86ನೇ ಕನ್ನಡ ಸಾಹಿತ್ಯ ಸಮ್ಮೇಳನ: ಹಾವೇರಿಯಲ್ಲಿ 3ಕೋಟಿ ವೆಚ್ಚದಲ್ಲಿ ಕಸಾಪ ಭವನ ನಿರ್ಮಾಣ: ಸಿಎಂ ಬೊಮ್ಮಾಯಿ
ಹಾವೇರಿ, ಜನವರಿ 09: ಏಲಕ್ಕಿ ಕಂಪಿನ ಹಾವೇರಿ ನಗರದಲ್ಲಿ ಯಶಸ್ವಿಯಾಗಿ ನಡೆದ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣಾರ್ಥ ಜಿಲ್ಲೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಿಸಲಾಗುವುದು.
ಜೊತೆಗೆ ಕರ್ನಾಟಕ ಜಾನಪದ ವಿವಿ ಸಹಯೋಗದಲ್ಲಿ ಗುಣಮಟ್ಟದ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಂಶೋಧನಾ ಕಾರ್ಯಗಳಿಗೆ ಸಾಹಿತಿಗಳ ಸಮಿತಿ ರಚಿಸಲಾಗುವುದು.
ಸಮಿತಿ ಸೂಚಿಸುವ ಸಂಶೋಧನಾ ಕಾರ್ಯಗಳಿಗೆ ಬೇಕಾದ ಹಣವನ್ನು ಸರ್ಕಾರ ಒದಗಿಸಲಿದೆ. ಗಡಿನಾಡು ಭಾಗದ ಶಿಕ್ಷಣ, ಆರೋಗ್ಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ 100 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ತಿಳಿಸಿದರು.
ಕನ್ನಡ ಹೋರಾಟಗಾರರ ಮೇಲಿನ ಕಾಗ್ನಿಜಬಲ್ ಬಿಟ್ಟು ಉಳಿದ ಪ್ರಕರಣ ಹಿಂದೆ ಪಡೆಯಲಾಗುವುದು. 2008 ರಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆದಿದೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರದಿಂದ 13.30 ಕೋಟಿ ರೂ. ನೆರವು ದೊರೆತಿದೆ.
ಮೈಸೂರು ವಿಶ್ವವಿದ್ಯಾಲಯ ದೊಡ್ಡ ಕಟ್ಟಡವೊಂದನ್ನು ಈಗಾಗಲೇ ಅಧ್ಯಯನ ಕೇಂದ್ರಕ್ಕೆ ನೀಡಲಾಗಿದೆ. ಶಾಸ್ತ್ರೀಯ ಭಾಷೆ ಕುರಿತ ಸಂಶೋಧನೆ, ಗ್ರಂಥಾಲಯ, ಚರ್ಚೆಗಳಿಗೆ ಮಾರ್ಗದರ್ಶನ ಮಾಡಲು ಸಮ್ಮೇಳನಾಧ್ಯಕ್ಷರ ಮಾರ್ಗದರ್ಶನದಲ್ಲಿ ನಾಡಿನ ಹಿರಿಯ ಸಾಹಿತಿಗಳ ಸಮಿತಿ ರಚಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಮಿತಿ ಸೂಚಿಸುವ ಕಾರ್ಯಗಳಿಗೆ ಅಗತ್ಯ ಅನುದಾನ
ಹಿರಿಯ ಸಾಹಿತಿಗಳ ಸಮಿತಿ ನಿರ್ದೇಶಿಸುವ ಕಾರ್ಯಗಳಿಗೆ ಎಷ್ಟು ಅನುದಾನ ಬೇಕಾದರೂ ಸರ್ಕಾರ ಒದಗಿಸಲಿದೆ. ನೂತನ ಕನ್ನಡ ಸಾಹಿತ್ಯ ಪರಿಷತ್ತಿನ ಭವನ ನಿರ್ಮಾಣಕ್ಕೆ 3 ಕೋಟಿ ರೂ. ಒದಗಿಸಲಾಗುವುದು ಎಂದು ಪುನರುಚ್ಚರಿಸಿದರು.
ಕನ್ನಡದ ನೆಲದಲ್ಲಿನ ಜ್ಞಾನ, ಸಾಹಿತ್ಯ, ತಂತ್ರಜ್ಞಾನ ಎಲ್ಲವೂ ಸಿರಿವಂತವಾಗಿದೆ. ಕನ್ನಡ ಭಾಷೆಯಲ್ಲಿ ಸ್ಪಷ್ಟತೆ, ನಿಖರತೆ, ಪ್ರಖರತೆಗಳಿವೆ. ಕನ್ನಡದ ಮನಸ್ಸುಗಳು ಸ್ವಚ್ಛ ಹಾಗೂ ಪಾರದರ್ಶಕವಾಗಿವೆ. ಬಹುತೇಕ ಸಾಹಿತ್ಯ ಹೃದಯದಿಂದ ಬಂದಿರುವ ಕಾರಣಕ್ಕಾಗಿ ಕನ್ನಡ ಸಾಹಿತ್ಯ ಸತ್ಯದ ದರ್ಶನವಾಗಿದೆ. ನಮ್ಮ ಭಾಷೆಗೆ ಉಜ್ವಲ ಭವಿಷ್ಯವಿದೆ.

ಪಶ್ಚಿಮ ಘಟ್ಟಗಳ ಸಂಪತ್ತಿನ ಪ್ರಯೋಜನ ಪಡೆಯಬೇಕು
ಕನ್ನಡ ಕಾಲ ಕಾಲಕ್ಕೆ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಮುಂದೆ ಸಾಗುತ್ತಿದೆ. ಪಶ್ಚಿಮ ಘಟ್ಟದ ನದಿ ಸಂಪತ್ತಿನ ಸಂಪೂರ್ಣ ಪ್ರಯೋಜನ ಪಡೆದರೆ ನಾಡು ಇನ್ನಷ್ಟು ಶ್ರೀಮಂತವಾಗಲಿದೆ.
ಕಾನೂನು ತೊಡಕು ನಿವಾರಿಸಿಕೊಂಡು ಮಹಾದಾಯಿ ಯೋಜನೆ, ಕಳಸಾ ಬಂಡೂರಿ ಯೋಜನೆಯಾಗಿ ಅನುಷ್ಠಾನವಾಗಲಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರಿಗೆ ಹೆಚ್ಚಿಸಲು ಶೀಘ್ರ ನ್ಯಾಯಮಂಡಳಿಯ ಅನುಮೋದನೆ ಸಿಗುವ ಭರವಸೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನೀರಾವರಿ ಯೋಜನೆ ಜಾರಿ ಶೀಘ್ರ
ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಮಧ್ಯ ಕರ್ನಾಟಕದ ಲಕ್ಷಾಂತರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಮೇಕೆದಾಟು ಯೋಜನೆ ಕೂಡ ಜಾರಿಯಾಗಲಿದೆ.
ಎಲ್ಲಾ ಮಾತೃ ಭಾಷೆಗಳಿಗೆ ಸಂವಿಧಾನದ ರಕ್ಷಣೆಯ ಅಗತ್ಯವಿದೆ. ಪ್ರಾಥಮಿಕ ಹಂತದ ಶಾಲಾ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗಬೇಕು ಎಂಬುದು ನ್ಯಾಯಾಲಯದಲ್ಲಿ ವಿಫಲವಾಗುತ್ತಿದೆ. ಬರುವ ದಿನಗಳಲ್ಲಿ ಸಂವಿಧಾನ ರಕ್ಷಣೆ ಪಡೆಯಲು ಶ್ರಮಿಸಲಾಗುವುದು ಎಂದರು.

ರಾಜ್ಯದಲ್ಲಿ ನೆಲೆಸುವವರಿಗೆ ಕನ್ನಡ ಕಡ್ಡಾಯ: ಸಿಎಂ
ಕರ್ನಾಟಕಕ್ಕೆ ಹೊರ ರಾಜ್ಯದ ಜನ ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದಾರೆ ಆದರೆ ಕನ್ನಡ ಕಲಿಯುತ್ತಿಲ್ಲ, ಈ ನಾಡಿನಲ್ಲಿ ನೆಲೆಸಲು ಇಚ್ಛಿಸುವವರು ಕಡ್ಡಾಯವಾಗಿ ಕನ್ನಡ ಕಲಿಯಲೇಬೇಕೆಂಬ ನೀತಿ ಜಾರಿಗೊಳಿಸಲು ಚಿಂತನೆ ನಡೆದಿದೆ.
ಕನ್ನಡಕ್ಕಾಗಿ ಗಡಿಯಾಚೆ ಹೋರಾಡಿದ ಕನ್ನಡಿಗರಿಗೆ ಪಿಂಚಣಿ ನೀಡಲಾಗುವುದು ಎಂದು ಭವಿಷ್ಯದ ಚಿಂತನೆ ಮತ್ತು ಯೋಜನೆಗಳ ಬಗ್ಗೆ ಮುಖ್ಯಮಂತ್ರಿಗಳು ವಿವರಿಸಿದರು.
ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ, ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಸಂಸದ ಶಿವಕುಮಾರ ಉದಾಸಿ, ಮಾಜಿ ಸಂಸದರಾದ ಪ್ರೊ.ಐ.ಜಿ.ಸನದಿ, ಮಂಜುನಾಥ ಕುನ್ನೂರ, ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ವಿಧಾನಪರಿಷತ್ ಸದಸ್ಯ ಆರ್.ಶಂಕರ ಮತ್ತಿತರು ಉಪಸ್ಥಿತರಿದ್ದರು.












Click it and Unblock the Notifications