ಕರ್ನಾಟಕದ 7 ಜಿಲ್ಲೆಗಳಲ್ಲಿ ಆ. 8, 9ರಂದು ಯೆಲ್ಲೋ ಅಲರ್ಟ್
ಬೆಂಗಳೂರು, ಆಗಸ್ಟ್ 08; ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಭಾರತೀಯ ಹವಾಮಾನ ಇಲಾಖೆ ಆಗಸ್ಟ್ 8 ಮತ್ತು 9ರಂದು ಧಾರಾಕಾರ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದೆ. ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾನುವಾರ ಮತ್ತು ಸೋಮವಾರ ಹೆಚ್ಚು ಮಳೆಯಾಗಲಿದೆ. ಏಳು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು ಮತ್ತು ಶಿವಮೊಗ್ಗದಲ್ಲಿ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ಶನಿವಾರ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆಗೆ ಭಾರೀ ಗಾಳಿ ಆರಂಭವಾಗಿದ್ದು, ಹಲವು ಪ್ರದೇಶಗಳಲ್ಲಿ 5 ಗಂಟೆ ಬಳಿಕ ಭಾರೀ ಮಳೆಯಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡಿದರು. ಭಾನುವಾರ ಸಹ ಮೋಡ ಕವಿದ ವಾತಾವರಣವಿದೆ.
ಕರಾವಳಿ ಭಾಗದಲ್ಲಿ ಗಂಟೆಗೆ 50 ಕಿ. ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. 3.6 ಮೀಟರ್ ಎತ್ತರದ ಅಲೆಗಳು ಏಳುವ ಸೂಚನೆ ಇದೆ. ಮೀನುಗಾರರು ಆಗಸ್ಟ್ 11ರ ತನಕ ಸಮುದ್ರಕ್ಕೆ ಇಳಿಯಬಾರದು ಎಂದುದ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಆಗಸ್ಟ್ 10ರಿಂದ 12ರ ತನಕ ಮಳೆ ಕಡಿಮೆಯಾಗಲಿದೆ. ಈ ವೇಳೆ ಸಾಧಾರಣ ಮಳೆಯಾಗಬಹುದು ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಎಲ್ಲಿ ಎಷ್ಟು ಮಳೆ; ಶನಿವಾರ ಆಗುಂಬೆ ಮತ್ತು ಕುಕ್ಕೆ ಸುಬ್ರಮಣ್ಯದಲ್ಲಿ ತಲಾ 10 ಸೆಂ. ಮೀ. ಮಳೆಯಾಗಿದೆ. ಮಡಿಕೇರಿಯಲ್ಲಿ 9, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 7 ಸೆಂ. ಮೀ. ಮಳೆ ಸುರಿದಿದೆ. ಕಾರ್ಕಳದಲ್ಲಿ 5, ಕುಂದಾಪುರ ಮತ್ತು ಕೊಪ್ಪದಲ್ಲಿ 4 ಸೆಂ. ಮೀ. ಮಳೆಯಾಗಿದೆ.
ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಮನೆಗಳಿಗೆ ಪೂರ್ಣ ಹಾನಿಯಾಗಿದೆ. 6 ಮನೆಗಳು ಭಾಗಶಃ ಜಖಂಗೊಂಡಿವೆ. 46 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ಬೆಟ್ಟಗೆರೆಯಲ್ಲಿ ಬಸ್ ನಿಲ್ದಾಣ ಕುಸಿದು ಬಿದ್ದಿದೆ.
ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಕಕ್ಕಬ್ಬೆ, ಬಕ್ಕ, ಭಾಗಮಂಡಲದಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಮುಕ್ಕೋಡ್ಲು-ಹೆಮ್ಮೆತ್ತಾಳು ಸಣ್ಣ ಸೇತುವೆಗೆ ಹಾನಿಯಾಗಿದೆ. ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಮಳೆಯಾಗಿದೆ. ಅಂಕೋಲಾ, ಹೊನ್ನಾವರ, ಭಟ್ಕಳ, ಮುಂಡಗೋಡ, ಶಿರಸಿ ಭಾಗದಲ್ಲಿಯೂ ಶನಿವಾರ ಮಳೆ ಸುರಿದಿದೆ.
ಕೊಡಗು ಮಳೆ ವಿವರ; ಕೊಡಗು ಜಿಲ್ಲೆಯಲ್ಲಿ ಸರಾಸರಿ 41.08 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 1865.72 ಮಿ.ಮೀ ಮಳೆ ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ 63.23 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 18.70 ಮಿ.ಮೀ. ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 41.30 ಮಿ.ಮೀ ಮಳೆಯಾಗಿದೆ.
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಇಂದಿನ ನೀರಿನ ಮಟ್ಟ 2855.85 ಅಡಿಗಳು. ಜಲಾಶಯಕ್ಕೆ ಒಳಹರಿವು 12,557 ಕ್ಯುಸೆಕ್, ಹೊರ ಹರಿವು ನದಿಗೆ 9396 ಕ್ಯುಸೆಕ್, ನಾಲೆಗೆ 266 ಕ್ಯುಸೆಕ್.
ಮಹಾರಾಷ್ಟ್ರ ಭಾಗದಲ್ಲಿ ಮಳೆ ಕಡಿಮೆಯಾಗಿದ್ದು ಕೃಷ್ಣಾ ನದಿಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. ಆಲಮಟ್ಟಿ ಜಲಾಶಯಕ್ಕೆ 108844 ಕ್ಯುಸೆಕ್ ಒಳಹರಿವು ಇದೆ. ನಾರಾಯಣಪುರ ಜಲಾಶಯಕ್ಕೆ 45484 ಕ್ಯುಸೆಕ್ ನೀರು ಹರಿದುಬರುತ್ತಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಭದ್ರಾ ಜಲಾಶಯಕ್ಕೆ 19402 ಕ್ಯುಸೆಕ್, ಲಿಂಗನಮಕ್ಕಿ ಜಲಾಶಯಕ್ಕೆ 24716 ಕ್ಯುಸೆಕ್ ನೀರು ಹರಿದು ಬರುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಕಾವೇರಿ ನದಿಯ ನೀರಿನ ಮಟ್ಟವೂ ಹೆಚ್ಚಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯಕ್ಕೆ 21454 ಕ್ಯುಸೆಕ್ ನೀರು ಹರಿದುಬರುತ್ತಿದೆ. ಜಲಾಶಯ ಪೂರ್ಣ ಮಟ್ಟ 38.04 ಮೀಟರ್ ಆಗಿದೆ. ಇಂದಿನ ನೀರಿನ ಮಟ್ಟ 35.82 ಮೀಟರ್.












Click it and Unblock the Notifications