ಅಕ್ರಮ ಹಣ ವರ್ಗಾವಣೆ ಪ್ರಕರಣ: ಕೇರಳದ ಸಿಪಿಎಂ ನಾಯಕನ ಪುತ್ರ ಬಿನೇಶ್ ಕೋಡಿಯೇರಿ ವಿರುದ್ದದ ತನಿಖೆಗೆ ಹೈಕೋರ್ಟ್ ತಡೆ
ಬೆಂಗಳೂರು, ಆಗಸ್ಟ್, 11: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ಕೇರಳದ ಸಿಪಿಎಂ ನಾಯಕ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೊಡಿಯೇರಿ ವಿರುದ್ಧದ ಜಾರಿ ನಿರ್ದೇಶನಾಲಯದ ತನಿಖೆಗೆ ಹೈಕೋರ್ಟ್ ಬ್ರೇಕ್ ಹಾಕಿದೆ.
ಇದರಿಂದಾಗಿ ಬಿನೇಶ್ ಕೋಡಿಯೇರಿ ಸದ್ಯಕ್ಕೆ ಸಂಕಷ್ಟದಿಂದ ಪಾರಾಗಿದ್ದಾರೆ. ಏಕೆಂದರೆ ಅವರ ವಿರುದ್ಧ ತನಿಖಾ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಬಿನೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ್‌ಗೌಡರ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ. ಆರೋಪ ನಿಗದಿ ಮಾಡುವ ಪ್ರಕ್ರಿಯೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಆಗಸ್ಟ್ 18ರಂದು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯವರೆಗೆ ತಡೆ ನೀಡಿ ಆದೇಶ ಹೊರಡಿಸಿದೆ.

ಅರ್ಜಿದಾರರ ಪರ ವಕೀಲರು ಎನ್‌ಡಿಪಿಸಿ ಕಾಯಿದೆ ಅಡಿ ಬಿನೇಶ್ ಅವರು ವಿಧೇಯ ಅಪರಾಧದ (ವಿಸ್ತೃತದ ಅಪರಾಧದ ಭಾಗ) ಆರೋಪಿಯಲ್ಲ. ಈಚೆಗೆ ವಿಜಯ್ ಮದನ್‌ಲಾಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಪ್ರಕರಣ ಮುಂದುವರಿಸಲಾಗದು ಎಂದ ವಾದ ಮಂಡಿಸಿದರು.
ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರು, ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಎಂಎಲ್‌ಯು) ಅಡಿ ವಿಧೇಯ ಅಪರಾಧದಲ್ಲಿ ಆರೋಪಿಯಾಗಿರುವವರನ್ನು ಮಾತ್ರವಲ್ಲದೆ ಅದಕ್ಕೆ ಸಾಥ್ ನೀಡಿದವರನ್ನು ಶಿಕ್ಷೆಗೆ ಗುರಿಪಡಿಸುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಪ್ರಕರಣದ ಹಿನ್ನೆಲೆ ಏನು?
ಮಾದಕ ವಸ್ತುಗಳು ಹಾಗೂ ಮತ್ತು ಬರಿಸುವ ಪದಾರ್ಥಗಳ (ಎನ್‌ಡಿಪಿಎಸ್) ಆರೋಪ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2020ರ ಅಕ್ಟೋಬರ್ 29ರಂದು ಬಿನೇಶ್ ಅವರನ್ನು ಬಂಧಿಸಲಾಗಿತ್ತು. 2021ರ ಅಕ್ಟೋಬರ್‌ನಲ್ಲಿ ಹೈಕೋರ್ಟ್ ಬಿನೇಶ್‌ಗೆ ಜಾಮೀನು ಮಂಜೂರು ಮಾಡಿತ್ತು. ತಮ್ಮ ವಿರುದ್ದದ ಇಡಿ ನಡೆಸುತ್ತಿದ್ದ ತನಿಖಾ ಪ್ರಕ್ರಿಯೆ ರದ್ದು ಕೋರಿ ಬಿನೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications