾದಳ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲೇ ಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್, ಅಧಿಕಾರವನ್ನು ಉಳಿಸಿಕೊಳ್ಳಲೇ ಬೇಕು ಎಂಬ ಒತ್ತಡದಲ್ಲಿರುವ ಬಿಜೆಪಿ. ಈ ಮೂರು ಪಕ್ಷಗಳ ಚುನಾವಣಾ ಪ್ರಚಾರವನ್ನು ಗಮನಿಸಿದರೇ ಈ ಬಾರಿಯ ಎಲೆಕ್ಷನ್ ಮೂರು ಪಕ್ಷಗಳಿಗೂ ಪ್ರಮುಖವಾಗಿದೆ.

ಈ ಹಿನ್ನೆಲೆಯಲ್ಲಿ ಚುನಾವಣೆ ಒಂದು ಹಂತದಲ್ಲಿ ನಡೆದರೇ, ಹೆಚ್ಚು ಹಿಂಸಾತ್ಮಕ ಘಟನೆಗಳು ನಡೆಯುವ ಸಾಧ್ಯತೆಯಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಆಗುವುದಿಲ್ಲ. ಪೊಲೀಸ್ ಸಿಬ್ಬಂದಿ ಕೊರತೆಯಾಗುತ್ತದೆ. ಇಷ್ಟು ವರ್ಷಗಳಲ್ಲಿ ಕಾಣದ ಮಾತಿನ ಜಿದ್ದಾಜಿದ್ದಿ ಈಗ ಬೇರೆ ಸ್ವರೂಪ ಪಡೆದುಕೊಳ್ಳುತ್ತಿರುವುದು ಕೂಡ ಹಿಂಸಾತ್ಮಕ ಘಟನೆಗಳು ನಡೆಯಬಹುದು ಎಂಬ ಆತಂಕಕ್ಕೆ ಕಾರಣವಾಗಿವೆ.
ಮಾತಿಗೆ ಮಾತ್ರ ಸೀಮಿತವಾಗಿದ್ದ ನಾಯಕರ ಹೇಳಿಕೆಗಳು, ಹೆಚ್ಚು ಕಠೋರವಾಗುತ್ತಿದ್ದು, ಪ್ರತಿಪಕ್ಷಗಳ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಲಾಗುತ್ತಿದೆ. ಇದು ಪಕ್ಷದ ಕಾರ್ಯಕರ್ತರನ್ನು ರೊಚ್ಚಿಗೊಳಿಸಲು ಕಾರಣವಾಗಬಹುದು ಎನ್ನಲಾಗುತ್ತಿದೆ.
ಇನ್ನು, ಚುನಾವಣಾ ಆಯೋಗ ಚುನಾವಣೆಗೆ ಅಗತ್ಯವಿರುವ ಸಿದ್ಧತೆಗಳನ್ನು ಬಹುತೇಕ ಪೂರ್ಣಗೊಳಿಸಿದ್ದು, ಏಪ್ರಿಲ್ ತಿಂಗಳ 2ನೇ ವಾರದಲ್ಲಿ ಎಲೆಕ್ಷನ್ ದಿನಾಂಕವನ್ನು ಘೋಷಣೆ ಮಾಡಲಿದೆ. ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ. ಇವಿಎಂ ಯಂತ್ರ ಉಪಯೋಗಿಸುವ ಕುರಿತಂತೆ ತರಬೇತಿ, ಭದ್ರತೆ ಸೇರಿದಂತೆ ಚುನಾವಣೆಗೆ ಬೇಕಿರುವ ಪ್ರಕ್ರಿಯೆಗಳು ಆರಂಭವಾಗಿದೆ.
ಇನ್ನು, ಮೇ ತಿಂಗಳ ಮೂರನೇ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಮೇ 20ರೊಳಗೆ ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆ ಮುಗಿಯಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications