Govind Karjol: ಈ ಬಾರಿ ಗೋವಿಂದ ಕಾರಜೋಳಗೆ ಗೆಲುವು ಅಷ್ಟೊಂದು ಸುಲಭವಲ್ಲ! ಸ್ವಲ್ಪ ಯಾಮಾರಿದ್ರೂ ಸೋಲು ಫಿಕ್ಸ್!
ಸಚಿವ ಗೋವಿಂದ ಕಾರಜೋಳ ಅವರು ಸ್ಪರ್ಧಿಸುವ ಮುಧೋಳ ಕ್ಷೇತ್ರದದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿ ಇದೆ ಎಂದು ಸಮೀಕ್ಷೆ ಹೇಳಿದೆ.
ಬಾಗಲಕೋಟೆ,ಮಾರ್ಚ್20: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಪ್ರಚಾರದ ಕಣ ರಂಗೇರುತ್ತಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಈಗಾಗಲೇ ಪ್ರಕಟವಾಗುತ್ತಿದ್ದು, ಹಲವು ಪ್ರಮುಖರ ಸೋಲು - ಗೆಲುವಿನ ಭವಿಷ್ಯ ನುಡಿದಿವೆ. ಅದರಂತೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಈ ಸಲದ ಚುನಾವಣೆ ಅಷ್ಟೊಂದು ಸುಲಭವಲ್ಲ ಎಂದು ಲೋಕಪಾಲ್ ಸಮೀಕ್ಷೆ ಭವಿಷ್ಯ ನುಡಿದಿದೆ. ಸ್ವಲ್ಪ ಯಾಮಾರಿದ್ರೂ ಸೋಲು ಕಟ್ಟಿಟ್ಟ ಬುತ್ತಿ ಎಂದು ಸರ್ವೇ ಹೇಳಿದೆ.
ಸದ್ಯ ಗೋವಿಂದ ಕಾರಜೋಳ ಪ್ರತಿನಿಧಿಸುತ್ತಿರುವ ಮುಧೋಳ ವಿಧಾನಸಭಾ ಕ್ಷೇತ್ರ ಈ ಸಲದ ಚುನಾವಣೆಯಲ್ಲಿ ರೋಚಕ ಕಾಳಗಕ್ಕೆ ಸಾಕ್ಷಿಯಾಗಲಿದೆ. ಮಾಜಿ ಡಿಸಿಎಂ, ಪ್ರಸ್ತುತ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿರುವ ಗೋವಿಂದ ಕಾರಜೋಳ ಮತ್ತೆ ಮುಧೋಳ ಕ್ಷೇತ್ರದಿಂದ ಕಣಕ್ಕಿಳಿಯುವು ಖಚಿತವಾಗಿದೆ. ಆದರೆ, ಅವರಿಗೆ ಆಡಳಿತ ವಿರೋಧಿ ಅಲೆ ಬಹುವಾಗಿ ಕಾಡಲಿದ್ದು, ಸೋಲು ಮತ್ತು ಗೆಲುವು ಎರಡರ ನಡುವೆ ಪಯಣಿಸುತ್ತಿದ್ದಾರೆ ಎಂದು ಲೋಕಪಾಲ್ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಸಮೀಕ್ಷೆಯ ಪ್ರಕಾರ ಶೇ.48ರಷ್ಟು ಒಲವು ಮಾತ್ರ ಗೋವಿಂದ ಕಾರಜೋಳ ಅವರಿಗೆ ವ್ಯಕ್ತವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಶೇ.46ರಷ್ಟು ಒಲವು ವ್ಯಕ್ತವಾಗಿದೆ. ಜೆಡಿಎಸ್ ಅಭ್ಯರ್ಥಿ ಪರ ಶೇ.04, ಇತರೆ ಅಭ್ಯರ್ಥಿಗಳ ಪರ ಜನರಿಂದ ಶೇ.02ರಷ್ಟು ಒಲವು ವ್ಯಕ್ತವಾಗಿದೆ. ಗೋವಿಂದ ಕಾರಜೋಳ ಅವರು ಹಿರಿಯ ದಲಿತ ನಾಯಕ ಎಂಬುದು ಸಕಾರಾತ್ಮಕ ಅಂಶವಾದರೆ, ಆಡಳಿತ ವಿರೋಧಿ ಅಲೆ ಹಾಗೂ ರಮೇಶ್ ಜಾರಕಿಹೊಳಿ ವಿವಾದ ಕಾರಜೋಳ ಗೆಲುವಿಗೆ ಅಡಚಣೆ ಆಗಬಹುದು ಎಂಬುದು ಲೋಕಪಾಲ್ ಸಮೀಕ್ಷೆಯಲ್ಲಿ ಕಂಡುಬಂದಿದೆ.
ಮುಧೋಳ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಆದರೆ, ಕಾಂಗ್ರೆಸ್ ಟಿಕೆಟ್‌ಗಾಗಿ ಕಳೆದ ಬಾರಿಯ ಚುನಾವಣೆಯ ಪರಾಜಿತ ಅಭ್ಯರ್ಥಿ ಸತೀಶ್ ಬಂಡಿವಡ್ಡರ್ ಹಾಗೂ ಮಾಜಿ ಸಚಿವ ಆರ್‌ಬಿ ತಿಮ್ಮಾಪೂರ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಫಿಕ್ಸ್ ಆಗಲಿದ್ದು, ಕಾಂಗ್ರೆಸ್ ಏನಾದರೂ ತಂತ್ರ ರೂಪಿಸಿದರೆ ತನ್ನ ಅಭ್ಯರ್ಥಿಯನ್ನು ಗೆಲುವಿನ ದಡಕ್ಕೆ ಸೇರಿಸಬಹುದಾದ ಎಲ್ಲ ಲಕ್ಷಣಗಳು ಕಾಣಸಿಗುತ್ತಿವೆ.

ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2018ರ ಸಾರ್ವತ್ರಿಕ ಚುನಾವಣೆಯಲ್ಲಿ ಗೋವಿಂದ ಕಾರಜೋಳ ಅವರು 16 ಸಾವಿರ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಬಂಡಿವಡ್ಡರ್ ಅವರನ್ನು ಸೋಲಿಸಿದ್ದರು. ಇಬ್ಬರ ನಡುವಿನ ಮತ ಪ್ರಮಾಣದಲ್ಲಿ ಶೇ.10ರಷ್ಟು ಮಾತ್ರ ಅಂತರವಿತ್ತು. ಆಡಳಿತ ವಿರೋಧಿ ಅಲೆ ಪರಿಣಾಮ ಆ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ತನ್ನತ್ತ ವರ್ಗಾಯಿಸಿಕೊಳ್ಳುವ ಸಾಧ್ಯತೆ ಇದೆ. ಕಳೆದ ಬಾರಿ ಮಾಜಿ ಸಚಿವ ಆರ್‌ಬಿ ತಿಮ್ಮಾಪೂರ್‌ಗೆ ಕಾಂಗ್ರೆಸ್ ಟಿಕೆಟ್ ಸಿಗದೇ ಸತೀಶ್ ಬಂಡಿವಡ್ಡರ್‌ಗೆ ಸಿಕ್ಕಿದ್ದರಿಂದ ತಿಮ್ಮಾಪೂರ್ ತಟಸ್ಥರಾಗಿ ಉಳಿದರು. ಇದು ಗೋವಿಂದ ಕಾರಜೋಳಗೆ ಪ್ಲಸ್ ಆಗಿ ಅದು ಕೂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಈಗ ಈ ಇಬ್ಬರು ನಾಯಕರೂ ಒಂದಾಗಿದ್ದು, ಯಾರಿಗೆ ಟಿಕೆಟ್ ಸಿಕ್ಕರೂ ಒಟ್ಟಿಗೆ ಕೆಲಸ ಮಾಡೋಣ ಎಂಬ ಒಪ್ಪಂದಕ್ಕೆ ಬಂದಿರುವುದರಿಂದ ಗೋವಿಂದ ಕಾರಜೋಳ ಅವರು ಗೆಲ್ಲಲು ಸ್ವಲ್ಪ ಜಾಸ್ತಿಯೇ ಕಷ್ಟ ಪಡಬೇಕಿದೆ.
ಮುಧೋಳ ಅಂದ್ರೇ ಕಾರಜೋಳ VS ತಿಮ್ಮಾಪೂರ!
1994 ರಿಂದಲೂ ಮುಧೋಳ ಕ್ಷೇತ್ರ ಎಂದರೆ ಗೋವಿಂದ ಕಾರಜೋಳ ವರ್ಸಸ್ ಆರ್‌ಬಿ ತಿಮ್ಮಾಪೂರ ಆಗಿತ್ತು. 2018 ಹೊರತು ಪಡಿಸಿ ಇಬ್ಬರೂ 5 ಚುನಾವಣೆಗಳಲ್ಲಿ ಎದುರಾಳಿಗಳಾಗಿದ್ದು, ಒಂದು ಬಾರಿ ಆರ್‌ಬಿ ತಿಮ್ಮಾಪೂರ ಗೆಲುವು ಕಂಡಿದ್ದರೆ, 4 ಬಾರಿ ಗೋವಿಂದ ಕಾರಜೋಳ ಶಾಸಕರಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಆರ್‌ಬಿ ತಿಮ್ಮಾಪೂರ ಬದಲಿಗೆ ಸತೀಶ್ ಬಂಡಿವಡ್ಡರ್‌ಗೆ ಟಿಕೆಟ್ ನೀಡಿಯೂ ಕೈ ಸುಟ್ಟುಕೊಂಡಿತ್ತು. ಆದರೆ, ಈ ಬಾರಿ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದ್ದು, ಗೋವಿಂದ ಕಾರಜೋಳ ಅವರಿಗೂ ಇದರ ಎಫೆಕ್ಟ್ ತಟ್ಟುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.












Click it and Unblock the Notifications