Kannada: ಕನ್ನಡಿಗರೇ ಖುಷಿಪಡುವ ಸುದ್ದಿ ಇಲ್ಲಿದೆ, ಓದಿ ಸಂಭ್ರಮಿಸಿ!
ಕನ್ನಡ ಅಂದ್ರೆ ಒಂದು ಹೆಮ್ಮೆ, ಕನ್ನಡಿಗರ ಸಾಮ್ರಾಜ್ಯಗಳಿಗೆ ಸಾವಿರಾರು ವರ್ಷ ಇತಿಹಾಸ ಇದೆ. ಹೀಗೆ ಕನ್ನಡಿಗರ ದೇಗುಲ ಹಾಗೂ ಪಾರಂಪರಿಕ ಕಟ್ಟಡಗಳಿಗೂ ಸಾವಿರಾರು ವರ್ಷ ಹಿನ್ನೆಲೆ ಇದೆ. ಹೀಗಿದ್ದಾಗ ಕರ್ನಾಟಕದ ಹಲವು ಜಾಗಗಳಿಗೆ ವಿಶ್ವ ಮಾನ್ಯತೆ ನೀಡಲಾಗಿದೆ ಎಂಬ ಹೆಮ್ಮೆ ಕೂಡ ಕನ್ನಡಿಗರದ್ದು. ಈ ಸಂದರ್ಭದಲ್ಲಿ ಮತ್ತೊಂದು ಹೆಮ್ಮೆಯ ಸಂಗತಿ ಕನ್ನಡಿಗರನ್ನು ಗಣೇಶ ಚತುರ್ಥಿಯ ದಿನವೇ ಹುಡುಕಿಕೊಂಡು ಬಂದಿದೆ.
ಕನ್ನಡಿಗರಿಗೆ ಕನ್ನಡದಷ್ಟೇ ಹೆಮ್ಮೆ ತಂದಿರುವುದು ಹೊಯ್ಸಳ ಸಾಮ್ರಾಜ್ಯ. ಹೀಗೆ ಹೊಯ್ಸಳ ಸಾಮ್ರಾಜ್ಯ ಕನ್ನಡ ನಾಡಿಗೆ ಮಾಡಿದ್ದ ಉಪಕಾರವು ಒಂದೆರಡಲ್ಲ. ಇಂತಿಪ್ಪ ಹೊಯ್ಸಳರ ರಾಜರು ಕನ್ನಡ ನಾಡು ಸೇರಿದಂತೆ ಅಕ್ಕಪಕ್ಕ ರಾಜ್ಯಗಳಲ್ಲೂ ಸಾವಿರಾರು ದೇಗುಲ ಕಟ್ಟಿಸಿ ಧಾರ್ಮಿಕ ಶ್ರದ್ಧೆ ಮೆರೆದಿದ್ದರು. ಈ ಪೈಕಿ ಹಲವು ದೇಗುಲಗಳು ಅಪಾಯಕ್ಕೆ ಸಿಲುಕಿದ್ದವು. ಈ ಹಿನ್ನೆಲೆ ದೇಗುಲಗಳ ರಕ್ಷಣೆಗೆ ಒತ್ತಾಯ ಕೇಳಿಬರುವಾಗಲೇ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳ ಸಮೂಹ ಸೇರಿಸಲಾಗಿದೆ.

ಹಬ್ಬದ ದಿನ ಡಬಲ್ ಸಂಭ್ರಮ
ಹೌದು, ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲೇ ಕನ್ನಡಿಗರಿಗೆ ಮುತ್ತಿನಂತಹ ಸುದ್ದಿ ಸಿಕ್ಕಿದೆ. ಕರ್ನಾಟಕದ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣಕ್ಕೆ ಸೇರಿಸಲಾಗಿದ್ದು, ಈ ಪ್ರತಿಷ್ಠಿತ ಮಾನ್ಯತೆ ಪಡೆದ ಭಾರತದ 42ನೇ ತಾಣವಾಗಿ ಕನ್ನಡ ನಾಡಿನ ಹೆಮ್ಮೆಯ ದೇಗುಲಗಳು ಸೇರಿವೆ. ಹಾಗೇ ಪಶ್ಚಿಮ ಬಂಗಾಳದ ಶಾಂತಿನಿಕೇತನವನ್ನು ಯುನೆಸ್ಕೋದ ಮತ್ತೊಂದು ಪಾರಂಪರಿಕ ತಾಣವಾಗಿ ಸೇರಿಸಿದ 1 ದಿನದ ನಂತರ ಈ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದಿದೆ.
Sacred Ensembles of the Hoysalas -the group of Hoysala temples in Karnataka - inscribed on UNESCO World Heritage List pic.twitter.com/9oAZ3CICEF
— ANI (@ANI) September 18, 2023
ಸಾವಿರ ವರ್ಷಗಳ ಇತಿಹಾಸ ಇದೆ
ಇನ್ನು ಕನ್ನಡಿಗರ ಹೆಮ್ಮೆಯನ್ನು ಭಾರತದ ಮೂಲೆ ಮೂಲೆಗೂ ಹಬ್ಬಿಸಿ, ಜಗತ್ತಿನಾದ್ಯಂತ ಕನ್ನಡಿಗರ ಶಕ್ತಿ ಪಸರಿಸಿದ ಕೀರ್ತಿ ಹೊಯ್ಸಳ ಸಾಮ್ರಾಜ್ಯಕ್ಕೆ ಸಲ್ಲುತ್ತದೆ. 10 ಮತ್ತು 14ನೇ ಶತಮಾನದ ಮಧ್ಯೆ ಪ್ರವರ್ಧಮಾನಕ್ಕೆ ಬಂದ ಹೊಯ್ಸಳ ಸಾಮ್ರಾಜ್ಯ ದಕ್ಷಿಣ ಭಾರತದದಲ್ಲಿನ ಕಲೆ, ವಾಸ್ತುಶಿಲ್ಪ & ಸಂಸ್ಕೃತಿಗೆ ನೀಡಿದ ಕೊಡುಗೆಯನ್ನ ಮನುಷ್ಯ ಎಂದೆಂದೂ ಮರೆಯಲು ಆಗಲ್ಲ. ಕನ್ನಡಿಗರು ಮಾತ್ರವಲ್ಲದೆ ಮಾನವರ ನಾಗರಿಕತೆಗೂ ಹೊಯ್ಸಳ ಸಾಮ್ರಾಜ್ಯದ ಈ ಶಿಲ್ಪಕಲೆಯ ಕೊಡುಗೆ ಎಂದೂ ಮರೆಯಲಾಗದು.
ಇನ್ನು ಕರ್ನಾಟಕದ ಹಂಪಿ ಅವಶೇಷಗಳು, ಪಟ್ಟದಕಲ್ಲು ಸ್ಮಾರಕ ಮತ್ತು ಪಶ್ಚಿಮ ಘಟ್ಟಗಳು ಸೇರಿ ಹಲವು ತಾಣಗಳಿಗೆ ಈಗಾಗಲೇ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟ ಸಿಕ್ಕಿದೆ. ಅದೇ ರೀತಿ ಹೊಯ್ಸಳ ಸಾಮ್ರಾಜ್ಯದ ದೇವಾಲಯಗಳು ಮತ್ತು ಪಶ್ಚಿಮ ಬಂಗಾಳದ ಶಾಂತಿನಿಕೇತನ ಪ್ರದೇಶಕ್ಕೂ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಹೀಗೆ ಕನ್ನಡಿಗರ ಸಂಸ್ಕೃತಿ ಮತ್ತೊಮ್ಮೆ ಜಗತ್ತಿನ ಮೂಲೆ ಮೂಲೆಗೂ ಪಸರಿಸಲಿದೆ.
ಸಂತಸ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಂತಸವನ್ನು ವ್ಯಕ್ತಪಡಿಸಿದ್ದು, ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇಗುಲಗಳು ಸೇರ್ಪಡೆ ಆಗಿದ್ದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಕೂಡ. ನಾಡಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವಮಟ್ಟದ ಮೂಲ ಸೌಲಭ್ಯ, ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಐತಿಹಾಸಿಕ ಸ್ಥಳಗಳು ಮತ್ತು ಪುಣ್ಯ ಕ್ಷೇತ್ರಗಳ ತೊಟ್ಟಿಲು ಕರ್ನಾಟಕಕ್ಕೆ ಸ್ವಾಗತ ಎಂದು ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.












Click it and Unblock the Notifications