JDS: ದರ್ಶನ್ ಧ್ರುವ ನಾರಾಯಣ್‌ಗೆ ಸಿಕ್ತು ಭಾರಿ ಬಲ: 7 ಕ್ಷೇತ್ರದ ಅಭ್ಯರ್ಥಿಗಳಿಗೆ ಜೆಡಿಎಸ್ ಬಾಹ್ಯ ಬೆಂಬಲ
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಕ್ಕೆ ಒಂದು ದಿನ ಮೊದಲು ಜೆಡಿಎಸ್ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಘೋಷಿಸಿದೆ. ಒಟ್ಟು 59 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ, ಅಚ್ಚರಿ ಎನ್ನುವಂತೆ 7 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸದೆ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದೆ. ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ್‌ಗೆ ಬೆಂಬಲ ನೀಡಲು ನಿರ್ಧರಿಸಿದೆ.
ಇನ್ನು ಕಲಬುರಗಿ ಗ್ರಾಮಾಂತರ ಕ್ಷೇತ್ರದಲ್ಲಿ ಸಿಪಿಐ(ಎಂ)ಗೆ ಬೆಂಬಲ ನೀಡಲು ಜೆಡಿಎಸ್ ನಿರ್ಧರಿಸಿದೆ. ಇಲ್ಲಿ ಬಿಜೆಪಿ ಪಕ್ಷದಿಂದ ಬಸವರಾಜ ಮತ್ತಿಮೋಡ, ಕಾಂಗ್ರೆಸ್‌ನಿಂದ ರೇವೂ ನಾಯಕ ಬೆಳಮಗಿ, ಎಎಪಿಯಿಂದ ಡಾ. ರಾಘವೇಂದ್ರ ಚಿಂಚನಸೂರ ಸ್ಪರ್ಧೆ ಮಾಡುತ್ತಿದ್ದಾರೆ. 2018ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರೇವೂನಾಯಕ ಬೆಳಮಗಿ ಈ ಬಾರಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ್ದಾರೆ, ಹೀಗಾಗಿ ಸಿಪಿಐಎಂ ಪಾಂಡುರಂಗ ಮಾವಿನಕರ್ ಅವರಿಗೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದೆ.

ಬಾಗೇಪಲ್ಲಿ ಕ್ಷೇತ್ರದಲ್ಲಿ ಕೂಡ ಸಿಪಿಐ(ಎಂ)ಗೆ ಜೆಡಿಎಸ್ ಬೆಂಬಲ ನೀಡಲಿದೆ. ಸಿಪಿಐಎಂನಿಂದ ಡಾ. ಅನಿಲ್ ಕುಮಾರ್ ಸ್ಪರ್ಧೆ ಮಾಡಿದ್ದು, ಜೆಡಿಎಸ್ ಬೆಂಬಲ ಪಡೆಯಲಿದ್ದಾರೆ. ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ ಸಿಪಿಐಎಂ ಅಭ್ಯರ್ಥಿ ಎಂ.ನಂಜೇಗೌಡ ಅವರಿಗೂ ಜೆಡಿಎಸ್ ಬಾಹ್ಯ ಬೆಂಬಲ ನೀಡಲಿದೆ. ಸಿ.ವಿ.ರಾಮನ್ನಗರ, ಮಹದೇವಪುರ ಮತ್ತು ವಿಜಯನಗರ ಕ್ಷೇತ್ರದಲ್ಲಿ ಆರ್ಪಿಐ ಅಭ್ಯರ್ಥಿಗಳಿಗೆ ಬೆಂಬ ನೀಡಲು ಜೆಡಿಎಸ್ ನಿರ್ಧಾರ ಮಾಡಿದೆ.
ಆಯನೂರು ಮಂಜುನಾಥ್‌ಗೆ ಟಿಕೆಟ್ ಕೊಟ್ಟ ಜೆಡಿಎಸ್
ಜೆಡಿಎಸ್ ಮೂರನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದ್ದು, 59 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಮೊದಲನೇ ಪಟ್ಟಿಯಲ್ಲಿ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿತ್ತು, ಎರಡನೇ ಪಟ್ಟಿಯಲ್ಲಿ 49 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿತ್ತು, ಈಗ ಕಾಗವಾಡ, ಮಂಡ್ಯ, ವರುಣಾ, ಹುಕ್ಕೇರಿ, ಶಿವಮೊಗ್ಗ ನಗರ ಸೇರಿದಂತೆ 59 ಕ್ಷೇತ್ರಗಳಿಗೆ ಹೆಸರು ಘೋಷಣೆ ಮಾಡಿದೆ.

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದ ಬಳಿಕ ಜೆಡಿಎಸ್ ಸೇರ್ಪಡೆಗೊಂಡಿರುವ ಆಯನೂರು ಮಂಜುನಾಥ್‌ಗೆ ಟಿಕೆಟ್ ಸಿಕ್ಕಿದೆ. ಬುಧವಾರ ಬೆಳಿಗ್ಗೆ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ್ದ ಅವರು ಬಿಜೆಪಿಗೆ ಗುಡ್‌ಬೈ ಹೇಳುವುದಾಗಿ ತಿಳಿಸಿದ್ದರು. ಮಧ್ಯಾಹ್ನ ಚಿತ್ರದುರ್ಗದಲ್ಲಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾಗಿ ಬಿ ಫಾರಂ ಪಡೆದುಕೊಂಡಿದ್ದರು. ಈ ಮೂಲಕ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.












Click it and Unblock the Notifications