BJP-JDS Alliance: ಅಧಿಕಾರಕ್ಕಾಗಿ ಜೆಡಿಎಸ್ ಯಾವ ಹೊಂದಾಣಿಕೆಗೂ ಸಿದ್ದ: ಸಿದ್ದರಾಮಯ್ಯ
ಹುಬ್ಬಳ್ಳಿ, ಸೆಪ್ಟೆಂಬರ್ 09: ಜೆಡಿಎಸ್ ನವರು ಅಧಿಕಾರಕ್ಕಾಗಿ ಯಾರ ಜೊತೆಗೆ ಕೂಡಾ ಮೈತ್ರಿ ಮಾಡಿಕೊಳ್ಳತ್ತಾರೆ. ಇದೀಗ ಜಾತ್ಯಾತೀತ ಎಂದು ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆಗೆ ಸೇರಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯ ಬಿ ಟೀಮ್ ಎಂದು ಈ ಹಿಂದೆ ನಾನು ಹೇಳಿದಾಗ ಜೆಡಿಎಸ್ ನವರು ಕೋಪಗೊಳ್ಳುತ್ತಿದ್ದರು. ಆದರೆ ಇದೀಗ ಏನಾಗಿದೆ ಎಂಬುದು ರಾಜ್ಯದ ಜನತೆಯ ಮುಂದಿದೆ. ತತ್ವ ಸಿದ್ಧಾಂತ, ಬದ್ಧತೆ ಇಲ್ಲದ ಜೆಡಿಎಸ್ ನವರು ಅಧಿಕಾರದ ಲಾಲಸೆಗಾಗಿ ಯಾವ ಹೊಂದಾಣಿಕೆಗೂ ಸಿದ್ದ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಯಾವ ಕಾರಣಕ್ಕೂ ಕೋಮುವಾದಿ ಶಕ್ತಿಗಳ ಜೊತೆ ಹೊಂದಾಣಿಕೆ ಇಲ್ಲವೇ ಇಲ್ಲ ಎನ್ನುತ್ತಿದ್ದರು. ಇದೀಗ ಜಿ.ಟಿ. ದೇವೇಗೌಡರ ಮೂಲಕ ಪಕ್ಷದ ಉಳಿವಿಗಾಗಿ ಹೊಂದಾಣಿಕೆ ಅನಿವಾರರ್ಯವೆಂದು ಹೇಳಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇನ್ನೂ ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸದಿರುವ ಕುರಿತು ಕಿಡಿಕಾರಿದ ಸಿದ್ದರಾಮಯ್ಯ ಅವರು, ಮಲ್ಲಿಕಾರ್ಜುನ್ ಖರ್ಗೆಯವರು ಕೇವಲ ಎಐಸಿಸಿ ಅಧ್ಯಕ್ಷರಲ್ಲ ಬದಲಾಗಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಅವರನ್ನು ಆಹ್ವಾನಿಸಬೇಕಾಗಿತ್ತು ಎಂದು ಹೇಳಿದರು.
ರಾಷ್ಟ್ರ ರಾಜಕಾರಣಕ್ಕೆ ಹೋಗುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ಕಾರಣಕ್ಕೂ ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ. ನನ್ನ ಮೇಲಿನ ಅಭಿಮಾನದಿಂದ ಕೆಲವರು ಈ ರೀತಿ ಹೇಳಿರಬಹುದು ಎಂದರಲ್ಲದೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕವಾಗಿ ಆರೋಪ ಮಾಡುತ್ತಿಲ್ಲ ವಿಷಯಧಾರಿತವಾಗಿ ಆರೋಪಿಸುತ್ತಿದ್ದೇನೆ ಎಂದು ತಿಳಿಸಿದರು.
ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಯ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ. ಮಹದಾಯಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತಯಾರಿದ್ದರೂ, ಕೇಂದ್ರ ಸರ್ಕಾರದಿಂದ ಅರಣ್ಯ ಮತ್ತು ಪರಿಸರ ಕ್ಲಿಯರೆನ್ಸ್ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.
ಮಹದಾಯಿ ಯೋಜನೆಗೆ ಅಗತ್ಯವಿರುವ ರಾಜ್ಯ ವನ್ಯಜೀವಿ ಮಂಡಳಿ ಸಭೆಯಿಂದ ಅನುಮೋದನೆ ನೀಡಿ ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಸಿಎಂ, ಕಳೆದ ಮೂರು ವರ್ಷ 10 ತಿಂಗಳು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಕೇಂದ್ರದಲ್ಲಿಯೂ ಅವರೇ ಅಧಿಕಾರದಲ್ಲಿದ್ದಾರೆ ಜ್ಯೋಶಿ ಅವರು ಏನು ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.












Click it and Unblock the Notifications