7th Pay Commission: 7ನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ದಿನಾಂಕ ಫಿಕ್ಸ್? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಜೂನ್ 27: 7 ನೇ ವೇತನ ಆಯೋಗ ಜಾರಿ ಕುರಿತು ಸರ್ಕಾರಿ ನೌಕರರ ನಿರಂತರ ಹೋರಾಟಕ್ಕೆ ಕೊನೆಗೆ ಜಯ ಸಿಗುವ ಕಾಲ ಬಂದಾಗಿದೆ. 7 ನೇ ವೇತನ ಆಯೋಗ ಜಾರಿ ಬಗ್ಗೆ ರಾಜ್ಯದ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಗ್ರೀಸ್ ಸಿಗ್ನಲ್ ಕೊಡುವ ಸಾಧ್ಯತೆ ಇದೆ.
ಕೆಲ ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹಾಗೂ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪ ನೇತೃತ್ವದಲ್ಲಿ ನಿಯೋಗ ಭೇಟಿಯಾಗಿ ಮನವಿ ಮಾಡಿದ್ದು, ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ರಾಜ್ಯ ಸರ್ಕಾರ ನೌಕರರು ಕಾತುರದಿಂದ ನಿರೀಕ್ಷಿಸುತ್ತಿರುವ 7ನೇ ವೇತನ ಆಯೋಗದ ವರದಿ ಶಿಫಾರಸುಗಳ ಅನುಷ್ಠಾನ ಕುರಿತು ಜುಲೈ 4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೃತೇತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಕೆಲ ವರ್ಷಗಳಿಂದ ಸರ್ಕಾರಿ ನೌಕರರು 7ನೇ ವೇತನ ಆಯೋಗ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ತೀವ್ರ ಬೇಡಿಕೆಯನ್ನು ಇಟ್ಟಿದ್ದಾರೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಕೆಲವು ಮಂತ್ರಿಗಳು ಅಪಸ್ವರ ನುಡಿದಿದ್ದರಿಂದ 7ನೇ ವೇತನ ಆಯೋಗದ ಶಿಫಾರಸ್ಸುಗಳ ಅನುಷ್ಠಾನದ ಕುರಿತು ಸಂಪುಟ ಸಭೆಯಲ್ಲಿ ಯಾವುದೇ ಚರ್ಚೆ ನಡೆಯದಿರುವುದರಿಂದ ಸರ್ಕಾರಿ ನೌಕರರು ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 7 ನೇ ವೇತನ ಆಯೋಗ ಜಾರಿಗೊಳಿಸುತ್ತಾರೆ ಎಂಬ ವಿಶ್ವಾಸವಿದೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ ಸಂದರ್ಭದಲ್ಲೂ ಈ ಬಗ್ಗೆ ಸಿಎಂ ಅವರ ಗಮನಕ್ಕೆ ತರಲಾಗಿದ್ದು, ಜುಲೈ 04 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಮಹತ್ವದ ನಿರ್ಧಾರ ಕೈಗೊಳ್ಳುವ ಭರವಸೆಯನ್ನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮಾತನಾಡಿ 7ನೇ ವೇತನ ಆಯೋಗ ಅನುಷ್ಠಾನದ ಕುರಿತು ರಾಜ್ಯದ ಮುಖ್ಯ ಮಂತ್ರಿ ಮತ್ತು ಉಪ ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಲಾಗಿದ್ದು, ಮುಂದಿನ ಜುಲೈ ಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಶಿಫಾರಸ್ಸುಗಳ ಜಾರಿ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಭರವಸೆ ಇದೆ ಎಂದು ತಿಳಿಸಿದರು.
ಹಲವು ವರ್ಷಗಳಿಂದ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಿಲ್ಲ. ಕಳೆದ ಮೂರು ವರ್ಷಗಳಿಂದ 7 ನೇ ವೇತನ ಆಯೋಗ ಜಾರಿ ಮಾಡುವಂತೆ ಸರ್ಕಾರಿ ನೌಕರರಿಂದ ಸಾಕಷ್ಟು ಒತ್ತಡಗಳಿವೆ. ಆದರೆ, ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದ ಸರ್ಕಾರ ಈಗ ಹೊಸ ವೇತನ ಅನುಷ್ಠಾನ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟ ಎಂದು ಹಿಂದೇಟು ಹಾಕುತ್ತಲೇ ಬಂದಿತ್ತು. ಆದರೆ, ನೌಕರರ ಸಂಘಗಳಿಂದ ಸಾಕಷ್ಟು ಒತ್ತಡ ಬರುತ್ತಿದ್ದು, ನೌಕರರ ಪ್ರತಿಭಟನೆಗೂ ಸಹ ಮುಂದಾಗುವ ಸಾಧ್ಯತೆಗಳಿವೆ. ಹೀಗಾಗಿ, ಅನುಷ್ಠಾನ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.












Click it and Unblock the Notifications