ಹೊಳಪು ಕಳೆದುಕೊಂಡಿತೇ ಇಳಕಲ್ ಸೀರೆ?
ಬಾಗಲಕೋಟೆ, ನ. 3: ಸಾಹಿತಿಗಳಿಗೆ, ಕವಿಗಳಿಗೆ ಸ್ಫೂರ್ತಿಯಾಗಿದ್ದ ಇಳಕಲ್ ಸೀರೆ ತನ್ನ ಹೊಳಪು ಕಳೆದುಕೊಳ್ಳುತ್ತಿದೆಯೇ? ಜನ ಮಾನಸದಿಂದ ಮರೆಯಾಗಲಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ. ಬಾಗಲಕೋಟೆ ಜಿಲ್ಲೆಯ ಐದು ಸಾವಿರಕ್ಕೂ ಹೆಚ್ಚು ಕೈ ಮಗ್ಗಗಳು ಅವಸಾನದ ಅಂಚು ತಲುಪಿವೆ.
5 ಸಾವಿರ ಇದ್ದ ಕೈಮಗ್ಗಗಳ ಸಂಖ್ಯೆ ವಿದ್ಯುತ್ ಮಗ್ಗಗಳ ಭರಾಟೆ ಅಡಿಯಲ್ಲಿ 500ಕ್ಕೆ ಕುಸಿದಿದೆ. ತನ್ನ ಹೆಸರಿನಿಂದಲೇ ಉತ್ತರ ಕರ್ನಾಟಕದ ಸೊಗಡನ್ನು, ಸಂಸ್ಕೃತಿಯನ್ನು ಸಾರುತ್ತಿದ್ದ ಇಳಕಲ್ ಸೀರೆ ಮಾರುಕಟ್ಟೆಯಲ್ಲಿ ಮುಂದೆ ಸಿಗುವುದಿಲ್ಲ ಎಂಬ ಮಾತು ಸತ್ಯವಾಗುವಂತೆ ಗೋಚರವಾಗುತ್ತಿವೆ.[ಕೈಮಗ್ಗ ಕೊಲ್ಲದಿರಿ, ದೇಸಿ ಸಂಸ್ಕೃತಿ, ಪರಂಪರೆ ಉಳಿಸಿ]

ಹೆಚ್ಚಿದ ಖರ್ಚಿನಿಂದ ಅನಿವಾರ್ಯವಾಗಿ ಕೆಲ ನೇಕಾರರು ವಿದ್ಯುತ್ ಮಗ್ಗಗಳತ್ತ ವಾಲಿದ್ದಾರೆ, ಪರಿಣಾಮ ಕೈ ಮಗ್ಗ ಮತ್ತು ಇಳಕಲ್ ಸೀರೆಯ ಮೊದಲಿನ ಹೊಳಪು ಕಾಣದಾಗಿದೆ. ಇನ್ನು ಕೈ ಮಗ್ಗ ದಲ್ಲೇ ಕೆಲಸ ಮಾಡುತ್ತಿರುವವರು ಜೀವನ ನಿರ್ವಹಣೆಗೂ ತೊಂದರೆ ಪಡುವಂತಾಗಿದೆ. ಒಂದು ಕಾಲದಲ್ಲಿ ಬಾಗಲಕೋಟೆ ಮತ್ತು ಗದಗ ಜಿಲ್ಲೆಯನ್ನು ಕೈ ಮಗ್ಗದ ಸೀರೆಗಳಿಂದಲೇ ಗುರುತಿಸಲಾಗುತ್ತಿತ್ತು.
ಪುರಾತನ ಕತೆ ಹೇಳುವ ವೈವಿಧ್ಯಮಯ ಇಳಕಲ್ ಸೀರೆಗಳು, ಸ್ಥಳೀಯವಾಗಿಯೇ ಸಿಗುತ್ತಿದ್ದ ಕಚ್ಚಾ ವಸ್ತುಗಳು ಕೈ ಮಗ್ಗ ಮತ್ತು ನೇಕಾರರಿಗೆ ಮೆರುಗು ತಂದುಕೊಟ್ಟಿದ್ದವು.[ಮೊಳಕಾಲ್ಮೂರು ಸೀರೆಗೂ ಹತ್ತಿದ ತೆಲಂಗಾಣ ಕಿಚ್ಚು]
ವಿದ್ಯುತ್ ಮಗ್ಗಗಳ ನೆರವಿನಲ್ಲಿ ದಿನವೊಂದಕ್ಕೆ 3-4 ಸೀರೆ ನೇಯಲು ಸಾಧ್ಯ. ಆದರೆ ಕೈ ಮಗ್ಗದಿಂದ ಕೇವಲ ಒಂದೇ ಒಂದು ಸೀರೆ ತಯಾರು ಮಾಡಿದರೆ ಹೆಚ್ಚು. ಕೈ ಮಗ್ಗದಿಂದ ತಯಾರಾದ ಸೀರೆಯ ಬೆಲೆಯೂ ಜಾಸ್ತಿ. ಡಿಸೈನ್ ಗೆ ಅನುಗುಣವಾಗಿ ಒಂದು ಸೀರೆಗೆ 10,000 ರೂ. ಗಿಂತಲೂ ಅಧಿಕ ಬೆಲೆ ನೀಡಬೇಕಾಗುತ್ತದೆ. ಇದು ಕೂಡ ಕೈ ಮಗ್ಗ ನೇಕಾರರಿಗೆ ಹೊಡೆತ ನೀಡಿದೆ.
ಕೈ ಮಗ್ಗ ನೇಕಾರರು 60 ಸಾವಿರಕ್ಕಿಂತ ಹೆಚ್ಚಿನ ಹಣ ತೊಡಗಿಸಿ ವಿದ್ಯುತ್ ಮಗ್ಗಗಳನ್ನು ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಚ್ಚಾ ವಸ್ತಗಳ ಪೂರೈಕೆ ಮತ್ತು ಮಾರುಕಟ್ಟೆ ಆಧರಿಸಿ ಹೊಸ ನೇಕಾರರು ಧೈರ್ಯ ಮಾಡಿ ವಿದ್ಯುತ್ ಮಗ್ಗ ಖರೀದಿಸಿದರೂ ತಯಾರಾಗುವ ಸೀರೆ ಗುಣಮಟ್ಟ ಕಳಪೆ. ಒಟ್ಟಿನಲ್ಲಿ ನೇಕಾರರು ದ್ವಂದ್ವಕ್ಕೆ ಸಿಲುಕಿದ್ದಾರೆ ಎಂದು ಇಳಕಲ್ ಕೈಮಗ್ಗ ನೇಕಾರರ ಸಮಿತಿ ಕಾರ್ಯದರ್ಶಿ ಅಶೋಕ್ ಹೇಳುತ್ತಾರೆ.












Click it and Unblock the Notifications