Satish Sail: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಬಿಗ್ ರಿಲೀಫ್, ಜೈಲಿಂದ ಬಿಡುಗಡೆ
ಬೆಂಗಳೂರು, ನವೆಂಬರ್ 13: ಬೇಲೇಕೇರಿ ಬಂದರು ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಸದ್ಯ ಜೈಲಿನಲ್ಲಿದ್ದಾರೆ. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಅದಿರು ನಾಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ವಿಧಿಸಿರುವ ಜೈಲು ಶಿಕ್ಷೆಯ ಆದೇಶವನ್ನು ಅಮಾನತಿನಲ್ಲಿಡಲು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಈ ಕುರಿತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಬುಧವಾರ ತೀರ್ಪು ನೀಡಿದ್ದಾರೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಾಸಕ ಸತೀಶ್ ಸೈಲ್‌ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಪೊಲೀಸರು ಅವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಜನಪ್ರತಿನಿಧಿಗಳ ಕೋರ್ಟ್ ಆದೇಶವನ್ನು ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು.
ಶಾಸಕ ಸತೀಶ್ ಸೈಲ್ ಮತ್ತು ಇತರ ಅಪರಾಧಿಗಳಿಗೆ ಕೋರ್ಟ್ 7 ವರ್ಷಗಳ ಜೈಲು ಶಿಕ್ಷೆ ಮತ್ತು 44 ಕೋಟಿ ರೂ. ದಂಡವನ್ನು ಹಾಕಿತ್ತು. ದಂಡ ಮೊತ್ತದ ಶೇ 25ರಷ್ಟನ್ನು ಕೋರ್ಟ್‌ನಲ್ಲಿ ಠೇವಣಿ ಇಡುವಂತೆ ಸೂಚನೆ ನೀಡಿರುವ ಹೈಕೋರ್ಟ್ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಆದೇಶಿಸಿದೆ.
ವಶಕ್ಕೆ ಪಡೆದುಕೊಂಡು ಬೇಲೆಕೇರಿ ಬಂದರಿನಲ್ಲಿ ಸಂಗ್ರಹ ಮಾಡಿದ್ದ 6.10 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ಎರಡು ತಿಂಗಳಿನಲ್ಲಿ ಸಾಗಣೆ ಮಾಡಿದ್ದ ಪ್ರಕರಣವಿದು. 2010ರ ಮಾರ್ಚ್20ರಂದು 8.82 ಲಕ್ಷ ಟನ್ ಅದಿರನ್ನು ಬೇಲೆಕೇರಿ ಬಂದರಿನಲ್ಲಿ ಸಂಗ್ರಹ ಮಾಡಲಾಗಿತ್ತು. 2010ರ ಜೂನ್ 2ರಂದು ಮರು ಪರಿಶೀಲನೆ ಮಾಡಿದಾಗ 2.72 ಲಕ್ಷ ಟನ್ ಅದಿರು ಮಾತ್ರ ಉಳಿದಿತ್ತು.
ಬಿಗಿ ಭದ್ರತೆಯಲ್ಲಿದ್ದ ಅದಿರನ್ನು ಕಳ್ಳ ಸಾಗಣೆ ಮಾಡಲಾಗಿದೆ ಎಂಬುದು ಆರೋಪವಾಗಿತ್ತು. ಈ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಾಸಕ ಸತೀಶ್ ಸೈಲ್ ಮತ್ತು ಇತರರು ಅಪರಾಧಿಗಳು ಎಂದು ಕೋರ್ಟ್ ತೀರ್ಪು ನೀಡಿತ್ತು. ಒಳಸಂಚು ರೂಪಿಸಿ, ಅಕ್ರಮವಾಗಿ ಅದಿರನ್ನು ವಿದೇಶಕ್ಕೆ ರಫ್ತು ಮಾಡುವ ಮೂಲಕ ರಾಜ್ಯ ಸರ್ಕಾರಕ್ಕೆ 200 ಕೋಟಿ ರೂ.ಗಳಿಗೂ ಅಧಿಕ ನಷ್ಟ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಈ ಪ್ರಕರಣದಲ್ಲಿ ನಿವೃತ್ತ ಬಂದರು ಅಧಿಕಾರಿ ಮಹೇಶ್ ಜೆ. ಬಿಳಿಯೆ, ಕಾರವಾರ ಶಾಸಕ ಮತ್ತು ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ. ವ್ಯಸ್ಥಾಪಕ ನಿರ್ದೇಶಕ ಸತೀಶ್ ಸೈಲ್, ಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್ ಮಾಲೀಕ ಖಾರಾದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲೀಕರಾದ ಕೆ. ವಿ. ನಾಗರಾಜ್ ಮತ್ತು ಕೆ. ವಿ. ಎನ್. ಗೋವಿಂದರಾಜ್, ಚೇತನ್ ಷಾ, ಪ್ರೇಮಚಂದ್ ಗರಗ್ ಅಪರಾಧಿಗಳು ಎಂದು ಕೋರ್ಟ್ ಆದೇಶಿಸಿತ್ತು.
2010ರಲ್ಲಿ ಬೇಲೇಕೇರಿ ಬಂದರು ಅದಿರು ನಾಪತ್ತೆ ಪ್ರಕರಣದ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡಲಾಗಿತ್ತು. 2014ರಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು.
ಸತೀಶ್ ಸೈಲ್ ಹಾಲಿ ಕಾರವಾರದ ಶಾಸಕ ಜನಪ್ರತಿನಿಧಿಗಳಿಗೆ ಯಾವುದೇ ಪ್ರಕರಣದಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆಯಾದರೆ ಆ ತೀರ್ಪಿಗೆ ಮೂರು ತಿಂಗಳಿನಲ್ಲಿ ತಡೆ ಸಿಗದಿದ್ದರೆ ಅವರ ಶಾಸಕ ಸ್ಥಾನ ಅನರ್ಹವಾಗುತ್ತದೆ. ಆದರೆ ಈಗ ಅನರ್ಹತೆ ಭೀತಿಯಿಂದ ಸತೀಶ್ ಸೈಲ್ ಪರಾಗಿದ್ದಾರೆ.












Click it and Unblock the Notifications