ಹಿಜಾಬ್, ಧರ್ಮ ಸಂಘರ್ಷ: ಉರಿಯುವ ಬೆಂಕಿಗೆ ತುಪ್ಪ ಸುರಿದ ಸಿದ್ದರಾಮಯ್ಯ
ಕಳೆದ ಎರಡು ದಿನಗಳಿಂದ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ದ ತೀವ್ರ ವಾಕ್ ಪ್ರಖಾರ ನಡೆಸುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈಗ, ಮತ್ತೆ ಹಿಜಾಬ್ ಮತ್ತು ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ವಿಧಾನ ಮಂಡಲದ ಅಧಿವೇಶನದಲ್ಲಿ ಗುರುವಾರ (ಮಾರ್ಚ್ 25) ಮೃತ ಪಟ್ಟ ಕುಟುಂಬಕ್ಕೆ ಸರಕಾದ ಕಡೆಯಿಂದ ನೀಡಲಾಗುವ ಪರಿಹಾರದ ವಿಚಾರದಲ್ಲೂ ಆಡಳಿತ ಪಕ್ಷದ ವಿರುದ್ದ ಘರ್ಜಿಸಿದ್ದ ಸಿದ್ದರಾಮಯ್ಯನವರು ಈಗ ಮತ್ತೆ ಹಿಜಾಬ್ ವಿಚಾರವನ್ನು ತೆಗೆದಿದ್ದಾರೆ.
ಗುರುವಾರದ ಅಧಿವೇಶನದಲ್ಲಿ ಸ್ಪೀಕರ್, 'ನಮ್ಮ ಆರ್‌ಎಸ್‌ಎಸ್' ಎಂದು ಹೇಳಿರುವ ವಿಚಾರದ ಬಗ್ಗೆಯೂ ಕಿಡಿಕಾರಿರುವ ಸಿದ್ದರಾಮಯ್ಯ, ಹಿಜಾಬ್ ಹಾಕಿಕೊಂಡರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ವ್ಯಾಪಾರದ ಜಾಗದಲ್ಲಿ ಧರ್ಮ ಸಂಘರ್ಷ ಸರಿಯಲ್ಲ ಎಂದು ಹೇಳಿದ್ದಾರೆ.
ಶಾಲಾ ಸಮವಸ್ತ್ರ ಸಂಘರ್ಷಕ್ಕೆ ಬೇರೆ ಬೇರೆ ರೂಪವನ್ನು ನೀಡುತ್ತಿರುವ ಸಿದ್ದರಾಮಯ್ಯ, ಸ್ವಾಮೀಜಿಗಳು ತಲೆಗೆ ಕೇಸರಿ ಶಾಲನ್ನು ಸುತ್ತಿಕೊಳ್ಳುವುದಿಲ್ಲವೇ ಎನ್ನುವ ಪ್ರಶ್ನೆಯನ್ನು ಕೇಳುವ ಮೂಲಕ, ಹಿಜಾಬ್ ವಿವಾದವನ್ನು ರಾಜಕಾರಣಿಗಳು ಜೀವಂತವಾಗಿ ಇಡಲು ಪ್ರಯತ್ನಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಎದುರಾಗುವಂತೆ ಮಾಡಿದ್ದಾರೆ.

ಮುಸ್ಲಿಂ ಹೆಣ್ಣುಮಕ್ಕಳು ಯೂನಿಫಾರಂ ಹಾಕಿಕೊಳ್ಳಲು ಸಿದ್ದರಿದ್ದಾರೆ, ಜೊತೆಗೆ ದುಪ್ಪಟ್ಟಾ
"ಮುಸ್ಲಿಂ ಹೆಣ್ಣುಮಕ್ಕಳು ಯೂನಿಫಾರಂ ಹಾಕಿಕೊಳ್ಳಲು ಸಿದ್ದರಿದ್ದಾರೆ, ಅದರೆ ಜೊತೆಗೆ ಒಂದು ದುಪ್ಪಟ್ಟಾ ಹಾಕಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಲ್ಲಿ ತಪ್ಪೇನಿದೆ? ಅವರು ತಲೆಯ ಮೇಲಾದಾರೂ ಹಾಕಿಕೊಳ್ಳಲಿ, ಹೆಗಲಮೇಲಾದರೂ ಹಾಕಿಕೊಳ್ಳಲಿ. ನಾನು ಹೆಗಲ ಮೇಲೆ ಶಾಲನ್ನು ಹಾಕಿಕೊಳ್ಳುತ್ತೇನೆ, ಜೈನ ಹೆಣ್ಣುಮಕ್ಕಳು ತಲೆಯ ಮೇಲೆ ಸೆರಗನ್ನು ಹಾಕಿಕೊಳ್ಳುವುದಿಲ್ಲವೇ"ಎಂದು ಸಿದ್ದರಾಮಯ್ಯನವರು ಹಿಜಾಬ್ ಹಾಕಿಕೊಳ್ಳುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಸ್ವಾಮೀಜಿಗಳು ತಲೆಯ ಮೇಲೆ ಕೇಸರಿ ಶಾಲನ್ನು ಹಾಕಿಕೊಳ್ಳುವುದಿಲ್ಲವಾ
"ಹಿಂದೂ ಹೆಣ್ಣು ಮಕ್ಕಳೂ ಸೆರಗನ್ನು ತಲೆಗೆ ಹಾಕಿಕೊಳ್ಳುವುದಿಲ್ಲವಾ, ಸ್ವಾಮೀಜಿಗಳು ತಲೆಯ ಮೇಲೆ ಕೇಸರಿ ಶಾಲನ್ನು ಹಾಕಿಕೊಳ್ಳುವುದಿಲ್ಲವಾ. ಹಾಕಿಕೊಳ್ಳಲಿ ಬಿಡಿ, ಸರಕಾರಕ್ಕೆ ಇದರಿಂದ ಆಗುವ ತೊಂದರೆಯಾದರೂ ಏನು? ಚುನಾವಣೆ ಇನ್ನೊಂದು ವರ್ಷದಲ್ಲಿ ಬರಲಿದೆ, ಅದಕ್ಕಾಗಿಯೇ ಬಿಜೆಪಿಯವರು ಹಿಜಾಬ್, ಧರ್ಮ ಸಂಘರ್ಷವನ್ನು ಆರಂಭಿಸಿದ್ದಾರೆ" ಎಂದು ಸಿದ್ದರಾಮಯ್ಯನವರು ಆಡಳಿತ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಅಭಿವೃದ್ದಿ ವಿಚಾರದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಏನೂ ಇಲ್ಲ
"ಅಭಿವೃದ್ದಿ ವಿಚಾರದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಏನೂ ಇಲ್ಲ, ಹಾಗಾಗಿ ಧಾರ್ಮಿಕ ಸೂಕ್ಷ್ಮ ವಿಚಾರವನ್ನು ಮುನ್ನಲೆಗೆ ತರುತ್ತಿದ್ದಾರೆ. ಬೆಲೆ ಏರಿಕೆ, ರಾಜ್ಯದ ಅಭಿವೃದ್ದಿ ನಿಂತು ಹೋಗಿದೆ. ಭ್ರಷ್ಟಾಚಾರ ಜಾಸ್ತಿಯಾಗುತ್ತಿದೆ, ರಾಜ್ಯಕ್ಕೆ ಬಂಡವಾಳ ಹರಿದು ಬರುತ್ತಿಲ್ಲ. ಹಾಗಾಗಿ, ಯಾವ ಆಧಾರದ ಮೇಲೆ ಅವರು ಮತವನ್ನು ಕೇಳುತ್ತಾರೆ. ಅದಕ್ಕಾಗಿಯೇ, ಇಂತಹ ವಿಚಾರಗಳನ್ನು ದೊಡ್ಡದು ಮಾಡುತ್ತಿದ್ದಾರೆ.

ಸಿದ್ದರಾಮಯ್ಯ ಸದನದಲ್ಲಿ ಸರಕಾರವನ್ನು ತರಾಟೆಗೆ
"ಶಾಲೆಯಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಇಷ್ಟು ದೊಡ್ಡದು ಮಾಡಿದ್ದು ಬಿಜೆಪಿಯೇ"ಎಂದು ಸಿದ್ದರಾಮಯ್ಯನವರು ಆರೋಪಿಸಿದ್ದಾರೆ. ಗುರುವಾರದ ಅಧಿವೇಶನದ ವೇಳೆ "ಹರ್ಷನ ಕುಟುಂಬಕ್ಕೆ 25ಲಕ್ಷ ಪರಿಹಾರವನ್ನು ಸರಕಾರ ಕೊಡುತ್ತದೆ. ಬೆಳ್ತಂಗಡಿಯಲ್ಲಿ ಕೊಲೆಯಾದ ವ್ಯಕ್ತಿಗೆ ಮಂಡಳಿಯಿಂದ ನಾಲ್ಕು ಲಕ್ಷ ಬರುತ್ತದೆ. ಯಾಕೆ ಈ ತಾರತಮ್ಯ, ಅದು ನಿಮ್ಮ ದುಡ್ಡಲ್ಲ, ಸರಕಾರದ ತೆರಿಗೆಯ ದುಡ್ಡು"ಎಂದು ಸಿದ್ದರಾಮಯ್ಯ ಸದನದಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.












Click it and Unblock the Notifications