2nd PUC 'ವಾಣಿಜ್ಯ' ವಿಭಾಗದಲ್ಲಿ ಶೇ.88.4ರಷ್ಟು ಸಾಧನೆ: ಇಬ್ಬರಿಗೆ 600ಕ್ಕೆ 600 ಅಂಕ, ಇವರೇ ಟಾಪರ್ಸ್
ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ 2026 ಪ್ರಕಟವಾಗಿದೆ. ವಾಣಿಜ್ಯ ವಿಭಾಗದಲ್ಲಿಯೂ ಫಲಿತಾಂಶ ಆಶಾದಾಯಕವಾಗಿದೆ. ಶೇಕಡಾ 88.4ರಷ್ಟು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ. ಲೆಕ್ಕಪತ್ರ ನಿರ್ವಹಣೆ, ಹಣಕಾಸು ಮತ್ತು ವ್ಯವಹಾರ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಇದು ಸದಾವಕಾಶ ಒದಗಿಸಿದ್ದು, ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ಯಾರೆಲ್ಲ ವಾಣಿಜ್ಯ ವಿಭಾಗದಲ್ಲಿ ಟಾಪರ್ ಆಗಿದ್ದಾರೆ, ಎಷ್ಟು ಮಂದಿ ಉತ್ತೀರ್ಣ, ಕಳೆದ ವರ್ಷ ತೇರ್ಗಡೆ ಮಾಹಿತಿ ಇಲ್ಲಿದೆ
ಪಿಯುಸಿ 2026ರ ವಾಣಿಜ್ಯ ವಿಭಾಗದಲ್ಲಿ ಒಟ್ಟು 2,07,085 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ 1,82,317 ಮಂದಿ ಉತ್ತೀರ್ಣರಾಗಿದ್ದು, ಉಜ್ವಲ ಭವಿಷ್ಯದ ಕನಸು ಕಾಣುತ್ತಿದ್ದಾರೆ. ಈ ವಿಭಾಗದ ಒಟ್ಟು ತೇರ್ಗಡೆ ಪ್ರಮಾಣ ಶೇ. 88.04ರಷ್ಟಕ್ಕೆ ಹೆಚ್ಚಾಗಿದೆ. ಇನ್ನೂ ಕಾಮರ್ಸ್ ವಿಭಾಗದಲ್ಲಿ ಅತ್ಯಧಿಕ ಅಂಕಗಳನ್ನು (ಟಾಪರ್ಸ್) 32 ಮಂದಿ ಪಡೆದಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ

600ಕ್ಕೆ 600 ಅಂಕ ಪಡೆದ ಅದಿತಿ, ದಿಶಾ!
ಈ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿನಿಯರು 600ಕ್ಕೆ 600 ಅಂಕಗಳನ್ನು ಪಡೆಯುವ ಮೂಲಕ ಅಸಾಧಾರಣ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ವಿ.ವಿ. ಪುರಂನ ಜೈನ್ ಪಿಯು ಕಾಲೇಜಿನ ಅದಿತಿ ಎ. ಮತ್ತು ದಕ್ಷಿಣ ಕನ್ನಡದ ಆಳ್ವಾಸ್ ಪಿಯು ಕಾಲೇಜಿನ ದಿಶಾ ಅವರು ಕರ್ನಾಟಕವೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ.
ಇವರ ನಂತರ ಬೆಳಗಾವಿಯ ಗೋಪ್ಟೆ ಪಿಯು ಕಾಲೇಜಿನ ಧ್ವನಿ ಸಂತೋಷ್ ಕುಲಕರ್ಣಿ ಮತ್ತು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ರಾಚೆಲ್ ಡಿಸೋಜಾ ಅವರು 600ಕ್ಕೆ 599 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅವರಿಗೆ ಕುಟುಂಬಸ್ಥರು, ಆಪಸ್ತರು, ಗ್ರಾಮಸ್ಥರು, ಸ್ನೇಹಿತರ ಶುಭಾಶಯ ಮಳೆಗರೆದಿದ್ದಾರೆ.
ಹಿಂದಿನ ವರ್ಷದ ಸಾಧನೆ ಆಗಿದ್ದೆಷ್ಟು?
ಕಳೆದ ವರ್ಷ (2024-25) ವಾಣಿಜ್ಯ ವಿಭಾಗದ ಪರೀಕ್ಷೆಗೆ 2,04, 329 ಮಂದಿ ಹಾಜರಾಗಿದ್ದು, ಆ ಪೈಕಿ 1,55,329 ಮಂದಿ ಮಾತ್ರವೇ ಉತ್ತೀರ್ಣರಾಗಿದ್ದರು. ಆಗ ವಾಣಿಜ್ಯ ವಿಭಾಗದಿಂದ 76.07ರಷ್ಟು ಸಾಧನೆ ಆಗಿದ್ದು, ಈ ವರ್ಷ ಅದು 88.04ಕ್ಕೆ ಏರಿಕೆ ಆಗಿದ್ದಕ್ಕೆ ಸಚಿವ ಮಧು ಬಂಗಾರಪ್ಪ ಸೇರಿದಂತೆ ವಾಣಿಜ್ಯ ವಿಭಾಗದ ಸರ್ವ ಶಿಕ್ಷಕರು, ಶಿಕ್ಷಣ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications