7th Pay Commission; ಸರ್ಕಾರಿ ನೌಕರರಿಗೆ ಸಿಎಂ, ಡಿಸಿಎಂ ಮತ್ತೊಂದು ಭರವಸೆ
ಬೆಂಗಳೂರು, ಜೂನ್ 07: ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ನೀತಿ ಸಂಹಿತೆಯನ್ನು ಗುರುವಾರ ವಾಪಸ್ ಪಡೆದಿದೆ.
ಕರ್ನಾಟಕದ ಸರ್ಕಾರಿ ನೌಕರರು ಲೋಕಸಭೆ ಚುನಾವಣೆ ನೀತಿ ಸಂಹಿತೆ ವಾಪಸ್ ಪಡೆದ ಹಿನ್ನಲೆಯಲ್ಲಿ ಸಂತಸಗೊಂಡಿದ್ದಾರೆ. ರಾಜ್ಯದ ಸರ್ಕಾರಿ ನೌಕರರು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಸರ್ಕಾರ ಯಾವಾಗ ಜಾರಿಗೊಳಿಸಲಾಗುತ್ತದೆ? ಎಂದು ಕಾದು ಕುಳಿತಿದ್ದಾರೆ.

7ನೇ ವೇತನ ಆಯೋಗದ ವರದಿ ಜಾರಿಗೆ ಮಾರ್ಚ್ ತಿಂಗಳಿನಿಂದ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿತ್ತು. ಈಗ ನೀತಿ ಸಂಹಿತೆ ವಾಪಸ್ ಪಡೆಯಲಾಗಿದ್ದು, ಸರ್ಕಾರಿ ನೌಕರರಲ್ಲಿ ಹೊಸ ಭರವಸೆ ಮೂಡಿದೆ. ಈಗಾಗಲೇ ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿಯಾಗಿದೆ.
ಭರವಸೆಯನ್ನು ನೀಡಿದ ಉಭಯ ನಾಯಕರು: ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ಮತ್ತು ರಾಜ್ಯ ಸಂಘದ ಪದಾಧಿಕಾರಿಗಳು ದಿನಾಂಕ 3/6/2024ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು. 7ನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯನ್ನು ಆಲಿಸಿದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನೀತಿ ಸಂಹಿತೆ ಮುಕ್ತಾಯವಾದ ನಂತರ 7ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಭರವಸೆಯನ್ನು ನಿಯೋಗಕ್ಕೆ ನೀಡಿದ್ದಾರೆ.
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ವಾಪಸ್ ಪಡೆಯಲಾಗಿದೆ. ಆದರೆ ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ಘೋಷಣೆಯಾಗಿತ್ತು. ಗುರುವಾರ ಈ ಚುನಾವಣೆಗೆ 11 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದ ಕಾರಣ ಜೂನ್ 13ರಂದು ನಡೆಯಬೇಕಿದ್ದ ಚುನಾವಣೆ ನಡೆಯುವುದಿಲ್ಲ. ಆದರೆ ಜೂನ್ 16ರ ತನಕ ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆ ಬಳಿಕ ಸರ್ಕಾರ 7ನೇ ವೇತನ ಆಯೋಗದ ವರದಿ ಜಾರಿ ಕುರಿತು ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಮಾರ್ಚ್ 16ರಂದು ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರದಿಯನ್ನು ನೀಡಿದೆ. ಆದರೆ ಅಂದು ಮಧ್ಯಾಹ್ನದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಕಾರಣ ವರದಿ ಬಗ್ಗೆ ಯಾವುದೇ ಕ್ರಮ ಇನ್ನೂ ಆಗಿಲ್ಲ.
ವರದಿ ಸ್ವೀಕಾರ ಮಾಡಿದ್ದ ಮುಖ್ಯಮಂತ್ರಿಗಳು, ರಾಜ್ಯದ 7ನೇ ವೇತನ ಆಯೋಗವು ಇಂದು ವರದಿಯನ್ನು ಸಲ್ಲಿಸಿದ್ದು ಮೂಲ ವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ" ಎಂದು ಭರವಸೆ ನೀಡಿದ್ದಾರೆ.
"ವೇತನ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿತ್ತು. ಈ ಅವಧಿಯು ಮಾರ್ಚ್ 15ರಂದು ಮುಕ್ತಾಯಗೊಂಡಿದೆ. ನಿನ್ನೆ ನಾನು ಮೈಸೂರಿನಲ್ಲಿದ್ದ ಕಾರಣ ವರದಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಇಂದು ವರದಿಯನ್ನು ಸ್ವೀಕರಿಸಲಾಗಿದೆ" ಎಂದು ಸಿದ್ದರಾಮಯ್ಯ ಮಾರ್ಚ್ 16ರಂದು ಟ್ವೀಟ್ ಮಾಡಿದ್ದರು.
"ವರದಿಯಲ್ಲಿ ಕನಿಷ್ಠ ಮೂಲ ವೇತನವನ್ನು ರೂ.17,000 ದಿಂದ ರೂ. 27,000ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಇದರೊಂದಿಗೆ ಇನ್ನೂ ಅನೇಕ ಶಿಫಾರಸುಗಳಿದ್ದು ವರದಿಯನ್ನು ಆರ್ಥಿಕ ಇಲಾಖೆಗೆ ನೀಡಲಾಗಿದೆ. ಆರ್ಥಿಕ ಇಲಾಖೆಯು ವರದಿಯನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ ನಂತರ ನೀಡುವ ಸಲಹೆಗಳ ಆಧಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ" ಎಂದು ತಿಳಿಸಿದ್ದರು.












Click it and Unblock the Notifications