ನವೆಂಬರ್ 1ರ ತನಕ ಹಿಂಗಾರು ಮಳೆ ಅಬ್ಬರ
ಬೆಂಗಳೂರು, ಅ.20: ನೈಋತ್ಯ ಮುಂಗಾರು ಅವಧಿ ಮುಗಿದಿದ್ದು, ಈಶಾನ್ಯ ಹಿಂಗಾರು ಮಳೆ ಒಂದೆರಡು ದಿನಗಳಲ್ಲಿ ಆರಂಭವಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.
ನಿನ್ನೆಯಿಂದ ರಾಜ್ಯದ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಉತ್ತಮ ಮಳೆ ಪ್ರಾರಂಭವಾಗಿದೆ. ಈಶಾನ್ಯ ಮಾರುತಗಳು ಪ್ರಾರಂಭವಾಗಿದ್ದು, ಇಂದು ಅಥವಾ ನಾಳೆ ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆಗಳಿವೆ. ಹವಾಮಾನದಲ್ಲೂ ಬದಲಾವಣೆಗಳಾಗುತ್ತಿದ್ದು, ನವೆಂಬರ್ 1ರವರೆಗೂ ರಾಜ್ಯದ ಒಳನಾಡಿನಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪ್ರಕ್ರಿಯೆ ಆರಂಭವಾಗಿದೆ ಎಂದರು.
ತಮಿಳುನಾಡು ಮತ್ತು ಶ್ರೀಲಂಕಾ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ. ಇದರ ಪರೋಕ್ಷ ಪರಿಣಾಮದಿಂದ ರಾಜ್ಯದಲ್ಲೂ ಮೋಡಕವಿದ ವಾತಾವರಣ ಹಾಗೂ ಆಗ್ಗಾಗ್ಗೆ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಅ.22, 23ರಿಂದ ಮಳೆ ಪ್ರಮಾಣ ಹೆಚ್ಚಾಗಲಿದೆ. ಅ.24ರಿಂದ ನವೆಂಬರ್ 1ರವರೆಗೆ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಭಾಗದಲ್ಲಿ ಉತ್ತಮ ಮಳೆ ನಿರೀಕ್ಷಿಸಬಹುದು. ಶನಿವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದೆ ಎಂದು ಹೇಳಿದರು. ಹವಾ ಮುನ್ಸೂಚನೆ ಪ್ರಕಾರ ಮೋಡಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಪ್ರಕಾಶ್ ತಿಳಿಸಿದ್ದಾರೆ.

ಮಳೆ ಕೊರತೆ: ರಾಜ್ಯದ 23 ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಬಿತ್ತನೆ ಪ್ರಮಾಣದಲ್ಲಿ ತೀವ್ರ ಕುಂಠಿತವಾಗುತ್ತಿದೆ. ಬಹುತೇಕ ಹಿಂಗಾರು ಬೆಳೆಯನ್ನೇ ನೆಚ್ಚಿಕೊಂಡಿರುವ ಉತ್ತರ ಕರ್ನಾಟಕ ಭಾಗದ ರೈತರು ಮಳೆಗಾಗಿ ಆಕಾಶ ನೋಡುವಂತಾಗಿದೆ.
ಕಳೆದ ಜೂನ್ ನಿಂದ ಆರಂಭವಾಗಿದ್ದ ಮುಂಗಾರು ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡು ಅಕ್ಟೋಬರ್‌ನಿಂದಲೇ ಹಿಂಗಾರು ಅವಧಿ ಆರಂಭವಾಗಿದೆ. ಆದರೆ, ಅ.1ರಿಂದ 17ರವರೆಗೆ ರಾಜ್ಯಾದ್ಯಂತ ಶೇ.43ರಷ್ಟು ಮಳೆ ಕೊರತೆ ಉಂಟಾಗಿದೆ.
ಕರಾವಳಿ ಭಾಗದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬೀದರ್ ಮತ್ತು ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಕೋಲಾರ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ವಾಡಿಕೆಯಷ್ಟು ಮಳೆಯಾಗಿದ್ದು, ಉಳಿದ ಜಿಲ್ಲೆಗಳ ರೈತರು ಮಳೆಗಾಗಿ ಪರಿತಪಿಸುತ್ತಿದ್ದಾರೆ.
ಹಿಂಗಾರು ಅವಧಿಯ ಜೋಳ, ಕಡಲೆ, ಸೂರ್ಯಕಾಂತಿ, ಹತ್ತಿ, ರಾಗಿ, ಗೋಧಿ, ಸಜ್ಜೆ ಹೀಗೆ ಪ್ರಮುಖ ಬೆಳೆಗಳ ಬೀಜ ನಾಟಿಗೆ ಮಳೆ ಕೊರತೆ ತೀವ್ರವಾಗಿ ಕಾಡುತ್ತಿದೆ. ಯಾದಗಿರಿ, ಬೀದರ್, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ಇದುವರೆಗೆ ಹಿಂಗಾರು ಬಿತ್ತನೆ ಆರಂಭವಾಗಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications