ಕರ್ನಾಟಕ ಚುನಾವಣೆಗೆ ಓವೈಸಿಯ ಜೊತೆಗೆ ಮೈತ್ರಿ ಕೈಬಿಟ್ಟ ಜೆಡಿಎಸ್
ಬೆಂಗಳೂರು, ಏಪ್ರಿಲ್ 21: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಯೋಜನೆಯನ್ನು ಜೆಡಿಎಸ್ ಕೈಬಿಟ್ಟಿದೆ.
ಗುಲ್ಬರ್ಗ ಗ್ರಾಮಾಂತರ, ಬಾಗೇಪಲ್ಲಿ, ಕೆಆರ್ ಪುರ, ಸಿವಿ ರಾಮನಗರ, ವಿಜಯನಗರ ಮತ್ತು ಮಹದೇವಪುರದಲ್ಲಿ ಸಿಪಿಐಎಂ ಮತ್ತು ಆರ್‌ಪಿಐಗೆ ಜೆಡಿಎಸ್ ಬಾಹ್ಯ ಬೆಂಬಲ ನೀಡುತ್ತಿದೆ. ನಂಜನಗೂಡಿನಲ್ಲಿ ಕಾಂಗ್ರೆಸ್‌ನ ದರ್ಶನ್ ಧ್ರುವನಾರಾಯಣ್‌ಗೆ ಜೆಡಿಎಸ್ ಬೆಂಬಲ ನೀಡಲಿದೆ.

ಮೂಲಗಳ ಪ್ರಕಾರ, ಕರ್ನಾಟಕ ವಿಧಾನಸಭಾ ಚುನಾವಣೆ ಈ ಸಂದರ್ಭದಲ್ಲಿ ಜೆಡಿಎಸ್ ಮತ್ತು ಎಐಎಂಐಎಂ ನಾಯಕರು ಸಹಮತಕ್ಕೆ ಬರಲು ವಿಫಲರಾಗಿದ್ದಾರೆ. ಇದರಿಂದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಒಪ್ಪಂದವನ್ನು ಮುರಿದಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಎಐಎಂಐಎಂ ಜೊತೆ ಹೋಗುವುದರಿಂದ ಇತರ ಕ್ಷೇತ್ರಗಳಲ್ಲಿ ಜೆಡಿಎಸ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪಕ್ಷದ ಕೆಲವು ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಎರಡೂ ಪಕ್ಷಗಳ ನಾಯಕರು ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ನಾವು ಈ ಆಲೋಚನೆಯನ್ನು ಕೈಬಿಟ್ಟಿದ್ದೇವೆ ಎಂದು ಜೆಡಿಎಸ್ ಎಂಎಲ್‌ಸಿ ಮತ್ತು ಪಕ್ಷದ ಕೋರ್ ಕಮಿಟಿ ಸಂಚಾಲಕ ಕೆ ಎ ತಿಪ್ಪೇಸ್ವಾಮಿ ಹೇಳಿದ್ದಾರೆ.
ಈ ಚುನಾವಣೆಯಲ್ಲಿ ಎಐಎಂಐಎಂ ಕನಿಷ್ಠ 25 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಲು ಬಯಸಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಮತಗಳನ್ನು ಗಮನಾರ್ಹವಾಗಿ ಸೆಳೆಯಲು ಎಐಎಂಐಎಂ ಯತ್ನಿಸಲಿದೆ. ಇದು ಮುಸ್ಲಿಂ ಬಾಹುಳ್ಯದ ವಿಧಾನಸಭೆ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಈ ಭಾಗಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಹೇಳಲಾಗಿತ್ತು.
ಇತ್ತೀಚೆಗೆ ಎಐಎಂಐಎಂ ನೀಡಿರುವ ಚುನಾವಣಾ ಪೂರ್ವ ಮೈತ್ರಿ ಪ್ರಸ್ತಾಪಕ್ಕೆ ಪಕ್ಷವು ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಕುಮಾರಸ್ವಾಮಿಯವರ ಆಪ್ತ ಮೂಲಗಳು ಹೇಳಿರುವ ಪ್ರಕಾರ, 'ಮೈತ್ರಿ ಪ್ರಸ್ತಾಪಕ್ಕೆ ಮುದ್ರೆಯೊತ್ತಲಾಗಿದೆ ಮತ್ತು ಅಧಿಕೃತ ಘೋಷಣೆ ಆಗುವುದಷ್ಟೇ ಬಾಕಿ ಇದೆ ಎಂದು ಪಕ್ಷದ ಮೂಲಗಳು ಹಿಂದೆ ಹೇಳಿದ್ದವು.
'ನಾವು ಎಐಎಂಐಎಂ ನೀಡಿರುವ ಪ್ರಸ್ತಾಪವನ್ನು ಸ್ವೀಕರಿಸಿದ್ದೇವೆ. ಅದಕ್ಕೆ ನಾವು ಇನ್ನೂ ಪ್ರತಿಕ್ರಿಯಿಸಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದ ( ಹೈದರಾಬಾದ್ ಕರ್ನಾಟಕ ) ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿದೆ. ಈ ಭಾಗಗಳಲ್ಲಿ ಹೆಚ್ಚಾಗಿ ಮುಸ್ಲಿಂ ಜನಸಂಖ್ಯೆ ಇದೆ. ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಅರ್ಹ ಅಭ್ಯರ್ಥಿಗಳಿಲ್ಲ. ಮೈತ್ರಿ ನಮಗೆ ಸಹಾಯ ಮಾಡುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. 10 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವ ಮೈತ್ರಿಗಾಗಿ ಎಐಎಂಐಎಂ ಜೊತೆ ಜೆಡಿಎಸ್ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.
ಒಂದು ವೇಳೆ ಜೆಡಿಎಸ್ ಹಾಗೂ ಎಐಎಂಐಎಂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ, ಇದು ಕಾಂಗ್ರೆಸ್‌ಗೆ ಆತಂಕವನ್ನು ಹೆಚ್ಚಿಸಲಿದೆ ಎಂಬ ಮಾತುಗಳು ಕೇಳಿಬಂದಿವೆ. ಏಕೆಂದರೆ, ಎಐಎಂಐಎಂ- ಜೆಡಿಎಸ್ ಮೈತ್ರಿಕೂಟವು ಮುಸ್ಲಿಂ ಮತಗಳನ್ನು ತಮ್ಮದಾಗಿಸಿಕೊಳ್ಳಬಹುದು. ಇದರಿಂದ ಕಾಂಗ್ರೆಸ್‌ಗೆ ಹಾನಿಯಾಗಲಿದೆ ಎಂದು ವಿಶ್ಲೇಷಣೆಗಳು ಬಂದಿದ್ದವು.












Click it and Unblock the Notifications