ಸೂರ್ಯ ನಮ್ಮ ಅತಿಥಿ, ಸೂರ್ಯೋದಯಕ್ಕೆ ಮೊದ್ಲೇ ಸ್ವಾಗತ ಮಾಡ್ಬೇಕು

By: ಸ್ನೇಹ ಶಿಕ್ಷಣ ಸಂಸ್ಥೆ
Subscribe to Oneindia Kannada

ಇದೇ ಮಕರ ಸಂಕ್ರಾಂತಿಯಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಜ್ಞಾನಕಲಶ ಕಾರ್ಯಕ್ರಮವು ಜರಗಿತು. ದೇವಸ್ಥಾನಗಳಲ್ಲಿ ಬ್ರಹ್ಮಕಲಶವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ನಿಜವಾದ ಜ್ಞಾನವಿಕಾಸದ ಮೂಲಕ ಊರಿನ ಶ್ರೇಯಸ್ಸಿಗೆ ಕಾರಣವಾಗುವ ಶಾಲೆಗಳ ಪುನರುಜ್ಜೀವನಕ್ಕೆ ಯಾವ ಕಾರ್ಯಕ್ರಮವೂ ಇಲ್ಲ.

ಆದ್ದರಿಂದ ಈ ದಿಸೆಯಲ್ಲಿ ಚಿಂತಿಸಿದ ಸುಳ್ಯದ ಸ್ನೇಹ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ ಡಾ. ಚಂದ್ರಶೇಖರ ದಾಮ್ಲೆಯವರು ವಿನೂತನವಾಗಿ ಜ್ಞಾನಕಲಶ ಕಾರ್ಯಕ್ರಮವನ್ನು ನಡೆಸಿದರು. ಶಾಲೆಗೆ 20 ವರ್ಷಗಳಾದುದರಿಂದ ವಿಂಶತಿ ಹಬ್ಬದ ಅಂಗವಾಗಿ ಬಯಲು ಸೂರ್ಯ ಆಲಯವನ್ನು ಸ್ಥಾಪಿಸಿದರು.

ಇದರ ಪ್ರತಿಷ್ಟೆಯನ್ನು ನಡೆಸಿದ ದರ್ಭೆತಡ್ಕದ ಶಂಕರ ವೇದ ಗುರುಕುಲದ ಪ್ರಾಚಾರ್ಯ ಘನಪಾಠಿ ಅಂಶುಮಾನ್ ಅಭ್ಯಂಕರ್ ರವರು ಆಶೀರ್ವಚನ ನೀಡಿ ವೇದ-ಯೋಗ ಎಂಬುದು ಸಾತ್ವಿಕ ವಿಜ್ಞಾನ. ಇದರಿಂದ ಜನತೆಗೆ ಪ್ರಯೋಜನ ಹೊರತು ವಿಪತ್ತಿಲ್ಲ. ಆಧುನಿಕ ವಿಜ್ಞಾನದಿಂದ ವಿಶ್ವದೆಲ್ಲೆಡೆ ಕಸಗಳ ರಾಶಿಯೇ ತುಂಬಿ ಹೋಗಿದೆ.

Inauguration of Bayalu Soorya Aalaya on Sankranti day Sullia, DK district

ಇದರಿಂದ ಸ್ವಚ್ಛವಾಗಲು ಪಾರಂಪರಿಕ ಸರಳ ಜೀವನವೇ ದಾರಿ. ಸೂರ್ಯನ ಆರಾಧನೆಯೆಂದರೆ ಅದು ಪ್ರಕೃತಿಯ ಆರಾಧನೆಯೇ ಆಗಿದೆ. ಸೂರ್ಯನಿಗೆ ಉದಯ ಅಸ್ತ ಎಂಬುದು ಇಲ್ಲ. ಜ್ಯೋತಿಷ ವಿಜ್ಞಾನಕ್ಕೂ ಖಗೋಳ ವಿಜ್ಞಾನಕ್ಕೂ ಸಾಕಷ್ಟು ಸಾಮ್ಯತೆಗಳಿವೆ. ಸೂರ್ಯ ನಮ್ಮ ನಿತ್ಯದ ಅತಿಥಿ. ಆದ್ದರಿಂದ ಪ್ರತಿದಿನ ಸೂರ್ಯೋದಯಕ್ಕೆ ಮೊದಲೇ ಎದ್ದು ಆತನ ಸ್ವಾಗತ ಮಾಡಬೇಕು ಎಂದವರು ಹೇಳಿದರು.

ಇದೇ ಸಂದರ್ಭದಲ್ಲಿ ಮಂಗಳೂರಿನ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರು ಯೋಗಕೇಂದ್ರ ಉದ್ಘಾಟಿಸಿ, ಯೋಗ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಮಿಕರ ಮತ್ತು ಶಿಲ್ಪಿಗಳ ಸನ್ಮಾನ ಕಾರ್ಯಕ್ರಮ ನಡೆಯಿತು.

ಶಿಲ್ಪಿ ಕಾರ್ಕಳದ ಪಾಂಡುರಂಗ ಪಾಠಕ್, ಕಾರ್ಮಿಕರಾದ ಸುಬ್ರಹ್ಮಣ್ಯ, ನಾರಾಯಣ ಶಿಬಾಜೆ, ವಾಸು, ಕುಶಾಲಪ್ಪರವರನ್ನು ಗೌರವಿಸಲಾಯಿತು. ಗೋಪಾಲಕೃಷ್ಣ ದೇಲಂಪಾಡಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಶಾಸಕ ಎಸ್. ಅಂಗಾರ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಭಕ್ತಿಯ ಶಕ್ತಿ ಅನಾವರಣಗೊಂಡಿದೆ. ಮನಸ್ಸು ಮತ್ತು ಆತ್ಮಕ್ಕೆ ಸರಿಕಾಣದ ಕಾರ್ಯಗಳನ್ನೇ ಇಂದು ಮಾಡುತ್ತಿರುವುದರಿಂದ ಬದುಕಿನಲ್ಲಿ ನೆಮ್ಮದಿ ಇಲ್ಲದಾಗಿದೆ. ಇದಕ್ಕೆ ಉತ್ತರ ಎಂಬಂತೆ ಡಾ. ದಾಮ್ಲೆಯವರು ಶಿಕ್ಷಣದೊಂದಿಗೆ ಆಧ್ಯಾತ್ಮವನ್ನು ಬೆಸೆಯುವ ಕಾರ್ಯವನ್ನು ಮಾಡಿದ್ದು ಶ್ಲಾಘನೀಯ ಎಂದರು.

ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ ವಿ ಚಿದಾನಂದ ಮಾತನಾಡಿ, ಸ್ನೇಹಶಾಲೆ ಪಟ್ಟಣದಲ್ಲಿರುವ ಹಳ್ಳಿ ಶಾಲೆ. ತನ್ನ ಸಾಧನೆಗಳಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಈಗ ಬಯಲು ಸೂರ್ಯಾಲಯವು ಅದಕ್ಕೆ ಶೋಭೆ ನೀಡಲಿದೆ ಎಂದು ಅಭಿನಂದಿಸಿದರು.

Inauguration of Bayalu Soorya Aalaya on Sankranti day Sullia, DK district

ಪ್ರಾಸ್ತವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ವಿಂಶತಿ ಉತ್ಸವದ ಸವಿನೆನಪಿಗಾಗಿ ‘ಬಯಲುಸೂರ್ಯ ಆಲಯ' ಎಂಬ ಧ್ಯಾನ ಮತ್ತು ಯೋಗಕೇಂದ್ರವನ್ನು ಸ್ಥಾಪಿಸುತ್ತಿದ್ದೇವೆ. ಸೂರ್ಯನನ್ನು ಜಗತ್ ಚಕ್ಷು ಎಂದು ಕರೆದಿದ್ದಾರೆ.

ಸೂರ್ಯನೂ ಪ್ರಕೃತಿಯ ಒಂದು ಅಂಗವಾಗಿದ್ದು ಎಲ್ಲ ಜೀವಿಗಳ ಚೈತನ್ಯ ಶಕ್ತಿಯಾಗಿದ್ದಾನೆ. ಜಗತ್ತಿನಲ್ಲಿ ಎಲ್ಲಾ ಸಮುದಾಯಗಳು ಆತನನ್ನು ದೇವರೆಂದು ಆರಾಧಿಸುತ್ತಾರೆ.

ಹಾಗಾಗಿ ಜಾತಿ ಮತಗಳ ಎಲ್ಲೆಗಳನ್ನು ಮೀರಿದ ಸೂರ್ಯನ ಆರಾಧನಾ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಜ್ಞಾನ ಚಕ್ಷುವಾದ ಸೂರ್ಯನ ಆರಾಧನೆಯಿಂದ ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ ಸ್ಪರ್ಶ ದೊರಕಲಿ ಎಂಬುದು ಈ ಮುಕ್ತ ಸೂರ್ಯಾಲಯದ ಉದ್ದೇಶವಾಗಿದೆ ಎಂದರು. ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಸಂಸ್ಥೆಗೆ ಬೈನಾಕ್ಯುಲರನ್ನು ಕೊಡುಗೆಯಾಗಿ ನೀಡಿದರು.

ಸುಳ್ಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಹೆಗ್ಗಡೆ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ , ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪಾಲೆಪ್ಪಾಡಿ ಗಣಪಯ್ಯ ಭಟ್, ಚೊಕ್ಕಾಡಿ ಶ್ರೀರಾಮ ದೇವಾಲಯದ ಗೌರವ ಸಲಹೆಗಾರ ಆನೆಕಾರ ಗಣಪಯ್ಯ ಮೊದಲಾದವರು ಉಪಸ್ಥಿತರಿದ್ದರು.

ಸಮೀರ ದಾಮ್ಲೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ.ವಿದ್ಯಾಶಾಂಭವ ಪಾರೆ ವಂದಿಸಿದರು. ಸಂಸ್ಥೆಯ ನಿರ್ದೇಶಕ ಶ್ರೀಕರ ದಾಮ್ಲೆ ಹಾಗೂ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆ ಸಹಕರಿಸಿದರು.

Inauguration of Bayalu Soorya Aalaya on Sankranti day Sullia, DK district

ಸ್ನೇಹ ಶಾಲೆಯ ಬಗ್ಗೆ: ಸುಳ್ಯದ ಸ್ನೇಹ ಶಾಲೆಯು ಕನ್ನಡ ಮಾಧ್ಯಮದಲ್ಲಿ ಕಳೆದ 20 ವರ್ಷಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ಇದು ಸಮೃದ್ಧ ಪ್ರಕೃತಿಯ ನಡುವೆ ನೆಲೆನಿಂತಿದೆ.

ಇಲ್ಲಿ ಪಠ್ಯೇತರವಾಗಿ ಅನೇಕ ವಿಷಯಗಳನ್ನು ಕಲಿಸಲಾಗುತ್ತಿದ್ದು ಮರಳು ತುಂಬಿದ ಬರಹದ ಮನೆ, ಕಲಾಶಾಲೆ, ಔಷಧೀಯ ವನ, ಬಯಲು ರಂಗಮಂದಿರ, ಮರದಡಿಯಲ್ಲಿ ಮುಕ್ತ ತರಗತಿ ಮುಂತಾಗಿ ಮಕ್ಕಳಿಗೆ ಉಲ್ಲಾಸದಾಯಕ ಪರಿಸರವನ್ನು ನಿರ್ಮಿಸಲಾಗಿದೆ.

ಕನ್ನಡ ಮಾಧ್ಯಮಕ್ಕೆ ಪ್ರಾಯೋಜಕರ ನೆರವನ್ನು ಅಪೇಕ್ಷಿಸುತ್ತಿದ್ದು ಈಗಾಗಲೇ 25 ವಿದ್ಯಾರ್ಥಿಗಳು ಉಚಿತವಾಗಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Inauguration of Bayalu Soorya Aalaya on Sankranti day at Sneha School Sullia. The open SUN temple has facility for performing YOGA by the students as well as by public.
Please Wait while comments are loading...