ಇನ್ಫೋಸಿಸ್ ಮೂರ್ತಿ, ಮಲಾಲಾಗೆ ಬಸವಶ್ರೀ ಪ್ರಶಸ್ತಿ

16-17ನೇ ಪ್ರಶಸ್ತಿ: ಅಂದಹಾಗೆ ಬಸವಶ್ರೀ ಪ್ರಶಸ್ತಿಯು 16 ವರ್ಷದ ಮಲಾಲಾಗೆ ಭಾರತದಿಂದ ನೀಡಲಾಗುತ್ತಿರುವ ಮೊದಲ ಪ್ರಶಸ್ತಿಯಾಗಿದೆ. ಇನ್ನು, 67 ವರ್ಷದ ನಾರಾಯಣ ಮೂರ್ತಿ ಅವರಿಗೆ ತುಸು ತಡವಾಗಿಯೇ ಈ ಪ್ರಶಸ್ತಿ ಸಂದಾಯವಾಗುತ್ತಿದೆ. ನಾರಾಯಣ ಮೂರ್ತಿ ಅವರು ಈ ಪ್ರಶಸ್ತಿಯನ್ನು ಪಡೆಯುತ್ತಿರುವ 17ನೇ ವ್ಯಕ್ತಿಯಾಗಿದ್ದಾರೆ.
ಮಲಾಲಾ ಅವರಿಗೆ 2014 ಮತ್ತು ನಾರಾಯಣ ಮೂರ್ತಿ ಅವರಿಗೆ 2013ನೇ ಸಾಲಿನ ಪ್ರಶಸ್ತಿ ಇದಾಗಿದೆ. ಚಿತ್ರದಲ್ಲಿ ಶಿವಮೂರ್ತಿ ಮರುಘಾ ಶರಣರು ಮತ್ತು ಮಾದಾರ ಚೆನ್ನಯ್ಯ ಸ್ವಾಮಿ.
ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಹಾಸ್ಯ ಸಂಭ್ರಮ ಸಮಾರಂಭದಲ್ಲಿ ಡಾ. ಮುರುಘಾಶರಣರು ಈ ಪ್ರಶಸ್ತಿ ಘೋಷಿಸಿದರು. ಪ್ರಶಸ್ತಿ 10 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಇವರಿಬ್ಬರದ್ದೂ ಬಸವಾದಿ ಶರಣರು ಪ್ರತಿಪಾದಿಸಿದ ಲಿಂಗಸಮಾನ ಬದುಕಿನ ಆಶಯಕ್ಕೆ ಸಮನಾದ ಹೋರಾಟವೆಂದು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
'ಭದ್ರತೆಯ ಕಾರಣಕ್ಕೆ ಮಲಾಲಾ ಅವರು ಭಾರತಕ್ಕೆ ಬರಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಅವರೊಂದಿಗೆ ಶ್ರೀಮಠ ಸತತ ಸಂಪರ್ಕದಲ್ಲಿದ್ದು, ಅವರು ಭಾರತಕ್ಕೆ ಬಂದಾಗ ಅಥವಾ ನಾವು ಅವರಿರುವ ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಖುದ್ದಾಗಿ ನೀಡಲಾಗುವುದು' ಎಂದು ಅವರು ಹೇಳಿದರು.
1997ರಲ್ಲಿ ಆರಂಭಿಸಿದ ಈ ಪ್ರಶಸ್ತಿಯನ್ನು ಈ ಹಿಂದೆ ಬೆಲ್ದಾಳ್ ಶರಣರು, ದಿವಂಗತ ಹಿರೇಮಲ್ಲೂರು ಈಶ್ವರನ್, ಡಾ. ಎಚ್ ಸುದರ್ಶನ್, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಹೋರಾಟಗಾರ್ತಿ ಮೇಧಾ ಪಾಟ್ಕರ್, ಬೌದ್ಧ ಗುರು ದಲಾಯಿ ಲಾಮಾ, ಕ್ರಾಂತಿಕವಿ ಗದ್ದರ್, ಡಾ. ವಂದನಾ ಶಿವ, ನೈಸರ್ಗಿಕ ಕೃಷಿಯ ಹರಿಕಾರ ಸುಭಾಷ್ ಪಾಳೇಕಾರ್, ಸಮಾಜ ಸೇವಾಕರ್ತೆ ಶಬಾನಾ ಆಜ್ಮಿ, ಕ್ರಾಂತಿಕಾರಿ ಸಮಾಜ ಸುಧಾರಕ ಸ್ವಾಮಿ ಅಗ್ನಿವೇಶ್, ಡಾ. ಕಿರಣ್ ಬೇಡಿ, ಪಿಟಿ ಉಷಾ ಮತ್ತು ಡಾ. ಎಟಿ ಆರ್ಯರತ್ನೆ, ರೈತ ಮುಖಂಡ ದಿವಂಗತ ಪ್ರೊ. ಎಂಡಿ ನಂಜುಂಡಸ್ವಾಮಿ ಹಾಗೂ ಶಂಕರ ಬಿದರಿ ಅವರಿಗೆ ನೀಡಿ ಗೌರವಿಸಲಾಗಿದೆ. (ಚಿತ್ರ- outlook india)











Click it and Unblock the Notifications