ಹಾಲು ಉತ್ಪಾದನೆಯಲ್ಲಿ ಹೊಸ ದಾಖಲೆ ಬರೆದ ಕೆಎಂಎಫ್; ಗೋಪೂಜೆ ಮಾಡಿದ ಸಿಎಂ ಸಿದ್ದರಾಮಯ್ಯ
ಹಾಲು ಉತ್ಪಾದನೆ ವಿಚಾರದಲ್ಲಿ ಕನ್ನಡಿಗರ ಹೆಮ್ಮೆಯ ಕೆಎಂಎಫ್ ಹೊಸ ದಾಖಲೆ ಬರೆದಿದೆ. ದಿನವೊಂದಕ್ಕೆ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದ್ದು, ಹೊಸ ಮೈಲಿಗಲ್ಲು ಸಾಧಿಸಿದೆ.
ಇದೇ ಮೊದಲ ಬಾರಿಗೆ ಕೆಎಂಎಫ್ ಹಾಲು ಸಂಗ್ರಹ ದಿನವೊಂದಕ್ಕೆ ಒಂದು ಕೋಟಿ ಲೀಟರ್ ತಲುಪಿದೆ. ಪ್ರತಿ ದಿನ 10 ಲಕ್ಷ ಲೀಟರ್ ಹಾಲು ಹೆಚ್ಚು ಉತ್ಪಾದನೆಯಾಗುತ್ತಿದ್ದು ಅದನ್ನು ಮಾರಾಟ ಮಾಡುವುದೇ ಕೆಎಂಎಫ್‌ಗೆ ದೊಡ್ಡ ಸವಾಲಾಗಿದೆ.

ಮಳೆಗಾಲದ ಆರಂಭದಲ್ಲೇ ಹಾಲು ಉತ್ಪಾದನೆಯಲ್ಲಿ ಹೊಸ ದಾಖಲೆ ಬರೆದಿದ್ದು, ಮುಂದಿನ ದಿನಗಳಲ್ಲಿ ಹಾಲಿನ ಉತ್ಪಾದನೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಾಲಿನ ಉತ್ಪಾದನೆಯಲ್ಲಿ ಹೊಸ ದಾಖಲೆ ಬರೆಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಗೂಪೂಜೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರಿನ ಕೆಎಂಎಫ್ ಕಚೇರಿಯಲ್ಲಿ ಗೋಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಎಂಎಫ್ ಮೊಟ್ಟ ಮೊದಲ ಬಾರಿಗೆ ಒಂದು ಕೋಟಿ ಲೀಟರ್ ಹಾಲನ್ನು ಸಂಗ್ರಹಿಸಿ ನಾಡಿನ ಹೈನುಗಾರಿಕೆಯಲ್ಲಿ ಹೊಸದೊಂದು ದಾಖಲೆ ನಿರ್ಮಿಸಿದೆ. ಸಾಧನೆಯ ಹಿಂದಿನ ಶಕ್ತಿಯಾಗಿರುವ ನಾಡಿನ ರೈತಾಪಿ ವರ್ಗಕ್ಕೆ ಧನ್ಯವಾದ ಎಂದು ಹೇಳಿದರು.
ರಾಜ್ಯದಲ್ಲಿ ನಿತ್ಯ ಸರಾಸರಿ 10 ಲಕ್ಷ ಲೀಟರ್ ಹಾಲು ಹೆಚ್ಚುವರಿಯಾಗಿ ಉತ್ಪಾದನೆ ಆಗುತ್ತಿದೆ. ರೈತರು ಹೆಚ್ಚು ಉತ್ಪಾದಿಸಿ ತರುತ್ತಿರುವ ಹಾಲನ್ನು ಡೈರಿಗೆ ತರಬೇಡಿ ಎಂದು ನಿರಾಕರಿಸೋಕೆ ಆಗುವುದಿಲ್ಲ, ಅವರಿಂದ ಖರೀದಿ ಮಾಡಲೇಬೇಕು ಎಂದು ನಿರ್ಧರಿಸಿ ಈ ಮೊದಲು ಮಾರಾಟ ಮಾಡುತ್ತಿದ್ದ ಹಾಲಿನ ಪ್ಯಾಕೇಟ್ ಗಳಿಗೆ 50 ಮಿಲೀ ಹಾಲನ್ನು ಹೆಚ್ಚು ಸೇರಿಸಿ 2 ರೂಪಾಯಿ ಹೆಚ್ಚು ಹಣ ಸಂಗ್ರಹಿಸಲಾಗುತ್ತಿದೆ. ಇದನ್ನೇ ವಿರೋಧಪಕ್ಷಗಳು ಬೆಲೆಯೇರಿಕೆ ಎನ್ನುತ್ತಿದ್ದಾರೆ, ಅವರಿಗೆ ರೈತರ ಹಿತಕ್ಕಿಂತ ರಾಜಕೀಯವೇ ಮುಖ್ಯವಾಗಿದೆ ಎಂದು ವಿಪಕ್ಷಗಳ ಟೀಕೆಗಳಿಗೆ ಉತ್ತರ ನೀಡಿದರು.
ಕಾಂಗ್ರೆಸ್ ಟ್ವೀಟ್
ಕೆಎಂಎಫ್ ಸಾಧನೆ ಬಗ್ಗೆ ಕರ್ನಾಟಕ ಕಾಂಗ್ರೆಸ್ ಕೂಡ ಟ್ವೀಟ್ ಮಾಡಿದೆ. ರಾಜ್ಯದ ಕೆಎಂಎಫ್ ಇತಿಹಾಸದಲ್ಲಿ ದಾಖಲೆ ಸೃಷ್ಟಿಯಾಗಿದೆ. ಕೆಎಂಎಫ್ ಹಾಲು ಸಂಗ್ರಹದಲ್ಲಿ ಇದೇ ಮೊದಲ ಬಾರಿಗೆ 1 ಕೋಟಿ ಲೀಟರ್ ಗೆ ತಲುಪಿದೆ. ಬರ ಎದುರಿಸಿಯೂ ಕೂಡ ರಾಜ್ಯದಲ್ಲಿ ಹೈನೋಧ್ಯಮ ಉತ್ತಮ ಸ್ಥಿತಿಗೆ ತಲುಪಿದ್ದು ಸಂತಸದ ವಿಷಯ. ಹಾಲು ಉತ್ಪಾದನೆಯಲ್ಲಿ ದಾಖಲೆ ನಿರ್ಮಿಸಿದ್ದು ಸಮೃದ್ಧ ಕರ್ನಾಟಕದ ಪ್ರತೀಕವಾಗಿದೆ ಎಂದು ಹೇಳಿದರು.












Click it and Unblock the Notifications