ರಸ್ತೆ ಗುಂಡಿ ಮುಚ್ಚುವ ವಿಚಾರ: ಮತ್ತೆ ಪಾಲಿಕೆಗೆ ಹೈಕೋರ್ಟ್ ತರಾಟೆ
ಬೆಂಗಳೂರು,ಮೇ 31. ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಸಮರ್ಪಕ ಕ್ರಮಗಳನ್ನು ಕೈಗೊಳ್ಳದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಮತ್ತೆ ಕಿಡಿಕಾರಿದ್ದು, ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಬೆಂಗಳೂರಿನ ರಸ್ತೆಗಳ ದುಸ್ಥಿತಿ ಬಗ್ಗೆ ಕೋರಮಂಗಲದ ವಿಜಯ್ ಮೆನನ್ ಸಲ್ಲಿಸಿದ್ದ ಪಿಐಎಲ್ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾ. ಅಶೋಕ್ ಕಿಣಗಿ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಪಾಲಿಕೆಯ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಪಾಲಿಕೆ ಪರ ವಕೀಲರ ಕೋರಿಕೆ ಮೇರೆಗೆ ವಿಚಾರಣೆಯನ್ನು ಜೂ.6ಕ್ಕೆ ಮುಂದೂಡಿತು.
ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಸಿಜೆ, ನ್ಯಾಯಾಲಯಗಳ ಆದೇಶ ಬಿಬಿಎಂಪಿ ಪಾಲಿಸುತ್ತಿಲ್ಲ ಏಕೆ? ಪಾಲಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ, ಮಳೆಗಾಲ ಶುರುವಾದರೂ ಇನ್ನೂ ರಸ್ತೆ ಗುಂಡಿ ದುರಸ್ತಿ ಮಾಡಿಲ್ಲ, ಪಾಲಿಕೆಯ ನೆಪಗಳನ್ನು ಒಪ್ಪಲಾಗದು. ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

"ನಿಮ್ಮ ಸಮಸ್ಯೆ ಏನಾದರೂ ಇರಬಹುದು. ಅದು ನಮಗೆ ಬೇಕಿಲ್ಲ. ರಸ್ತೆ ದುರಸ್ತಿಯಾಗಬೇಕಷ್ಟೆ. ನ್ಯಾಯಾಲಯದ ಆದೇಶಗಳನ್ನು ಬಿಬಿಎಂಪಿ ಪಾಲಿಸುತ್ತಿಲ್ಲ. ಜೂ.2ರಿಂದ ಮುಂಗಾರು ರಾಜ್ಯಕ್ಕೆ ಪ್ರವೇಶಿಸಲಿದೆ, ಪಾಲಿಕೆ ಸೂಕ್ತ ಪರಿಹಾರಗಳೊಂದಿಗೆ ಬರಬೇಕು. ತಪ್ಪಿದರೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗುವುದು" ಎಂದು ಖಡಕ್ ಆಗಿ ಹೇಳಿತು.
ಎಆರ್‌ಟಿಎಸ್ ಪರ ವಾದಿಸಿದ ಹಿರಿಯ ವಕೀಲರು, 182 ಕಿ.ಮೀ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಎಆರ್‌ಟಿಎಸ್ ಪೂರ್ಣಗೊಳಿಸಿದೆ. ಆದರೆ, ರಸ್ತೆ ಗುಂಡಿ ಮುಚ್ಚಲು ಪೈಥಾನ್ ಯಂತ್ರ ಬಳಸಿರುವುದಕ್ಕೆ ಪ್ರತಿ ಗಂಟೆಗೆ ಷ್ಟು ಹಣ ಪಾವತಿಸಲಾಗುತ್ತದೆ ಎಂಬುದನ್ನು ಬಿಬಿಎಂಪಿ ಇನ್ನೂ ನಿರ್ಧರಿಸಿಲ್ಲ. ರಸ್ತೆ ಗುಂಡಿ ಮುಚ್ಚಲು ಪೈಥಾನ್ ಯಂತ್ರ ಬಳಸುವುದಕ್ಕೆ ಲೋಕೋಪಯೋಗಿ ಇಲಾಖೆ ನಿಗದಿಪಡಿಸಿರುವ ಪ್ರತಿ ಗಂಟೆಗೆ 1,249 ರೂ. ನೀಡುವಂತೆ ಎಆರ್‌ಟಿಎಸ್ ಕೋರಿದೆ. ಬಿಬಿಎಂಪಿ ಆ ದರಕ್ಕಿಂತ ಕಡಿಮೆ ಹಣ ನೀಡಲು ಮುಂದಾಗಿದೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ವಕೀಲರು, ಎಲ್ಲಾ ಸಮಸ್ಯೆ ಬಗೆಹರಿಸಲಾಗುವುದು. ಪ್ರಕರಣ ಕುರಿತು ಹೈಕೋರ್ಟ್ ಈ ಹಿಂದೆ ನೀಡಿರುವ ನಿರ್ದೇಶನಗಳ ಅನುಪಾಲನಾ ವರದಿ ಸಲ್ಲಿಸಲು ಎರಡು ದಿನ ಕಾಲಾವಕಾಶ ನೀಡಬೇಕು ಎಂದರು.
ಗುದ್ದಾಟ:
ಅಲ್ಲದೆ, ರಸ್ತೆ ಗುಂಡಿ ಮುಚ್ಚಲು ಪ್ರತಿ ಕಿಲೋಮೀಟರ್ ಗೆ ದರ ನಿಗದಿ ಸಂಬಂಧ ಸಮಾಲೋಚಿಸಲು ಮೇ 27ರಂದು ಕರೆದಿದ್ದ ಸಭೆಯಲ್ಲಿ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್, ಎಆರ್‌ಟಿಎಸ್ ಕಂಪನಿಯ ಓರ್ವ ನಿರ್ದೇಶಕರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪ್ರಹ್ಲಾದ್ ವಿರುದ್ಧ ಲಿಖಿತ ದೂರು ನೀಡಲಾಗಿದೆ ಎಂದು ನ್ಯಾಯವಾದಿ ನ್ಯಾಯಪೀಠಕ್ಕೆ ವಿವರಿಸಿದರು.
ಅದನ್ನು ಗಂಭೀರವಾಗಿ ಪರಗಣಿಸಿದ ಹೈಕೋರ್ಟ್, ಬಿ.ಎಸ್. ಪ್ರಹ್ಲಾದ್ ವಿರುದ್ಧದ ದೂರಿನ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತರು ಕೈಗೊಂಡಿರುವ ಕ್ರಮಗಳ ಕುರಿತು ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸಬೇಕು ಎಂದೂ ಬಿಬಿಎಂಪಿಗೆ ನಿರ್ದೇಶನ ನೀಡಿತು.
ಚೀಫ್ ಕಮೀಷನರ್ ಗೆ ಆದೇಶ:
ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಬಳಸಲಾಗುತ್ತಿರುವ ಪೈಥಾನ್ ಯಂತ್ರಕ್ಕೆ ಪ್ರತಿ ಗಂಟೆಗೆ ಎಷ್ಟು ಹಣ ಪಾವತಿಸಲಾಗುತ್ತದೆ ಎಂಬ ಬಗ್ಗೆ ವೈಯಕ್ತಿಕವಾಗಿ ಪರಿಶೀಲನೆ ನಡೆಸಿ ಜೂ.6ರಂದು ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ಗೆ ನಿರ್ದೇಶನ ನೀಡಿತು.
ಬಿಬಿಎಂಪಿ ಪರ ವಾದಿಸಿದ ವಕೀಲರು, ಬಿಬಿಎಂಪಿ ಮುಖ್ಯ ಆಯುಕ್ತರು ಪೈಥಾನ್ ಯಂತ್ರಕ್ಕೆ ಪ್ರತಿ ಗಂಟೆಗೆ ಎಷ್ಟು ಹಣ ಪಾವತಿಸಲಾಗುತ್ತದೆ ಎಂಬ ಬಗ್ಗೆ ವೈಯಕ್ತಿಕವಾಗಿ ಪರಿಶೀಲನೆ ನಡೆಸಿ ನಿ'ರಿಸಲು ಉದ್ದೇಶಿಸಿದ್ದಾರೆ. ಅಲ್ಲದೆ, ಫೈಥಾನ್ ಯಂತ್ರ ಬಳಸಿ ಗುಂಡಿ ಮುಚ್ಚುವ ಕಾರ್ಯದ ಗುತ್ತಿಗೆ ಪಡೆದಿರುವ ಅಮೆರಿಕ್ ರೋಡ್ ಟೆಕ್ನಾಲಜೀಸ್ ಸಲ್ಯೂಷನ್ಸ್‌ಗೆ (ಎಆರ್‌ಟಿಸಿ) ಬಾಕಿ ಹಣ ಪಾವತಿಸುವುದಕ್ಕೂ ಕ್ರಮ ಕೈಗೊಳ್ಳಲಾಗುವುದು. ಅದಕ್ಕೆ ಕಾಲಾವಕಾಶ ನೀಡಬೇಕೆಂದು ಕೋರಿದರು. ಆ ಮನವಿ ಒಪ್ಪಿ ಜೂನ್ 6ಕ್ಕೆ ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಪೀಠ, ಅಂದು ವರದಿ ಸಲ್ಲಿಸಬೇಕು ಎಂದು ಪಾಲಿಕೆಯ ಮುಖ್ಯ ಆಯುಕ್ತರಿಗೆ ಸೂಚಿಸಿತು.












Click it and Unblock the Notifications