Heavy Rain: ಒಂದೇ ಮಳೆಗೆ ಭರ್ತಿಯಾದ ಕೆರೆ; ತಹಶೀಲ್ದಾರ್ ಕಚೇರಿಗೆ ನುಗ್ಗಿದ ನೀರು
ಶುಕ್ರವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಸಾಕಷ್ಟು ಅವಾಂತರ ಉಂಟಾಗಿದೆ. ಹಲವು ಕಡೆ ರಸ್ತೆಗಳು ಮುಳುಗಡೆಯಾಗಿದ್ದು, ಮನೆ, ಕಚೇರಿಗಳಿಗೆ ನೀರು ನುಗ್ಗಿದೆ.
ಹಾಸನ ಜಿಲ್ಲೆಯ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಎಷ್ಟು ಬಿಸಿಲಿನಿಂದ ಕಂಗೆಟ್ಟಿದ್ದರೋ ಅದಕ್ಕೆ ಪರಿಹಾರ ಎನ್ನುವಂತೆ ಮುಂಗಾರು ಆರಂಭಕ್ಕೆ ಮುನ್ನವೇ ಭರ್ಜರಿ ಮಳೆಯಾಗಿದೆ.

ಚನ್ನರಾಯಪಟ್ಟಣದಲ್ಲಿ ಸತತ ಒಂದು ಗಂಟೆವರೆಗೂ ಮಳೆ ಸುರಿದ ಪರಿಣಾಮ ರಸ್ತೆಗಳು ಜಲಾವೃತವಾದವು. ಚರಂಡಿಗಳ ನೀರು ರಸ್ತೆಗೆ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ಕೆಲ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ವ್ಯಾಪಾರಸ್ಥರು ಕೂಡ ಪರದಾಡಿದರು.
ಹೊಳೆನರಸೀಪುರ ತಾಲ್ಲೂಕಿನ ವಿವಿಧೆಡೆಯೂ ಭಾರೀ ಮಳೆಯಾಗಿದ್ದು, ಬಿರುಗಾಳಿ ಸಹಿತ ಮಳೆಗೆ ತಹಶಿಲ್ದಾರ್ ಕಚೇರಿಗೆ ಮಳೆ ನೀರು ನುಗ್ಗಿತ್ತು. ಕಚೇರಿಯ ರೆಕಾರ್ಡ್ ರೂಂಗೆ ನುಗ್ಗಿದ ಪರಿಣಾಮ ನೀರು ಹೊರ ಹಾಕಲು ಸಿಬ್ಬಂದಿ ಪರದಾಡಿದರು.
ಒಂದೇ ಮಳೆಗೆ ತುಂಬಿದ ಕೆರೆ
ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಜಿಲ್ಲೆಯ ಹಲವೆಡೆ ಭಾರಿ ಮಳೆಗೆ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಭಾಗದಲ್ಲಿ ಭಾರಿ ಮಳೆ ಸುರಿದಿದ್ದು ಒಂದೇ ಮಳೆಗೆ ಕೆರೆ ಭರ್ತಿಯಾಗಿದೆ.
ಕಳಸಾಪುರ ಗ್ರಾಮದ ತಿಮ್ಮಪ್ಪಯ್ಯನಕೆರೆ ಒಂದೇ ಮಳೆಗೆ ಭರ್ತಿಯಾಗಿದ್ದು ರೈತರಲ್ಲಿ ಸಂಭ್ರಮ ಮನೆ ಮಾಡುವಂತೆ ಮಾಡಿದೆ. ಹಳ್ಳದ ನೀರು ರಸ್ತೆ ಮೇಲೆ ಉಕ್ಕಿ ಹರಿಯುತ್ತಿದ್ದು, ರೈತರು ಕೆರೆ ಬಳಿ ಬಂದು ನೀರು ನೋಡಿ ಸಂತಸಗೊಂಡರು.
ಲಕ್ಯಾ ಗ್ರಾಮದಲ್ಲೂ ಭಾರಿ ಮಳೆಯಾಗಿದೆ. ಲಕ್ಯಾ ಗ್ರಾಮದ ಹಳ್ಳ ನದಿಯಂತೆ ಉಕ್ಕಿ ಹರಿಯುತ್ತಿದೆ. ಉತ್ತಮ ಮಳೆ ಕಂಡು ರೈತರಲ್ಲಿ ಸಂತಸ ಮನೆ ಮಾಡಿದೆ. ನಗರದಲ್ಲಿ ಬಿರುಗಾಳಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಗಾಳಿ ಹಳ್ಳಿ, ತಿಮ್ಮನಹಳ್ಳಿ, ಬುಗುಡಿ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ಮಳೆಯಿಂದಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸಂಚಾರ ಸ್ಥಗಿತವಾಗಿದ್ದು, ಕತ್ತಲಲ್ಲೇ ಸಮಯ ಕಳೆಯುವಂತಾಯಿತು.
ಇನ್ನೂ ಒಂದು ವಾರ ಭಾರಿ ಮಳೆ
ಮುಂಗಾರು ಆರಂಭಕ್ಕೆ ಇನ್ನೂ 20 ದಿನ ಬಾಕಿ ಇದೆ, ಈಗಾಗಲೇ ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಕೆರೆ, ಕಟ್ಟೆ, ನದಿಗಳು ಜೀವ ಪಡೆದುಕೊಳ್ಳುತ್ತಿವೆ. ಕಳೆದ ಬಾರಿ ಮುಂಗಾರು ಕೈಕೊಟ್ಟ ಪರಿಣಾಮ ರಾಜ್ಯದ ಬಹುತೇಕ, ಕೆರೆ ಕಟ್ಟೆ, ಜಲಾಶಯಗಳು ಒಣಗಿವೆ, ಈ ಬಾರಿ ಅವಧಿಗೂ ಮುನ್ನವೇ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿರುವುದು ಶುಭ ಸೂಚನೆಯಾಗಿದೆ. ವಾಡಿಕೆಗಿಂತ ಈ ಬಾರಿ ರಾಜ್ಯದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications