Hemavathi Dam: ಇಂದು 10,000 ಕ್ಯೂಸೆಕ್ ದಾಟಿದ ಜಲಾಶಯದ ಒಳಹರಿವು, ನೀರಿನ ಸಂಗ್ರಹ ಮಟ್ಟ?
ಬೆಂಗಳೂರು, ಜುಲೈ 02: ಹಾಸನ ಜಿಲ್ಲೆ ಸೇರಿದಂತೆ ವಿವಿಧೆಡೆ ಅತ್ಯುತ್ತಮ ಮಳೆ ಸುರಿಯುತ್ತಿರುವ ಪರಿಣಾಮ ಹೇಮಾವತಿ ನದಿಯಲ್ಲಿ ನೀರಿನ ಸಂಗ್ರಹ ಅಧಿಕವಾಗಿದೆ. ಮೂಡಿಗೆರೆ, ಸಕಲೇಶಪುರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ವ್ಯಾಪಕ ಮಳೆ ಮುಂದುವರಿದ ಪರಿಣಾಮ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮೊದಲ ಭಾರಿಗೆ ಹೇಮಾವತಿ ಜಲಾಶಯದ ಒಳಹರಿವು 10,000 ಕ್ಯೂಸೆಕ್ ದಾಟಿದೆ.
ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ. ಕಳೆದ ಎರಡು ಮೂರು ವಾರಗಳಿಂದ ಸಕಲೇಶಪುರ, ಹಾಸನ, ಮೂಡಿಗೆರೆ ಹಾಗೂ ಅರಣ್ಯ ಪ್ರದೇಶಗಳನ್ನು ಒಳಗೊಂಡಂತೆ ಹೆಮಾವತಿ ನದಿ ಸುತ್ತಮುತ್ತ, ಜಲಾಶಯದ ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ.

ಈ ಕಾರಣದಿಂದ ಹಾಸನ ಜಿಲ್ಲೆಯ ಗೋರೂರು ಬಳಿ ನಿರ್ಮಿಸಲಾಗಿರುವ ಹೇಮಾವತಿ ಆಣೆಕಟ್ಟಿನಲ್ಲಿ ಈ ವರ್ಷ ಮೊದಲ ಬಾರಿಗೆ ಒಳಹರಿವು ಜುಲೈ 02 ರಂದು 10,137 ಕ್ಯೂಸೆಕ್ ನಷ್ಟು ಹೆಚ್ಚಾಗಿದೆ. ಒಟ್ಟು 37.10 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಹೇಮಾವತಿ ಆಣೆಕಟ್ಟಿನಲ್ಲಿ ಸದ್ಯ 10.270 ಟಿಎಂಸಿ ಯಷ್ಟು ನೀರು ಸಂಗ್ರಹವಾಗಿದೆ.
ಜಲಾಶಯದ ಹೊರ ಹರಿವಿನ ಮಾಹಿತಿ
ನದಿ ಸೇರಿದಂತೆ ಇನ್ನಿತರ ಮೂಲಗಳಿಗೆ ಒಟ್ಟು 250 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಡ್ಯಾಂನಲ್ಲಿ ಒಟ್ಟು ಈವರೆಗೆ ಶೇಕಡಾ 39.46ರಷ್ಟು ಹೆಚ್ಚಾಗಿದೆ. ಹೇಮಾವತಿ ನದಿ ಸುತ್ತಮುತ್ತಲಿನ ಸಾವಿರಾರು ಚದರ ಕಿಲೋ ಮೀಟರ್ ಜಲಾನಯನ ಪ್ರದೇಶಗಳಿಗೆ ನೀರಾವರಿ, ಕುಡಿಯಲು ಈ ನದಿ ನೀರು ಆಸರೆಯಾಗಿದೆ. ಮಳೆ ಸದ್ಯಕ್ಕೆ ಕಡಿಮೆ ಆಗುವ ಲಕ್ಷಣಗಳು ಇಲ್ಲ. ಮುಂದಿನ ದಿನಗಳಲ್ಲಿ ಜಲಾಶಯದ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕಬಿನಿ ಆಣೆಕಟ್ಟಿನ ಇಂದಿನ ಮಟ್ಟ
ಕಬಿನಿ ಅಣೆಕಟ್ಟಿನ ಇಂದಿನ ಪ್ರಮಾಣ ನೋಡುವುದಾದರೆ, ಈ ಜಲಾಶಯದ 19.52 ಟಿಎಂಸಿ ಒಟ್ಟು ಸಾಮರ್ಥ್ಯದಲ್ಲಿ ಶೇಕಡಾ 82.94 ರಷ್ಟು ಸಂಗ್ರಹವಾಗಿದೆ. ಸದ್ಯ ಇಂದಿಗೆ ಒಳಹರಿವು 11,269 ಕ್ಯೂಸೆಕ್ ಇದ್ದು, ಹೊರ ಹರಿವು 1542 ಕ್ಯೂಸೆಕ್ ನಷ್ಟಿದೆ ಎಂದು ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಕಪಿಲಾ ನದಿ, ಕಬಿನಿ ಆಣೆಕಟ್ಟು ಜಲಾನಯನ ಪ್ರದೇಶಗಳ ವ್ಯಾಪ್ತಿಯಲ್ಲಿ ನೆನ್ನೆ ಅಂದರೆ ಕಳೆದ 24 ಗಂಟೆಗಳಲ್ಲಿ 25ಮಿಲಿ ಮೀಟರ್ ಮಳೆ ಆಗಿದೆ. ಕೇರಳ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ಅತ್ಯಧಿಕ ಮಳೆ ಆಗುತ್ತಿದೆ. ಕರ್ನಾಟಕ, ಕೇರಳದಲ್ಲಿ ವಿವಿಧಡೆ ಮುಂಗಾರು ಮಳೆ ಸಕ್ರಿಯವಾಗಿದೆ. ಇದರಿಂದಾಗಿ ವಿವಿಧ ಜಲಾಶಯಗಳು ತುಂಬಿವೆ.
ಮುಂದಿನ ಜುಲೈ 09ರವರೆಗೆ ರಾಜ್ಯದಲ್ಲಿ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ. ಸಾಧಾರಣದಿಂದ ಭಾರೀ, ಅತೀ ಭಾರಿ ಮಳೆ ಆಗಲಿದೆ. ಕೆಲವು ಪ್ರದೇಶಗಳಲ್ಲಿ ಹಗುರ ಮಳೆ ಆಗುವ ಸಾಧ್ಯತೆ ಇವೆ ಎಂದು ತಿಳಿಸಲಾಗಿದೆ.












Click it and Unblock the Notifications