ಉಪ ಚುನಾವಣೆ ಫಲಿತಾಂಶ : ಯಾರು, ಏನು ಹೇಳಿದರು?

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 16 : ತೀವ್ರ ಕುತೂಹಲ ಕೆರಳಿಸಿದ್ದ ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಮುಖಭಂಗವಾಗಿದ್ದು, ಕೇವಲ ಒಂದು ಸ್ಥಾನದಲ್ಲಿ ಮಾತ್ರ ಜಯಗಳಿಸಲು ಸಾಧ್ಯವಾಗಿದೆ.

ಹೆಬ್ಬಾಳದಲ್ಲಿ ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ ಅವರು ಜಯಗಳಿಸಿದ್ದರೆ, ದೇವದುರ್ಗದಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಕಾಂಗ್ರೆಸ್ ಅಭ್ಯರ್ಥಿಗೆ ಸೋಲುಣಿಸಿದ್ದಾರೆ. ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಹೀಂಖಾನ್ ಅವರು ಜಯಗಳಿಸಿ ಪಕ್ಷಕ್ಕೆ ಆಗುವ ಮುಖಭಂಗ ತಪ್ಪಿಸಿದ್ದಾರೆ. [ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ]

ಮೂರು ಕ್ಷೇತ್ರಗಳ ಪೈಕಿ ಭಾರೀ ಕುತೂಹಲ ಹುಟ್ಟು ಹಾಕಿದ್ದ ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲು ಉಂಟಾಗಿದೆ. ಟಿಕೆಟ್ ಹಂಚಿಕೆ ಗೊಂದಲ ಚುನಾವಣೆಯ ಮೇಲೆ ಪರಿಣಾಮ ಬೀರಿದ್ದು, ಸಿ.ಕೆ.ಅಬ್ದುಲ್ ರೆಹಮಾನ್ ಷರೀಫ್ ಅವರು ಸೋಲು ಅನುಭವಿಸಿದ್ದಾರೆ.[ಸಿದ್ದರಾಮಯ್ಯ ಸರ್ಕಾರಕ್ಕೆ ತೀವ್ರ ಮುಖಭಂಗ, ಟೈಂ ಸರಿ ಇಲ್ಲ ಕಂಡ್ರಿ!]

ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಪ್ರತಿಪಕ್ಷ ಬಿಜೆಪಿ ಹೇಳಿದೆ. ಜಿಲ್ಲಾ ಮತ್ತು ತಾಲೂಕು ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಜಯಗಳಿಸಲಿದೆ ಎಂದು ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಫಲಿತಾಂಶದ ಬಗ್ಗೆ ಯಾರು ಏನು ಹೇಳಿದರು ಚಿತ್ರಗಳಲ್ಲಿ ನೋಡಿ.....

ಹೆಬ್ಬಾಳದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು

ಹೆಬ್ಬಾಳದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು

ಉಪ ಚುನಾವಣೆ ಫಲಿತಾಂಶದ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಹೆಬ್ಬಾಳದಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ದೇವದುರ್ಗ ಕ್ಷೇತ್ರದ ಬಗ್ಗೆ ನಿರೀಕ್ಷೆ ಇರಲಿಲ್ಲ. ಜನರು ಕೊಟ್ಟ ತೀರ್ಪನ್ನು ಸ್ವೀಕರಿಸುತ್ತೇವೆ' ಎಂದು ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ ಆಡಳಿತದ ಅಳತೆಗೋಲು

ಕಾಂಗ್ರೆಸ್ ಆಡಳಿತದ ಅಳತೆಗೋಲು

ಕೇಂದ್ರ ಕಾನೂನು ಸಚಿವ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರು ಬಿಜೆಪಿಗೆ ಬೆಂಬಲ ನೀಡಿದ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 'ಕಾಂಗ್ರೆಸ್ ಪಕ್ಷದ ಅಕ್ರಮ ಚಟುವಟಿಕೆ ನಡುವೆಯೂ ಬಿಜೆಪಿಗೆ ಜನರು ಬೆಂಬಲ ನೀಡಿದ್ದಾರೆ. ಸರ್ಕಾರದ ಆಡಳಿತ ಹೇಗಿದೆ ಎಂಬುದಕ್ಕೆ ಇದು ಅಳತೆಗೋಲು. ಸರ್ಕಾರ ಬಂದು ಎರಡೂವರೆ ವರ್ಷಗಳು ಕಳೆದ ಬಳಿಕ ಉಪ ಚುನಾವಣೆ ನಡೆದರೆ ಆಡಳಿತ ಪಕ್ಷ ಗೆಲವು ಸಾಧಿಸಬೇಕು. ಆದರೆ, ಈ ಫಲಿತಾಂಶ ಕಾಂಗ್ರಸ್ ಪಕ್ಷಕ್ಕೆ ಮುಖಭಂಗ ತಂದಿದೆ' ಎಂದು ಕುಟುಕಿದ್ದಾರೆ.

ಸರ್ಕಾರದ ವಿರುದ್ಧ ಜನರ ಆಕ್ರೋಶ

ಸರ್ಕಾರದ ವಿರುದ್ಧ ಜನರ ಆಕ್ರೋಶ

ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, 'ಬೀದರ್ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲದಿಂದಾಗಿ ಬಿಜೆಪಿಗೆ ಸೋಲುಂಟಾಯಿತು' ಎಂದು ಹೇಳಿದ್ದಾರೆ. 'ಕರ್ನಾಟಕದ ಜನರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಆದ್ದರಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲು ಉಂಟಾಗಿದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿಗಳು ಸಾಕಷ್ಟು ಪ್ರಯತ್ನ ಮಾಡಿದ್ದಾರೆ

ಮುಖ್ಯಮಂತ್ರಿಗಳು ಸಾಕಷ್ಟು ಪ್ರಯತ್ನ ಮಾಡಿದ್ದಾರೆ

ಹೆಬ್ಬಾಳ ಕ್ಷೇತ್ರದಲ್ಲಿ ಮೊಮ್ಮಗ ಸಿ.ಕೆ.ಅಬ್ದುಲ್ ರೆಹಮಾನ್ ಷರೀಫ್ ಅವರು ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ಕಾಂಗ್ರೆಸ್ ನಾಯಕ ಸಿ.ಕೆ.ಜಾಫರ್ ಷರೀಫ್ ಅವರು, ' ಅವನಿಗೆ ಇನ್ನೂ ಚಿಕ್ಕವಯಸ್ಸು. ಚುನಾವಣೆಯಲ್ಲಿ ಹಿನ್ನಡೆ ಏಕೆ ಆಯಿತು ಎಂಬುದಕ್ಕೆ ಕಾರಣ ತಿಳಿದಿಲ್ಲ. ಈ ಬಗ್ಗೆ ಪರಾಮರ್ಶೆ ನಡೆಸಿ ತಿದ್ದಿಕೊಳ್ಳುತ್ತೇವೆ. ನಾವು ಜಾತಿ, ಮತಗಳ ಆಧಾರದ ಮೇಲೆ ಚುನಾವಣೆ ಎದುರಿಸಿಲ್ಲ' ಎಂದು ಸ್ಪಷ್ಟನೆ ನೀಡಿದರು.'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಬ್ಬಾಳದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ' ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ

ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ

'ಮೂರು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯ ಗಂಟೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. 'ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಹೈಕಮಾಂಡ್ ಪರಿಶೀಲಿಸಲಿ' ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.

ಒಳಜಗಳ ಅನುಕೂಲವಾಗಿದೆ

ಒಳಜಗಳ ಅನುಕೂಲವಾಗಿದೆ

'ಕಾಂಗ್ರೆಸ್ ಪಕ್ಷದಲ್ಲಿನ ಒಳ ಜಗಳ ನಮಗೆ ಅನುಕೂಲವಾಯಿತು. ಚುನಾವಣೆಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೆವು. ಫಲಿತಾಂಶ ನಿರೀಕ್ಷಿತವಾಗಿತ್ತು' ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. 'ಚುನಾವಣಾ ಫಲಿತಾಂಶ ಆಡಳಿತ ಪಕ್ಷದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ' ಎಂದು ಅಶೋಕ್ ತಿಳಿಸಿದ್ದಾರೆ.

ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ

ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ

ಉಪ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು, 'ಮತದಾನ ಪ್ರಮಾಣ ಹೆಚ್ಚಾಗಿದ್ದರೆ ಚಿತ್ರಣ ಬದಲಾಗುತ್ತಿತ್ತು. ಉಪ ಚುನಾವಣೆಯಲ್ಲಿ ದೇವದುರ್ಗ ಕ್ಷೇತ್ರವನ್ನು ನಾವು ಗೆಲ್ಲಬೇಕಿತ್ತು. ಅದನ್ನು ಕಳೆದುಕೊಂಡು ಬೀದರ್‌ನಲ್ಲಿ ಜಯಗಳಿಸಿದ್ದೇವೆ. ಮುಂಬರುವ ಚುನಾವಣೆಗೆ ಇದು ಎಚ್ಚರಿಕೆಯ ಗಂಟೆ. ನಾವು ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ' ಎಂದು ಪರಮೇಶ್ವರ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Hebbal, Bidar, Devadurga by-elections results announced on Tuesday, February 16. Who said what about by election results.
Please Wait while comments are loading...