ಡಿಕೆ ರವಿ ತನಿಖೆ ಸಿಬಿಐಗೆ, ಸರ್ಕಾರದಿಂದ ಅಧಿಕೃತ ಆದೇಶ
ಬೆಂಗಳೂರು, ಮಾ. 25 : ದಕ್ಷ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಮಂಗಳವಾರ ರಾಜ್ಯ ಗೃಹ ಇಲಾಖೆ ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ಫ್ಯಾಕ್ಸ್ ಕಳಿಸಿದೆ.
ಸೋಮವಾರದ ವಿಧಾನಸಭೆ ಕಲಾಪದಲ್ಲಿ ಡಿಕೆ ರವಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಮಂಗಳವಾರ ರಾಜ್ಯ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಸಹಿಯುಳ್ಳ ಆದೇಶದ ಪ್ರತಿ ಕೇಂದ್ರಕ್ಕೆ ರವಾನೆಯಾಗಿದೆ. [ಸಿಬಿಐ, ಸಿಐಡಿ ನಡುವಿನ ವ್ಯತ್ಯಾಸವೇನು?]

ಸಿಬಿಐ ತನಿಖೆಗೆ ವಹಿಸುವ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಬಿದ್ದಿದ್ದು, ಕೇಂದ್ರ ಗೃಹ ಸಚಿವಾಲಯ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆ. ಈ ಪ್ರಕ್ರಿಯೆ ಒಂದು ವಾರದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. [ಡಿಕೆ ರವಿ ಕೇಸ್ : ಚೆನ್ನೈ ಸಿಬಿಐ ತಂಡದಿಂದ ತನಿಖೆ]
ಚೆನ್ನೈ ತಂಡದಿಂದ ತನಿಖೆ : ಡಿಕೆ ರವಿ ಅವರ ನಿಗೂಢ ಸಾವಿನ ತನಿಖೆಯನ್ನು ಚೆನ್ನೈನ ಸಿಬಿಐ ತಂಡದ ಅಧಿಕಾರಿಗಳು ನಡೆಸುವ ಸಾಧ್ಯತೆ ಇದೆ. ಪ್ರಕರಣದ ತನಿಖೆಯಲ್ಲಿ ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸಹಕಾರ ನೀಡಲಿದ್ದಾರೆ. [ಜನ ಸಾಮಾನ್ಯರು ಸಿಬಿಐಗೆ ದೂರು ನೀಡಬಹುದೇ?]

ಪ್ರಮುಖರಿಗೆ ನೋಟಿಸ್ : ಸಿಬಿಐ ತನಿಖೆ ಆರಂಭಿಸಿದರೆ ಮೊದಲು ಪ್ರಕರಣದ ತನಿಖೆ ನಡೆಸಿದ ಸಿಐಡಿ ಪೊಲೀಸರೊಂದಿಗೆ ಮಾತುಕತೆ ನಡೆಸಿ, ಮಾಹಿತಿ ಸಂಗ್ರಹಣೆ ಮಾಡಲಿದೆ. ನಂತರ ಪ್ರಕರಣದ ಪ್ರಮುಖರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದೆ. ಅಂದಹಾಗೆ ಕರ್ನಾಟಕ ಸರ್ಕಾರ ಮೂರು ತಿಂಗಳಿನಲ್ಲಿ ತನಿಖೆ ಪೂರ್ಣಗೊಳಿಸುವಂತೆ ಮನವಿ ಮಾಡಿದೆ.












Click it and Unblock the Notifications