Karnataka weather: ರಾಜ್ಯದಲ್ಲಿ ಇಂದಿನಿಂದ ಡಿ. 13ರ ವರೆಗೆ ಧಾರಾಕಾರ ಮಳೆ, ಎಲ್ಲೆಲ್ಲಿ?
ಬೆಂಗಳೂರು, ಡಿಸೆಂಬರ್ 05: ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಮತ್ತೆ ಮಳೆ ಅಬ್ಬರ ಜೋರಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಅನೇಕ ಕಡೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಗಳು ಇವೆ. ಎರಡು ದಿನದಿಂದ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಇದು ಡಿಸೆಂಬರ್ 13ರವರೆಗೆ ಮುಂದುವರಿಯಲಿದೆ.
ಮುನ್ಸೂಚನೆ ಪ್ರಕಾರ, ಇಂದಿನಿಂದ ಮುಂದಿನ ಮೂರು ದಿನ (ಡಿಸೆಂಬರ್ 7) ರಾಜ್ಯದ ವಿವಿಧೆಡೆ ಹಗುರ ಮಳೆ ಆಗಲಿದೆ. ನಂತರ ಡಿಸೆಂಬರ್ 8ರಿಂದ ಹಿಂಗಾರು ಮಳೆಯ ತಿವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಇದೆ.

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಮೈಚಾಂಗ್' (Michaung Cyclone) ಚಂಡಮಾರುತವು ತಮಿಳುನಾಡು ರಾಜ್ಯದಲ್ಲಿ ಪ್ರವಾಹ ಸೃಷ್ಟಿಸಿದೆ. ಇದರ ಪ್ರಭಾವ ಕರ್ನಾಟಕದ ಮೇಲೆ ಅಲ್ಪ ಪ್ರಮಾಣದಲ್ಲಿ ತಟ್ಟಲಿದೆ. ಹೀಗಾಗಿಯೇ ಎರಡು ದಿನದಿಂದ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚಳಿ ಗಾಳಿ ಬೀಸುತ್ತಿದೆ.
05.12.2023 ರಿಂದ 13.12.2023 ರವರೆಗೆ ಮಳೆಯ ಮುನ್ಸೂಚನೆ: ರಾಜ್ಯದಾದ್ಯಂತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. pic.twitter.com/WPk30VnbdM
— Karnataka State Natural Disaster Monitoring Centre (@KarnatakaSNDMC) December 5, 2023
ಡಿಸೆಂಬರ್ 9-13 ರಾಜ್ಯಾದ್ಯಂತ ಮಳೆ
ರಾಜ್ಯದ ಕೆಲವೆಡೆ ಇಂದಿನಿಂದ ಮುಂದಿನ ಮೂರು ಸಾಧಾರಣವಾಗಿ ಮಳೆ ಸುರಿದರೆ, ನಂತರದ ಧಾರಾಕಾರ ಮಳೆ ಆಗುವ ಮುನ್ಸೂಚನೆ ಇದೆ. ಡಿಸೆಂಬರ್ 9ರಿಂದ 13ರವರೆಗೆ ದಕ್ಷಿಣ ಒಳನಾಡಿನ ರಾಜ್ಯಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ವಿಜಯನಗರ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ, ಕೆಲವೊಮ್ಮೆ ಅಧಿಕ ಮಳೆ ಆಗಲಿದೆ.

ಇದೇ ವೇಳೆ ಕರಾವಳಿಯ ಮೂರು ಜಿಲ್ಲೆಗಳಲ್ಲಿಯೂ ಆಗಾಗ ಜೋರು ಮಳೆಯ ದರ್ಶನವಾಗಲಿದೆ. ಬರೀ ಶುಷ್ಕ ವಾತಾವರಣವನ್ನೇ ಕಂಡಿರುವ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ವಿಜಯಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಆಗಾಗ ಸಾಮಾನ್ಯ ಮಳೆಯ ದರ್ಶನವಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ರಾಜ್ಯದ ಗರಿಷ್ಠ ತಾಪಮಾನ: ಬೆಂಗಳೂರು ಹವಾಮಾನ
ಕಳೆದ 24 ಗಂಟೆಗಳಲ್ಲಿ ಹೊನ್ನಾವರದಲ್ಲಿ ರಾಜ್ಯದ ಅತ್ಯಧಿಕ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಮಂಗಳೂರಿನ ಎರಡು ಕಡೆಗಳಲ್ಲಿ 34 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಇನ್ನೂ ಕನಿಷ್ಠ ತಾಪಮಾನ ಚಿಕ್ಕಮಗಳೂರಿನಲ್ಲಿ 15ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ಬೆಂಗಳೂರಿನಲ್ಲಿ ಮುಂದಿನ ಎರಡರಿಂದ ಮೂರು ದಿನ ತಂಪು ವಾತಾವರಣವೇ ಮುಂದುವರಿಯಲಿದೆ. ಅಲ್ಲಲ್ಲಿ ಸೋನೆ ಮಳೆ ಬರುವ ಸಾಧ್ಯತೆ ಇದೆ. ತಾಪಮಾನದಲ್ಲಿ ತೀವ್ರ ಇಳಿಕೆ ಕಂಡು ಬರಲಿದೆ. ಇಲ್ಲಿ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 27-28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇದರ ಹೊರತು ಯಾವುದೇ ಗಂಭೀರ ಸ್ವರೂಪದ ಮಳೆ ಮುನ್ಸೂಚನೆಗಳು ನಗರಕ್ಕೆ ಇಲ್ಲ ಎಂದು ತಿಳಿಸಲಾಗಿದೆ.












Click it and Unblock the Notifications