ಶಾಸಕ ಸೈಲ್ ಜೈಲು ಸೇರಾಯ್ತು, ಮುಂದಿನ ಸರದಿ ಸಿದ್ದರಾಮಯ್ಯ..! ಭವಿಷ್ಯ ನುಡಿದಿದ್ಯಾರು?
ಬೇಲೆಕೇರಿ ಅಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಕುಂದಾಪುರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಇಂದು ಕೋರ್ಟ್ ಏಳು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ. ಇದೇ ವಿಚಾರವಾಗಿ ಕಾಂಗ್ರೆಸ್ ಸರ್ಕಾರವನ್ನು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ. ಭ್ರಷ್ಟಾಚಾರಂ ಕಾಂಗ್ರೆಸ್ ಲಕ್ಷಣಂ ಎಂದು ವ್ಯಂಗ್ಯವಾಡಿದೆ.
ಬೇಲೆಕೇರಿ ಅದಿರು ಕಳ್ಳತನ ಪ್ರಕರಣದಲ್ಲಿ ಭ್ರಷ್ಟ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ಅದಿರು ಲೂಟಿಕೋರ ಶಾಸಕ ಸತೀಶ್ ಸೈಲ್ ವಿರುದ್ಧದ 6 ಪ್ರಕರಣಗಳಲ್ಲೂ ಶಿಕ್ಷೆ ವಿಧಿಸಿ ಅಂತಿಮ ಆದೇಶ ಹೊರಡಿಸಿರುವ ಕೋರ್ಟ್, ಒಟ್ಟು 44 ಕೋಟಿಗೂ ಹೆಚ್ಚು ದಂಡ ವಿಧಿಸಿದೆ ಎಂದು ಮುಖಭಂಗ ಮಾಡಿದೆ.

ನಿಯಮಗಳ ಪ್ರಕಾರ 2 ವರ್ಷಗಳಿಗಿಂತ ಹೆಚ್ಚಿನ ಜೈಲು ಶಿಕ್ಷೆಯಾದರೆ ಸತೀಶ್ ಸೈಲ್ ಶಾಸಕ ಸ್ಥಾನವು ಅನರ್ಹಗೊಳ್ಳಲಿದೆ. ಭ್ರಷ್ಟ ಕಾಂಗ್ರೆಸ್ ಪಕ್ಷವು ಗಣಿ ಹಗರಣದ ವಿರುದ್ಧ ಬೆಂಗಳೂರಿನಿಂದ-ಬಳ್ಳಾರಿವರೆಗೂ ಪಾದಯಾತ್ರೆ ಮಾಡಿತ್ತು. ಅಂದು ವೀರಾವೇಶದಿಂದ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ಅದು ಯಾವ ಮುಖ ಇಟ್ಟುಕೊಂಡು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತೀರಿ..? ಭ್ರಷ್ಟಾಚಾರಂ ಕಾಂಗ್ರೆಸ್ ಲಕ್ಷಣಂ ಎಂದು ಕುಟುಕಿದೆ.
ಮುಡಾ ಹಗರಣದಲ್ಲಿ 420 ಹಾಗೂ A1 ಆರೋಪಿಯಾಗಿರುವ ಭ್ರಷ್ಟ ಸಿದ್ದರಾಮಯ್ಯ ಕೂಡ ಜೈಲಿಗೆ ಹೋಗುವುದು ಖಂಡಿತ. ಹಲವು ಹಗರಣಗಳಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ ನಾಯಕರು ಸಾಲು ಸಾಲಾಗಿ ಕಾರಾಗೃಹ ಸೇರುವ ದಿನಗಳು ದೂರವಿಲ್ಲ ಎಂದು ಜೆಡಿಎಸ್ ಭವಿಷ್ಯ ನುಡಿದಿದೆ.

ಶಾಸಕ ಜೈಲುಪಾಲಾಗಿದ್ದು ಏಕೆ?: ಬೇಲೆಕೇರಿ ಬಂದರಿನಿಂದ ಅಕ್ರಮ ಅದಿರು ಸಾಗಾಟ ಕೇಸ್‌ನಲ್ಲಿ ಬಂಧನವಾಗಿದ್ದ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಇಂದು ಶಿಕ್ಷೆ ಪ್ರಕಟವಾಗಿದ್ದು, ಬರೋಬ್ಬರಿ 7 ವರ್ಷ ಜೈಲು ಶಿಕ್ಷೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಅಕ್ಟೋಬರ್ 24ರಂದೆ ಶಾಸಕ ಸತೀಶ್ ಸೈಲ್ ಅವರು ಈ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಕೊಟ್ಟಿತ್ತು. ಅದರಂತೆ ಶಾಸಕ ಸೈಲ್ ಅವರ ಬಂಧನವೂ ಆಗಿತ್ತು. ಇಂದು ಈ ಕೇಸ್‌ನ ಅಂತಿಮ ತೀರ್ಪು ಪ್ರಕಟವಾಗಿದೆ. ಏಳು ವರ್ಷಗಳ ಕಾರಾಗೃಹ ಶಿಕ್ಷೆ ಜೊತೆಗೆ 9 ಕೋಟಿ 60 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಈ ಹಿಂದೆ ಭಾರಿ ಸದ್ದು ಮಾಡಿದ್ದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಶಾಸಕ ಸತೀಶ್ ಸೈಲ್ ಆರೋಪಿ ಎಂದು ನ್ಯಾಯಾಲಯ ಆದೇಶಿಸಿತ್ತು. ಕೂಡಲೇ ಶಾಸಕ ಸತೀಶ್ ಸೈಲ್ ಅವರನ್ನು ವಶಕ್ಕೆ ಪಡೆಯುವಂತೆ ಸೂಚನೆಯೂ ನೀಡಿತ್ತು. ಹಾಗಾಗಿ ಇತ್ತೀಚೆಗೆ ರಾತ್ರೋರಾತ್ರಿ ಶಾಸಕ ಸೈಲ್ ಅವರನ್ನು ಬಂಧಿಸಲಾಗಿತ್ತು.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಇನ್ನು ಈ ಕೇಸ್ ಬರೋಬ್ಬರಿ 14 ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಇದು ಮೊದಲಿಗೆ ರಾಜ್ಯದೆಲ್ಲೆಡೆ ಭಾರೀ ಸದ್ದು ಮಾಡಿದ್ದ ಪ್ರಕರಣವಾಗಿತ್ತು. ಇದು ಉತ್ತರ ಕನ್ನಡದ ಬೇಲೆಕೇರಿ ಎನ್ನುವ ಬಂದರಿನಿಂದ ಕಬ್ಬಿಣದ ಅದಿರು ಕಳ್ಳತನ ಮತ್ತು ಅಕ್ರಮ ರಫ್ತು ವಿಚಾರಕ್ಕೆ ಸಂಬಂಧಿಸಿದ ಕೇಸ್. ಈ ಕೇಸ್‌ನಲ್ಲಿ ಕಾಂಗ್ರೆಸ್ ಶಾಸಕನ ಜೈಲು ಶಿಕ್ಷೆ ಪ್ರಕಟವಾಗಿರುವುದನ್ನು ಜೆಡಿಎಸ್ ಪ್ರಸ್ತಾಪಿಸಿ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.












Click it and Unblock the Notifications