ಹುಬ್ಬಳ್ಳಿ ಬಿಜೆಪಿ ಕಚೇರಿಗೆ ಭಾರೀ ಭದ್ರತೆ, ಜಗದೀಶ್ ಶೆಟ್ಟರ್‌ಗೆ ಟಿಕೆಟ್ ತಪ್ಪುವುದು ನಿಶ್ಚಿತವೇ?
ಹುಬ್ಬಳ್ಳಿ, ಏಪ್ರಿಲ್ 13: ಕರ್ನಾಟಕ ವಿಧಾನಸಭಾ ಚುನಾವಣೆಗೆ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿರುವ ಹಿನ್ನೆಲೆ ಹಲವಾರು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ. ಹೀಗಾಗಿ ಕರ್ನಾಟಕದಲ್ಲಿ ಟಿಕೆಟ್ ಆಕಾಂಕ್ಷಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಬಿಜೆಪಿ ಕಚೇರಿಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ ಮರುದಿನವೇ ಪ್ರತಿಭಟನೆಗಳು ನಡೆಯುತ್ತಿವೆ.ಇದಲ್ಲದೆ ರಾಜ್ಯದಾದ್ಯಂತ ಟಿಕೆಟ್ ಕಳೆದುಕೊಂಡ ಅಭ್ಯರ್ಥಿಗಳು ರಾಜೀನಾಮೆ, ಪಕ್ಷಾಂತರ ಹಾಗೂ ಆಕ್ರೋಶ ಸೇರಿದಂತೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ಮುಖಂಡ ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಿರಲಿಲ್ಲ. ಹೀಗಾಗಿ ಅವರ ಅನುಯಾಯಿಗಳು ಕೇಶ್ವಾಪುರದ ಸರ್ವೋದಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬುಧವಾರ ರಾತ್ರಿ ಎರಡನೇ ಪಟ್ಟಿ ಬಿಡುಗಡೆ ಮಾಡರುವ ಬಿಜೆಪಿ ಈ ಪಟ್ಟಿಯಲ್ಲೂ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ನೀಡಿಲ್ಲ. ಈ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಪಕ್ಷ ಘೋಷಿಸಿಲ್ಲ.
ಈ ಮುನ್ನ ಬುಧವಾರವೇ ಜಗದೀಶ್ ಶೆಟ್ಟರ್ ಅವರು ದೆಹಲಿಗೆ ಭೇಟಿ ನೀಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದು ಟಿಕೆಟ್ ಸಿಗುವ ಆಶಾಭಾವನೆ ಹೊಂದಿದ್ದಾರೆ. ನಾನು 30 ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ಅಲ್ಲದೆ ಇನ್ನು 10 ವರ್ಷ ರಾಜಕೀಯ ಮಾಡುವ ಇಚ್ಚೆ ಹೊಂದಿದ್ದೇನೆ, ಪಕ್ಷದ ನಿರ್ಧಾರದಿಂದ ಬೇಸರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಬಿಜೆಪಿಯ ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಶೆಟ್ಟರ್ ಖಂಡಿತವಾಗಿಯೂ ಟಿಕೆಟ್ ಪಡೆಯಲಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಈ ಹಿಂದೆ ಎಎನ್‌ಐಗೆ ತಿಳಿಸಿದ್ದರು. ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ವಂಚಿತರಾದ ಚಂದ್ರಶೇಖರ ಗೋಕಾಕ ಅವರ ಅನುಯಾಯಿಗಳು ಸಹ ಪ್ರತಿಭಟನೆ ನಡೆಸಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕ್ಷತ್ರಿಯ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಇನ್ನೂ ಹಲವರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮುಂಬರುವ ಚುನಾವಣೆಗೆ ಟಿಕೆಟ್ ಹಂಚಿಕೆ ಕುರಿತು ಪಕ್ಷದಲ್ಲಿ ಭಾರೀ ಕೋಲಾಹಲ ಎದ್ದಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಪಕ್ಷವು ಪಟ್ಟಿಯನ್ನು ಪ್ರಕಟಿಸುವ ಗಂಟೆಗಳ ಮೊದಲು ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರು ಚುನಾವಣಾ ರಾಜಕೀಯ ತ್ಯಜಿಸುವ ನಿರ್ಧಾರವನ್ನು ಮಂಗಳವಾರ ಪ್ರಕಟಿಸಿದ್ದರು. ಇದರಿಂದ ಸಹಜವಾಗಿಯೇ ಆಕ್ರೋಶ ಭುಗಿಲೆದ್ದಿತ್ತು, ಈಗ ಈಶ್ವರಪ್ಪ ಅವರ ಮಗನಿಗೆ ಕಾರ್ಯಕರ್ತರು ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕೂಡ ಬಿಜೆಪಿಯ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯದ ಹಿನ್ನೆಲೆಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬುಧವಾರ ಬೆಳಗ್ಗೆ ಸವದಿ ಪಕ್ಷ ತೊರೆದಿದ್ದಾರೆ. ಅಲ್ಲದೆ ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಲ್ ಕೂಡ ಪಕ್ಷದಿಂದ ನಿರ್ಗಮಿಸುವುದಾಗಿ ಘೋಷಿಸಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಹಿರಿಯ ನಾಯಕ ಹಾಗೂ ಕರ್ನಾಟಕ ಮೀನುಗಾರಿಕಾ ಸಚಿವ ಎಸ್ ಅಂಗಾರ ಅವರು ಟಿಕೆಟ್ ನಿರಾಕರಿಸಿದ ನಂತರ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಎಂಎಲ್‌ಸಿಯಾಗಿದ್ದ ಆರ್ ಶಂಕರ್ ಕೂಡ ಬಿಜೆಪಿಯ ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಂಗಳವಾರ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಪಟ್ಟಿಯಲ್ಲಿ 52 ಹೊಸ ಮುಖಗಳು ಮತ್ತು 8 ಮಹಿಳೆಯರು ಸೇರಿದ್ದಾರೆ.
2018 ರ ಚುನಾವಣೆಯಲ್ಲಿ, ಬಿಜೆಪಿ 104 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಏಕೈಕ ಪಕ್ಷವಾಗಿ ಹೊರಹೊಮ್ಮಿತು, ಆದರೆ ಕಾಂಗ್ರೆಸ್ ಮತ್ತು ನಂತರ ಮಿತ್ರ ಪಕ್ಷ ಜೆಡಿಎಸ್ (ಎಸ್) ಕ್ರಮವಾಗಿ 80 ಮತ್ತು 37 ಸ್ಥಾನಗಳನ್ನು ಗಳಿಸಿತ್ತು. ಪ್ರಸ್ತುತ ಕರ್ನಾಟಕ ವಿಧಾನಸಭೆಯ ಅವಧಿ ಮೇ 24ಕ್ಕೆ ಕೊನೆಗೊಳ್ಳಲಿದ್ದು, ಮೇ 13ರಂದು ವಿಧಾನಸಭೆಯ ಮತ ಎಣಿಕೆ ನಡೆಯಲಿದೆ.












Click it and Unblock the Notifications