ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಮಾಸ್ಟರ್ ಮೈಂಡ್ ಗಳಿಗಾಗಿ ಶೋಧ!
ಬೆಂಗಳೂರು, ಮಾರ್ಚ್ 13: ಮಾಜಿ ಸಚಿವ ಜಾರಕಿಹೊಳಿ ಸಿಡಿ ಸ್ಫೋಟದ ವಿಚಾರಣೆಗೆ ಸೀಮಿತಗೊಳಿಸಿ ರಚನೆಯಾದ ಒಂದೇ ದಿನಕ್ಕೆ ವಿಶೇಷ ತನಿಖಾ ತಂಡ "ಸಿಡಿ ರಹಸ್ಯ" ಬೇಧಿಸಿದೆ. ಈಗಾಗಲೇ ಐವರನ್ನು ವಿಚಾರಣೆ ನಡೆಸಿ ಸಿಡಿ ಬಿಡುಗಡೆಯ ಕ್ಲೈಮ್ಯಾಕ್ಸ್ ಸ್ಟೋರಿ ಸಂಗ್ರಹಿಸಿದೆ. ಇನ್ನೇನಿದ್ದರೂ ಸಿಡಿ ರಚನೆಯ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯ ಮುಂದುವರೆದಿದೆ. ತಲೆಮರೆಸಿಕೊಂಡಿರುವ ಸಿಡಿ ಸೂತ್ರದಾರರಿಗಾಗಿ ತನಿಖಾ ತಂಡ ಶೋಧ ನಡೆಸುತ್ತಿದೆ. ಎಸ್ಐಟಿ ವಿಚಾರಣೆ ವರದಿ ಆಧರಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸರ್ಕಾರಿ ಶಿಕ್ಷಕಿಯ ವಿಚಾರಣೆ: ಬೆಂಗಳೂರಿನ ವರದಿಗಾರನೊಬ್ಬ ಪ್ರೀತಿಸುತ್ತಿದ್ದ ರಾಮನಗರ ಮೂಲದ ಯುವತಿ ಸಿಡಿಯನ್ನು ದಿನೇಶ್ ಕಲ್ಲಹಳ್ಳಿಗೆ ನೀಡಿದ್ದಾರೆ ಎನ್ನಲಾಗಿದೆ. ಆಕೆಯನ್ನು ವಿಚಾರಣೆ ನಡೆಸಿ, ದಿನೇಶ್ ಕಲ್ಲಹಳ್ಳಿಯ ಸಂಪರ್ಕ , ಸಿಡಿ ಸಲ್ಲಿಕೆಯ ಕುರಿತ ಸಮಗ್ರ ವಿವರಗಳನ್ನು ತನಿಖಾ ತಂಡ ಸಂಗ್ರಹಿಸಿದೆ. ಇನ್ನು ಈಕೆಯ ಪ್ರೇಮಿಯಾಗಿರುವ ವರದಿಗಾರನನ್ನೂ ಸಹ ವಿಶೇಷ ತನಿಖಾ ತಂಡ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದೆ. ಮುಂದೆ ವಿಚಾರಣೆಗೆ ಕರೆದಾಗ ಬರಬೇಕು ಎಂದು ಸೂಚನೆ ನೀಡಿ ವಾಪಸು ಕಳಿಸಿರುವುದಾಗಿ ತಿಳಿದು ಬಂದಿದೆ. ಸರ್ಕಾರಿ ಶಿಕ್ಷಕಿ ಹಾಗೂ ಪ್ರೇಮಿಯ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಹಣಕಾಸಿನ ವಿವರಗಳನ್ನು ಪಡೆದು ಪರಿಶೀಲಿಸಿದ್ದಾರೆ ಎನ್ನಲಾಗಿದೆ.

ಐವರ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ: ಇನ್ನು ಇಬ್ಬರು ವರದಿಗಾರರು ಒಳಗೊಂಡಂತೆ ವಿಶೇಷ ತನಿಖಾ ತಂಡ ಈವರೆಗೂ ಐವರನ್ನು ವಿಚಾರಣೆ ನಡೆಸಿದೆ. ಈ ವೇಳೆ ಸಿಡಿ ಬಿಡುಗಡೆಯ ಹಿಂದಿನ ರಹಸ್ಯ ಭಾಗವನ್ನು ಬಯಲಿಗೆ ಎಳೆದಿದ್ದಾರೆ. ಇದೀಗ ಸಿಡಿ ಮೂಲದ ರಹಸ್ಯ ಎಸ್ ಐಟಿ ಜಾಲಾಡುತ್ತಿದೆ. ಇದರ ಭಾಗವಾಗಿಯೇ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಪ್ರಮುಖ ಆರೋಪಿಯ ಬೆಂಗಳೂರು ಮನೆ ಮೇಲೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಇನ್ನು ಸಿಡಿಯಲ್ಲಿರುವ ಯುವತಿಯ ಪ್ರಿಯತಮೆ ಕೂಡ ಶಾಮೀಲಾಗಿದ್ದಾರೆ ಎಂಬ ಇನ್ನೊಂದು ರೋಚಕ ಕಹಾನಿ ಎಸ್ಐಟಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ವಿಡಿಯೋ ಅಪ್‌ಲೋಡ್ ವಿವರ ಬಹಿರಂಗ: ರಮೇಶ್ ಜಾರಕಿಹೊಳಿ ದೂರು ಕೊಡುವ ಮುನ್ನ ಅಶ್ಲೀಲ ಸಿಡಿ ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆಯಾಗಿತ್ತು. ರಷ್ಯಾ ಮೂಲದ ಸರ್ವರ್ ಗಳಲ್ಲಿ ಈ ವಿಡಿಯೋ ಅಪ್ಲೋಡ್ ಆಗಿರುವ ಮಾಹಿತಿ ಸಂಗ್ರಹವಾಗಿತ್ತು. ಆದರೆ, ಹೊಸ ವಿಫಿಎನ್ ತಂತ್ರಜ್ಞಾನ ನೆರವಿನಿಂದ ಅಷ್ಟೂ ಸಿಡಿಗಳನ್ನು ಬೆಂಗಳೂರಿನಲ್ಲಿಯೇ ಅಪ್‌ಲೋಡ್ ಮಾಡಿರುವ ಸಂಗತಿಯನ್ನು ಎಸ್ಐಟಿ ವಿಶೇಷ ತನಿಖಾ ತಂಡದ ಅಧಿಕಾರಿ ಪತ್ತೆ ಮಾಡಿದ್ದಾರೆ. ಅದರ ಆಧಾರದ ಮೇಲೆ ಈ ಕೃತ್ಯ ಎಸಗಿರುವ ವ್ಯಕ್ತಿಗಾಗಿ ಎಸ್ಐಟಿ ಶೋಧ ಮುಂದುವರೆಸಿದೆ. ಇನ್ನು ಪ್ರಕರಣ ಬೇರೆ ಸ್ವರೂಪ ಪಡೆಯುತ್ತಿದ್ದಂತೆ, ಸಾಮಾಜಿಕ ಜಾಲ ತಾಣಗಳ ಸಂಪರ್ಕದಿಂದ ದೂರವಾಗಿದ್ದು, ಇದರ ಜಾಡು ಹಿಡಿದು ಎಸ್ಐಟಿ ತನಿಖೆ ನಡೆಸುತ್ತಿದೆ.

ಶೋಧ : ಬೆಂಗಳೂರು ಮೂಲದ ಯುವಕ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಸಿಡಿ ಅಪ್‌ಲೋಡ್ ಆಗುತ್ತಿದ್ದಂತೆ ಪರಾರಿಯಾಗಿರುವ ಆರೋಪಿಗಳಿಗಾಗಿ ಎಸ್‌ಐಟಿ ಶೋಧ ನಡೆಸುತ್ತಿದೆ. ಇನ್ನೊಂದೆಡೆ ಸಿಡಿ ಕುರಿತು ದೂರು ನೀಡಿದ ದಿನೇಶ್ ಕಲ್ಲಹಳ್ಳಿಯನ್ನು ವಿಚಾರಣೆಗೆ ಕರೆಸಲು ಮುಂದಾಗಿದ್ದಾರೆ.












Click it and Unblock the Notifications