ಜೆಡಿಎಸ್ ಮಾಧ್ಯಮದ ಮೇಲೆ ಸಿಟ್ಟು ತೀರಿಸಿಕೊಳ್ಳುವುದು ದುರದೃಷ್ಟಕರ
ಬೆಂಗಳೂರು, ಮೇ 27 : ಕರ್ನಾಟಕದ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಕೀಯ ದ್ವೇಷದ ರಾಜಕಾರಣದ ಜೊತೆ ಮಾಧ್ಯಮದ ಮೇಲೆ ತಮ್ಮ ಸಿಟ್ಟನ್ನು ತೀರಿಸಿಕೊಳ್ಳುವ ಯತ್ನ ಮುಂದುವರೆಸಿರುವುದು ದುರದೃಷ್ಟಕರ ಸಂಗತಿ ಎಂದು ಕರ್ನಾಟಕ ಬಿಜೆಪಿ ಹೇಳಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಅವರು ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ರಾಜ್ಯ ಮುಖ್ಯಮಂತ್ರಿಗಳು ತಮ್ಮ ವಿವೇಚನಾರಹಿತ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರವಾಗಿ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ ಬಿಜೆಪಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿ ಜೈಲಿಗೆ ಕಳಿಸುವ ಹತಾಶ ಕ್ರಮವನ್ನು ಕೈಗೊಂಡಿದ್ದರು. ಪತ್ರಕರ್ತರ ವಿರುದ್ಧವೂ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ದ್ವೇಷದ ರಾಜಕಾರಣ ವಿಸ್ತರಣೆಯಾಗಿದ್ದಂತೂ ಅತ್ಯಂತ ಕಳವಳಕಾರಿ ಸಂಗತಿ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

ಈ ಹಿಂದೆ ಮಾಧ್ಯಮದ ಪ್ರಮುಖ ವ್ಯಕ್ತಿಗಳು, ಅಂಕಣಕಾರರನ್ನು ಬಂಧಿಸಿ ಜೈಲಿಗೆ ಕಳಿಸಿದ್ದ ಮೈತ್ರಿ ಸರ್ಕಾರದ ದ್ವೇಷ ಇನ್ನೂ ನಿಂತಿಲ್ಲ. ಇದಕ್ಕೆ ಪುರಾವೆಯಾಗಿ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ವಿಶ್ವವಾಣಿ ಪ್ರಧಾನ ಸಂಪಾದಕರ ಮೇಲೆ ದೂರು ದಾಖಲಿಸಿ, ಆರೋಪ ಪಟ್ಟಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳ ಕೀಳು ಮಟ್ಟದ ರಾಜಕಾರಣಕ್ಕೆ ಇದು ಕೈಗನ್ನಡಿಯಾಗಿದೆ ಎಂದು ಬಿಜೆಪಿ ದೂರಿದೆ.
ಸರ್ಕಾರದ ಹಾಗೂ ರಾಜಕೀಯ ಧುರೀಣರ ವಿಷಯ ಹಾಗೂ ವಿಚಾರಗಳನ್ನು ರಾಜ್ಯದ ಜನರಿಗೆ ತಲುಪಿಸಲು ಮಾಧ್ಯಮಗಳು ಕಾರ್ಯ ನಿರ್ವಹಿಸುತ್ತಿವೆ. ಮಾಧ್ಯಮಗಳ ಪ್ರಕಟಿಸಿದ ಸುದ್ದಿಯು ತಮಗೆ ಪೂರಕವಾಗಿಲ್ಲ ಎಂಬ ಕಾರಣಕ್ಕೆ ಅವುಗಳ ಅಭಿವ್ಯಕ್ತಿ ಸ್ವಾತಂತ್ರವನ್ನು ಪೊಲೀಸರ ಮೂಲಕ ದಮನ ಮಾಡಲು ಹೊರಟಿರುವ ಮುಖ್ಯಮಂತ್ರಿಗಳ ಧೋರಣೆಯನ್ನು ಬಿಜೆಪಿ ಖಂಡಿಸಿದೆ.
ಈ ಕೂಡಲೇ ಮುಖ್ಯಮಂತ್ರಿಗಳು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮೇಲೆ ದಾಖಲಿಸಿರುವ ಮೊಕದ್ದಮೆ ವಾಪಸ್ ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಹಾಗೂ ಅಂಕಣಕಾರರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ವಜಾಗೊಳಿಸಬೇಕು ಮತ್ತು ರಾಜ್ಯದ ಜನರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.












Click it and Unblock the Notifications